Advertisement

ಮಳೆ ಲೆಕ್ಕಿಸದೇ ಮುಂದುವರಿದ ಜಿಇ ಕಾರ್ಮಿಕರ ಧರಣಿ

04:11 PM Sep 01, 2019 | Team Udayavani |

ಶಹಾಬಾದ: ನಗರದ ಬಹುರಾಷ್ಟ್ರೀಯ ಜನರಲ್ ಇಲೆಕ್ಟ್ರಿಕಲ್ (ಜಿಇ) ಕಾರ್ಖಾನೆಯನ್ನು ಪುನಃ ಪ್ರಾರಂಭಿಸಬೇಕು. ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿ ಕಾರ್ಖಾನೆ ಕಾರ್ಮಿಕ ವರ್ಗದವರಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ.

Advertisement

ಸುಮಾರು ಆರು ದಿನಗಳಿಂದ ನಡೆದ ಧರಣಿಯಲ್ಲಿ ಯಾವುದೇ ತೊಂದತೆ ಅನುಭವಿಸದ ಪ್ರತಿಭಟನಾಕರರಿಗೆ ಶುಕ್ರವಾರ ಜಿಟಿಜಿಟಿ ಮಳೆಯಾಗಿದ್ದು, ನಂತರ ಶನಿವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಎಡೆ ಬಿಡದೇ ಮಳೆಯಾಗಿದ್ದರಿಂದ ಟೆಂಟ್ ಸಂಪೂರ್ಣ ಒದ್ದೆಯಾಗಿ ಸೋರಿ, ಪ್ರತಿಭಟನಾಕಾರರು ತೀವ್ರ ತೊಂದರೆ ಅನುಭವಿಸಿದರು. ಆದರೂ ಅಲ್ಲಿಂದ ಕದಲದೇ ಯಾವುದೇ ಕಾರಣಕ್ಕೂ ಧರಣಿ ಸತ್ಯಾಗ್ರಹಕ್ಕೆ ಬಿಡುವುದಿಲ್ಲ ಎನ್ನುವ ಸಂದೇಶ ರವಾನಿಸಿದರು.

ಧರಣಿ ನಡೆದ ಸ್ಥಳಕ್ಕೆ ಈಗಾಗಲೇ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಬೇಟಿ ಮಾಡಿ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಎರಡು ದಿನ ಸಮಯ ಕೊಡಿ ಎಂದಿದ್ದರು. ಅಲ್ಲದೇ ಆರು ದಿನಗಳಾದರೂ ಯಾವುದೇ ಸ್ಪಂದನೆ ಬಾರದಿದ್ದಾಗ, ಜಿಲ್ಲಾ ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಶಾಸಕರ ಜತೆ ಮಾತನಾಡಿ, ಮುಖ್ಯಮಂತ್ರಿಗಳ ಸಭೆ ನಿಗದಿಪಡಿಸಿ ನಮ್ಮ ನಿಯೋಗದ ಜತೆ ತಾವು ತೆರಳಿ ಕಾರ್ಮಿಕರ ಸಮಸ್ಯೆ ಗಮನಕ್ಕೆ ತಂದರೆ, ಬಗೆಹರಿಯಬಹುದು ಎಂದು ತಿಳಿಸಿದ್ದರು. ಇದಕ್ಕೆ ಶಾಸಕರು ಒಪ್ಪಿಗೆ ನೀಡಿದ್ದಾರೆ.

ಕಾರ್ಮಿಕ ಮುಖಂಡ ಅಣ್ಣಾರಾವ್‌ ಎಂ.ಹಳ್ಳಿ, ದಾವೂದ್‌ ಹುಸೇನ್‌, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಮಲ್ಲಣ್ಣ ಹೊನಗುಂಟಾ, ಅಶೋಕ ಪೋತನಕರ್‌, ಲಕ್ಷ್ಮಣ ಜಾಧವ, ಮೊಹಮ್ಮದ್‌ ಹನೀಫ್‌, ನಿಂಗಣ್ಣ ಕಾರೋಳ್ಳಿ, ಅಬ್ದುಲ್ ಅಖೀಲ, ಅಬ್ದುಲ್ ಸತ್ತಾರ, ಶರಣು ಪಾಟೀಲ, ಪ್ರಭು ಪೂಜಾರಿ, ಬಿಜೆಪಿ ಮುಖಂಡರಾದ ನಿಂಗಣ್ಣ ಹುಳಗೋಳಕರ್‌, ನಾಗರಾಜ ಮೇಲಗಿರಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next