ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ದೂರದ ಸಮುದ್ರ ಮಧ್ಯದಲ್ಲಿ ವಿಲಾಸಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆದಿದೆ. ಈ ಬಗ್ಗೆ ಸುಳಿವು ಸಿಕ್ಕ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ಅಧಿಕಾರಿಗಳು ಹತ್ತು ಮಂದಿಯನ್ನು ಶನಿವಾರ ರಾತ್ರಿ ಬಂಧಿಸಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪುತ್ರ ಕೂಡಾ ಈ ರೇವ್ ಪಾರ್ಟಿಯಲ್ಲಿದ್ದ ಎನ್ನಲಾಗಿದೆ. ಆರ್ಯನ್ ಖಾನ್ ಸೇರಿ 10 ಮಂದಿಯನ್ನು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರೂ ಹೈ ಪ್ರೊಫೈಲ್ ವ್ಯಕ್ತಿಗಳು ಎನ್ನಲಾಗಿದೆ.
ಎರಡು ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಕಾರ್ಡೆಲಿಯಾ ಕ್ರೂಸ್ ಲೈನರ್‌ನ “ದಿ ಎಂಪ್ರಸ್’ ಹಡಗಿನೊಳಗೆ ಡ್ರಗ್ಸ್ ಪಾರ್ಟಿ ನಡೆಸಲಾಗುತ್ತಿತ್ತು. ಈ ಹಡಗು ಮುಂಬೈನಿಂದ ಗೋವಾಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಸಮುದ್ರ ತೀರ ಬಿಟ್ಟು ಸ್ವಲ್ಪ ಸಮಯದಲ್ಲೇ ಪಾರ್ಟಿ ಆರಂಭಿಸಲಾಗಿದೆ.
ಇದನ್ನೂ ಓದಿ:ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ: ಬಾಲಿವುಡ್ ಸೂಪರ್ ಸ್ಟಾರ್ ಪುತ್ರ ಸೇರಿ 10 ಜನರ ಬಂಧನ
ಎನ್‌ಸಿಬಿಯ ವಲಯ ನಿರ್ದೇಶಕರಾದ ಸಮೀರ್ ವನ್ಪೆಡೆ ನೇತೃತ್ವದ ತಂಡ ಹಡಗನ್ನೇರಿ ದಾಳಿ ನಡೆಸಿದೆ. ಪಾರ್ಟಿಯ ಸ್ಥಳದಿಂದ ಮಾದಕ ವಸ್ತುಗಳಾದ ಕೊಕೇನ್, ಹಶೀಶ್, ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನೆಲ್ಲ ಶೀಘ್ರದಲ್ಲಿಯೇ ಮುಂಬೈಗೆ ಕರೆ ತರಲಾಗುತ್ತದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಕಳೆದ ವರ್ಷ ಬೆಳಕಿಗೆ ಬಂದಿದ್ದ ಬಾಲಿವುಡ್ ನಟ ಸುಶಾಂತ್ ರಜಪೂತ್ ಸಾವಿನಲ್ಲೂ ಡ್ರಗ್ಸ್ ಜಾಲ ಪ್ರಮುಖ ಪಾತ್ರ ವಹಿಸಿದ್ದ ಬಗ್ಗೆ ಶಂಕೆಗಳು ಎದ್ದಿದ್ದವು. ಆ ಸಂದರ್ಭ ದಲ್ಲಿಯೂ ಕೂಡ ಎನ್‌ಸಿಬಿ ಅಧಿಕಾರಿ ಗಳು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಹೀಗಾಗಿ, ಮತ್ತೂಮ್ಮೆ ಬಾಲಿವುಡ್ ನಲ್ಲಿ ಡ್ರಗ್ಸ್ ಜಾಲ ಬಲವಾಗಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿದೆ.