ಶಹಾಬಾದ: ದೆಹಲಿಯ ನಿಜಾಮುದ್ದೀನ್ ದರ್ಗಾದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಬಂದ ನಗರದ ವ್ಯಕ್ತಿಯ ಪತ್ನಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕ ಮನೆ ಮಾಡಿದೆ.
ಜನ ಮನೆಯಿಂದ ಹೊರಗೆ ಬರಲು ಭಯಭೀತರಾಗಿದ್ದಾರೆ. ಮಡ್ಡಿ ರೈಲ್ವೆ ಗೇಟ್ ಬಡಾವಣೆ ಹೋಗುವ ರಸ್ತೆ ಹಾಗೂ ಹಳ್ಳದ ರಸ್ತೆ ಎರಡು ಕಡೆ ಬಡಾವಣೆಯ ಹೊರಗೆ ಹಾಗೂ ಒಳಗೆ ಹೋಗದಂತೆ ಸಂಪೂರ್ಣ ಬಂದ್ ಮಾಡಲಾಗಿದೆ. ಈಗಾಗಲೇ ದೆಹಲಿಯ ನಿಜಾಮುದ್ದೀನ್ ದರ್ಗಾದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ನೆಗೆಟಿವ್ ಬಂದಿದ್ದು, ಆತನ ಹೆಂಡತಿಗೆ ಪಾಸಿಟಿವ್ ಬಂದಿದೆ.
ಕುಟುಂಬ ಸದಸ್ಯರಾದ ವ್ಯಕ್ತಿಯ ಮಗ, ಹೆಂಡತಿ, ಇಬ್ಬರು ಮೊಮ್ಮಕ್ಕಳು ಹಾಗೂ ಇವರನ್ನು ತಪಾಸಣೆ ಮಾಡಿದ ಸ್ಥಳೀಯ ಖಾಸಗಿ ವೈದ್ಯರನ್ನು ಕಲಬುರಗಿ ಇಎಸ್‌ಐ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಲ್ಲದೇ ಇವರು ಯಾರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ಮಾಹಿತಿ ಕಲೆ ಹಾಕಿ ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಆದೇಶಿಸಲಾಗಿದೆ.
ಈ ಸಂಬಂಧ ಎಸಿ ರಮೇಶ ಕೋಲಾರ ಅವರು ಭೇಟಿ ನೀಡಿಮಾಹಿತಿ ಪಡೆದುಕೊಂಡು, ಯಾವುದೇ ಕಾರಣಕ್ಕೂ ಜನರನ್ನು ಹೊರಗೆ ಬಾರದಂತೆ ನೋಡಿಕೊಳ್ಳಿ. ಸೋಂಕಿತ ವ್ಯಕ್ತಿಯ ಜತೆ ಸಂಪರ್ಕ ಹೊಂದಿದ ಜನರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‌ನಲ್ಲಿ ಇರುವಂತೆ ನಿಗಾವಹಿಸಿ.ಯಾವುದೇ ಕಾರಣಕ್ಕೂ ಕೋವಿಡ್ 19 ವೈರಸ್ ಹರಡದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
ನಗರಸಭೆಯಿಂದ ಬಡಾವಣೆಯಲ್ಲಿ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ಅಗ್ನಿಶಾಮಕ ದಳದ ಟ್ಯಾಂಕರ್ ಮೂಲಕ ರಸ್ತೆಯ ಮೇಲೆಲ್ಲಾ ಔಷಧ ಸಿಂಪರಣೆ ಕಾರ್ಯ ಭರದಿಂದ ಸಾಗಿದೆ. ತಹಶೀಲ್ದಾರ್ ಸುರೇಶ ವರ್ಮಾ, ಪೌರಾಯುಕ್ತ ವೆಂಕಟೇಶ, ತಾಲೂಕು ಆರೋಗ್ಯ ಅಧಿ ಕಾರಿ ಸುರೇಶ ಮೇಕಿನ್, ಡಿವೈಎಸ್‌ಪಿ ವೆಂಕನಗೌಡ ಪಾಟೀಲ, ಪಿಐ ಅಮರೇಶ.ಬಿ, ಪಿಎಸ್‌ಐ ಮಹಾಂತೇಶ ಪಾಟೀಲ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ರಾಜೇಶ, ಶರಣು ಇತರರು ಇದ್ದರು.