Advertisement

ಬಿಜೆಪಿ ಸಾಧನೆ ಕುರಿತು ಶಾಗೆ ವರದಿ

01:22 AM May 25, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ ಕೆಲ ನಾಯಕರ ಬಗ್ಗೆ ವರಿಷ್ಠರಿಗೆ ಮಾಹಿತಿ ರವಾನೆಯಾಗಿದೆ ಎನ್ನಲಾಗಿದೆ.

Advertisement

ಸಾಮಾನ್ಯವಾಗಿ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಪ್ರತಿ ರಾಜ್ಯದಲ್ಲಿ ಉತ್ತಮವಾಗಿ ಚುನಾವಣಾ ಚಟುವಟಿಕೆಗಳನ್ನು ನಿರ್ವಹಿಸಿದವರು, ನಿರೀಕ್ಷಿತ ಫ‌ಲಿತಾಂಶ ತಂದು ಕೊಟ್ಟ ಹೊಸ ನಾಯಕರ ಕುರಿತಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ತಂಡ ಮಾಹಿತಿ ಪಡೆಯುತ್ತದೆ.

ಅದರಂತೆ ಈ ಬಾರಿಯ ಚುನಾವಣೆಯಲ್ಲಿ ತೆಲಂಗಾಣ ಪ್ರಭಾರಿಯಾಗಿದ್ದ ಅರವಿಂದ ಲಿಂಬಾವಳಿ, ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಭಾರಿಯಾಗಿದ್ದ ಎನ್‌.ರವಿಕುಮಾರ್‌ ಅವರ ಬಗ್ಗೆ ಕೆಲ ಮಾಹಿತಿ ರವಾನೆಯಾಗಿದೆ. ಚಿಂಚೋಳಿ ಕ್ಷೇತ್ರದಲ್ಲಿ ಸಾಕಷ್ಟು ಶ್ರಮ ವಹಿಸಿದ ಮಾಜಿ ಸಚಿವ ವಿ.ಸೋಮಣ್ಣ ಅವರ ಕುರಿತೂ ಸಂದೇಶ ಕಳುಹಿಸಲಾಗಿದೆ. ಜತೆಗೆ ಕೆಲ ನಾಯಕರ ವೈಫ‌ಲ್ಯದ ಬಗ್ಗೆಯೂ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಧರ್ಮಸಿಂಗ್‌-ಖರ್ಗೆ ಸೋಲಿನಲ್ಲಿ ಮಹತ್ವದ ಪಾತ್ರ: ಸೋಲಿಲ್ಲದ ಸರದಾರರೆಂದೇ ಹೆಸರಾಗಿದ್ದ, ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿಯ ಡಾ.ಉಮೇಶ್‌ ಜಾಧವ್‌ ಪರಭಾವಗೊಳಿಸುವಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರ ಪಾತ್ರವೂ ಮಹತ್ತರವಾಗಿದೆ.

ಕಲಬುರಗಿ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಮುದಾಯವಾರು ಗುಂಪುಗಳನ್ನು ಗುರುತಿಸಿ, ಅದಕ್ಕೆ ಪೂರಕವಾಗಿ ಬಿಜೆಪಿಯಲ್ಲಿದ್ದ ನಾನಾ ಸಮುದಾಯದ ನಾಯಕರಾದ ಬಾಬುರಾವ್‌ ಚಿಂಚನಸೂರ್‌, ಮಾಲೀಕಯ್ಯ ಗುತ್ತೇದಾರ್‌, ಡಾ.ಎ.ಬಿ.ಮಾಲಕರೆಡ್ಡಿ, ಡಾ.ಉಮೇಶ್‌ ಜಾಧವ್‌ ಅವರನ್ನು ನಿಯೋಜಿಸುವುದರ ಹಿಂದೆ ಸೋಷಿಯಲ್‌ ಎಂಜಿನಿಯರಿಂಗ್‌ ಕೆಲಸ ಮಾಡಿದೆ.

Advertisement

ಚಿಂಚೋಳಿ ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಕ್ಷೇತ್ರದಲ್ಲೇ ಬೀಡು ಬಿಟ್ಟು ಶ್ರಮಿಸಿದ ಮಾಜಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಸೋಷಿಯಲ್‌ ಎಂಜಿನಿಯರಿಂಗ್‌ ಕೂಡ ಫ‌ಲ ನೀಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಹಿಂದೆ ಎನ್‌.ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿಇಟಿಗೆ ಸಂಬಂಧಪಟ್ಟಂತೆ ನಡೆದ ಹೋರಾಟದಲ್ಲಿ ಖಾಸಗಿ ಆಡಳಿತ ಮಂಡಳಿ ಪರವಾಗಿ ನಿರ್ಧಾರ ಕೈಗೊಳ್ಳಲಾಗಿತ್ತು.

ಆಗ ಎಬಿವಿಪಿ ರಾಜ್ಯ ಪದಾಧಿಕಾರಿಯಾಗಿದ್ದ ಎನ್‌.ರವಿಕುಮಾರ್‌ ಹಾಗೂ ಧರ್ಮಸಿಂಗ್‌ ಅವರ ನಡುವೆ ವಾಗ್ವಾದ ನಡೆದಿತ್ತು. 2008ರಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಧರ್ಮಸಿಂಗ್‌ ಅವರು ಸ್ಪರ್ಧಿಸಿದ್ದಾಗ ರವಿಕುಮಾರ್‌ ಹಲವು ದಿನ ಕ್ಷೇತ್ರದಲ್ಲಿದ್ದುಕೊಂಡು ಚುನಾವಣಾ ತಂತ್ರಗಾರಿಕೆ ಹೆಣೆದಿದ್ದರು.

ಅವರ ಕ್ಷೇತ್ರದಲ್ಲಿದ್ದ ಸಮಸ್ಯೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಆ ಚುನಾವಣೆಯಲ್ಲಿ ಧರ್ಮಸಿಂಗ್‌ ಅವರು ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ್‌ ವಿರುದ್ಧ ಕೇವಲ 52 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನಲ್ಲೂ ರವಿಕುಮಾರ್‌ ಪಾತ್ರವಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next