ಮಲ್ಲಿನಾಥ ಜಿ.ಪಾಟೀಲ
ಶಹಾಬಾದ: ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ಶೌಚಾಲಯವಿಲ್ಲದ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.27 ಮಡ್ಡಿ ನಂ.2 ಬಡಾವಣೆ ಪರಿಸ್ಥಿತಿ.
ಇಲ್ಲಿನ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅನೇಕ ಸಮಸ್ಯೆಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವಾರು ಬಾರಿ ಬಡಾವಣೆ ಜನರು ಮತ್ತು ಸ್ಥಳೀಯ ವಾರ್ಡ್ ಸದಸ್ಯೆ ದೂರು ನೀಡಿದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಬಡಾವಣೆ ಜನರ ಆರೋಪವಾಗಿದೆ.
ಹೂಳು ತುಂಬಿಕೊಂಡ ಚರಂಡಿ: ಚರಂಡಿಗಳಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದು, ಸೂಕ್ತ ಸ್ವಚ್ಛತೆಯಿಲ್ಲದೇ ಕೊಳಚೆ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಈಗಾಗಲೇ ಕಸಕಡ್ಡಿ, ಮಣ್ಣು, ಪ್ಲಾಸ್ಟಿಕ್‌ಗಳಿಂದ ತುಂಬಿ ಹೋಗಿದೆ. ನೀರಿನ ಪೈಪುಗಳು ಸೋರಿಕೆಯಾಗಿ ರಸ್ತೆಯ ಮೇಲೆ ನಿಲ್ಲುತ್ತವೆ. ಇದರಿಂದ ಸೊಳ್ಳೆಗಳ ಉತ್ಪಾದನೆಗೆ ಅವಕಾಶ ಕೊಟ್ಟಂತಾಗಿದೆ. ಅಲ್ಲದೇ ಸುತ್ತಮುತ್ತಲಿನ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿವೆ. ಮಲೇರಿಯಾ, ಟೈಫೈಡ್‌ದಂತ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಅಲ್ಲದೇ ಸೊಳ್ಳೆಗಳನ್ನು ಉತ್ಪಾದನೆ ಮಾಡುವ ಕೇಂದ್ರವಾಗಿ ಬಿಟ್ಟಿದೆ.
ಅಧಿಕಾರಿಗಳ ನಿರ್ಲಕ್ಷ : ನಗರಸಭೆ ಅಧಿಕಾರಿಗಳು ಚರಂಡಿಯಲ್ಲಿನ ಕಸ ತೆಗೆಸುವಲ್ಲಿ ನಿರ್ಲಕ್ಷ ವಹಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸಾರ್ವಜನಿಕರೂ ತಿಳಿಸಿದರೂ ಅ ಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಶ್ರೀಮಂತರು ವಾಸಿಸುವ ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ಸ್ವತ್ಛತೆ ಮಾಡಲಾಗುತ್ತದೆ. ಆದರೆ ವಾರ್ಡ್ ನಂ. 27 ರಲ್ಲಿ ತಿಂಗಳುಗಳೇ ಕಳೆದರೂ ಸ್ವಚ್ಛತೆಗೆ ಬಂದಿಲ್ಲ.