ಶಹಾಬಾದ: ವಿದ್ಯಾರ್ಥಿಗಳು ಕಲಿಕಾ ಮನೋಭಾವ ಇಟ್ಟುಕೊಂಡು ಹೆಚ್ಚು ವಿಷಯಗಳನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ ಎಂದು ತಹಶೀಲ್ದಾರ್ ಸುರೇಶ ವರ್ಮಾ ಹೇಳಿದರು.
ಗುರುವಾರ ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕಸಾಪ ಭಂಕೂರ ಘಟಕ ಹಾಗೂ ಸರಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ ಹೆಸರನ್ನು ತರಬೇಕು. ವಿದ್ಯೆ ಎನ್ನುವುದು ಯಾರೂ ಕದಿಯಲಾಗದ ಸಂಪತ್ತು. ಅದನ್ನು ಎಷ್ಟು ಗಳಿಸಿದರೂ ತೆರಿಗೆ ಕಟ್ಟಬೇಕಿಲ್ಲ. ಎಷ್ಟೇ ಖರ್ಚು ಮಾಡಿದರೂ ಖಾಲಿಯಾಗುವುದಿಲ್ಲ. ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು. ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮನೋನಿಗ್ರಹ ಅಗತ್ಯ. ಶ್ರದ್ಧೆ ಮತ್ತು ಏಕಾಗ್ರತೆಯಿಂದ ಜ್ಞಾನಾರ್ಜನೆ ಮಾಡಬೇಕು ಎಂದರು.
ಉನ್ನತ ಹುದ್ದೆ ಹೊಂದಿದ ಅಧಿಕಾರಿಗಳನ್ನು ನೋಡಿ ನಾವು ಅವರಂತೆ ಆಗಬಲ್ಲೆವು ಎನ್ನುವ ಆತ್ಮಬಲ ಬೆಳೆಸಿಕೊಂಡು, ಆ ಗುರಿ ತಲುಪಲು ಪ್ರಯತ್ನ ಪಡಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಕೇವಲ ಶಿಕ್ಷಕರಲ್ಲಿದೆ. ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ, ಜಾಗೃತಿಯಿಂದ ಅಭ್ಯಾಸ ಮಾಡುವುದರ ಜೊತೆಗೆ ಸರಿಯಾದ ನಿರ್ಧಾರ, ಗುರಿಯೊಂದಿಗೆ ಮುನ್ನಡೆಯಬೇಕೆಂದು ಹೇಳಿದರು.
ಚಿತ್ತಾಪುರ ತಾಲೂಕು ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಸೇಡಂ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನಿರಂತರ ಪರಿಶ್ರಮದಿಂದ ಗುರಿಯಡೆಗೆ ಸಾಗಿದಾಗ ಮಾತ್ರ ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ದತ್ತಪ್ಪ ಕೋಟನೂರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಭಂಕೂರ ಘಟಕದ ಅಧ್ಯಕ್ಷ ಪಿ.ಎಸ್.ಕೊಕಟನೂರ್, ಶಿಕ್ಷಕ ಮಲ್ಲಿನಾಥ ಪಾಟೀಲ ಮಾತನಾಡಿದರು. ಪ್ರಬುದ್ಧ ಚಿಂತನ ವೇದಿಕೆ ಅಧ್ಯಕ್ಷ ಭರತ್ ಧನ್ನಾ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಮರಲಿಂಗ ಯಾದಗಿರಿ, ಕಲಾವಿದರಾದ ರವಿ ದಾಚಂಪಲ್ಲಿ, ಖಾಜಾ ಪಟೇಲ್, ಶಾಂತಮಲ್ಲ ಶಿವಭೋ, ವಿಷ್ಣುತೀರ್ಥ ಆಲೂರ, ಎಂ.ಡಿ. ಜಕಾತೆ ಇತರರು ಇದ್ದರು.