ಶಹಾಬಾದ: ನಗರಸಭೆಯಲ್ಲಿ ಪೌರಾಯುಕ್ತ ವೆಂಕಟೇಶ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಮಂಡನೆ ಮತ್ತು ಸಾರ್ವಜನಿಕರ ಸಲಹೆ ಸೂಚನಾ ಸಭೆಯಲ್ಲಿ ಸುಮಾರು 438.82 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ನಗರಸಭೆಯ 2019-20ನೇ ಸಾಲಿನ ಆರಂಭಿಕ ಶುಲ್ಕ 437.17 ಲಕ್ಷ ರೂ., ನಿರೀಕ್ಷಿತ ಆದಾಯ 2306.05 ಲಕ್ಷ ರೂ. ಸೇರಿದಂತೆ ಸೇರಿದಂತೆ ಒಟ್ಟು 2743.22 ಲಕ್ಷ ರೂ. ಗಳ ಬಜೆಟ್‌ನಲ್ಲಿ ನಿರೀಕ್ಷಿತ ಖರ್ಚು 2304.40 ಲಕ್ಷ ರೂ. ಗಳಾಗಲಿದ್ದು, ಒಟ್ಟು 438.82 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ಬಜೆಟ್ ಮಂಡನೆ ವೇಳೆ ಮಾತನಾಡಿದ ನಗರಸಭೆ ಸದಸ್ಯ ರವಿ ರಾಠೊಡ, ನಗರದ ರೈಲ್ವೆ ನಿಲ್ದಾಣ ಆಚೆ ಇರುವ ಜನರಿಗೆ ತುರ್ತು ಸಂದರ್ಭದಲ್ಲಿ ಆರೋಗ್ಯ ಏರು ಪೇರಾದಾಗ ವಾಹನಗಳು ಹಳಿ ದಾಟುವ ಹಾಗಿಲ್ಲ. ಹೀಗಾಗಿ ಅನೇಕ ಬಾರಿ ಕೆಲವರು ಮೃತಪಟ್ಟಿದ್ದಾರೆ. ಆದ್ದರಿಂದ ಆ ಭಾಗದ ಜನರು ಮೇಲ್ಸೇತುವೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕಾಗಿ ಐದು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಆಗ ಪೌರಾಯುಕ್ತರು ಒಂದು ಕೋಟಿ ರೂ. ಅನುದಾನ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ ಮಾತನಾಡಿ, ನಗರಸಭೆಗೆ ಕೋಟ್ಯಂತರ ರೂ. ಅನುದಾನ ಬರುತ್ತಿದೆ. ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಒಂದೂ ಸಾರ್ವಜನಿಕ ಉದ್ಯಾನವನ್ನು ನಗರಸಭೆ ನಿರ್ಮಿಸಲು ಮುಂದಾಗಿಲ್ಲ. ಸಾರ್ವಜನಿಕರಿಗೆ ಹಾಗೂ ನಗರದ ಅಂದಕ್ಕೆ ಉದ್ಯಾನವನ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಮಾಜಿ ನಗರಸಭೆ ಸದಸ್ಯ ಅರುಣ ಪಟ್ಟಣಕರ್ ಮಾತನಾಡಿ, ನಗರಸಭೆ ಆಸ್ತಿ ಕರ, ಮುಟೇಷನ್, ಕಟ್ಟಡ ನಿರ್ಮಾಣ ಶುಲ್ಕ ಅಗತ್ಯಕ್ಕಿಂತ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ಹೊರೆಯಾಗುತ್ತಿದೆ. ಆದ್ದರಿಂದ ಯಾವುದಕ್ಕೂ ಕಾರಣ ಹೇಳದೇ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಶುಲ್ಕ ಕಡಿಮೆ ಮಾಡಬೇಕೆಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಿರಾದಾರ ಮಾತನಾಡಿ, ನಗರದಲ್ಲಿ ಸಾರ್ವಜನಿಕರಿಗೆ ಮೂತ್ರಾಲಯ ಹಾಗೂ ಶೌಚಾಲಯವಿಲ್ಲ. ಪ್ರತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತದೆ. ಅದಕ್ಕೆ ಒಪ್ಪಿಗೆ ಸೂಚಿಸಲಾಗುತ್ತದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಈ ಬಾರಿ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ನಗರಸಭೆ ಸದಸ್ಯರಾದ ಪಾರ್ವತಿ ಪವಾರ, ಭೀಮಣ್ಣ ಖಂಡ್ರೆ, ಎಸ್. ಕುಮಾರ, ಶಿವಕುಮಾರ ತಳವಾರ, ನಾಮದೇವ ಸಿಪ್ಪಿ ಇದ್ದರು. ಸಾಯಿಬಣ್ಣ ಸುಂಗಲಕರ್ ವರದಿ ಮಂಡಿಸಿದರು, ಶಂಕರ ಕಾಳೆ ವಂದಿಸಿದರು.