ಅಮೇಠಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀವ್ ಗಾಂಧಿ ಟ್ರಸ್ಟ್ ಹೆಸರಲ್ಲಿ ಭೂ ಕಬಳಿಕೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಉನ್ನತ ನಾಯಕರಿಬ್ಬರ ವಾಗ್ಧಾಳಿಯನ್ನು ಆರಂಭಿಸಿತು.
“ಈ ಮೊದಲು ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಭೂಕಬಳಿಕೆಗೆ ಯತ್ನಿಸಿದ್ದರು. ಈಗ ಸೋನಿಯಾ ಪುತ್ರ ರಾಹುಲ್ ಗಾಂಧಿಯೇ ಖುದ್ದು ಭೂಕಬಳಿಕೆಗೆ ಯತ್ನಿಸುತ್ತಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಅಂತಹ ಕೃತ್ಯ ಅಸಾಧ್ಯ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಉತ್ತರ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ವೇಳೆಯೇ ನಾವು ಅಮೇಠಿಯನ್ನೂ ಅಭಿವೃದ್ಧಿಪಡಿಸುವೆವು ಎಂದು ಯೋಗಿ ಹೇಳಿದರು.
ಅಮೇಠಿ ಕ್ಷೇತ್ರ ಪರ್ಯಾಪ್ತ ವಿದ್ಯುತ್ ಮತ್ತು ನೀರು ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಪಡೆಯುವಂತೆ ಕೇಂದ್ರದಲ್ಲಿ ಮೋದಿ ಸರಕಾರ ನೋಡಿಕೊಳ್ಳುತ್ತಿದೆ ಎಂದು ಯೋಗಿ ಹೇಳಿದರು.
ರಾಹುಲ್ ಗಾಂಧಿ ವಿರುದ್ಧದ ವಾಗ್ಧಾಳಿಯನ್ನು ಮುಂದುವರಿಸಿದ ಅಮಿತ್ ಶಾ, “ನಾನು ಶೆಹಜಾದಾ ರಾಹುಲ್ ಗಾಂಧಿಯನ್ನು ಪ್ರಶ್ನಿಸಬಯಸುತ್ತೇನೆ; ನಿಮ್ಮ ಕುಟುಂಬವನ್ನು ಅಮೇಠಿ ಕ್ಷೇತ್ರ ಮೂರು ದಶಕಗಳ ಕಾಲ ಚುನಾಯಿಸಿತು; ಆದರೆ ನೀವು ಈ ಕ್ಷೇತ್ರಕ್ಕೆ ಮಾಡಿರುವುದಾದರೂ ಏನು ? ನನ್ನ 30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಚುನಾಯಿತ ಪ್ರತಿನಿಧಿಯೋರ್ವ ಎಂದೂ ತನ್ನ ಕ್ಷೇತ್ರಕ್ಕೆ ಭೇಟಿ ನೀಡದಿರುವುದನ್ನು ನಾನು ಕಂಡಿಲ್ಲ; ಆದರೆ ಇಲ್ಲಿ ಚುನಾಯಿತರಾಗದ ಅಭ್ಯರ್ಥಿ ಆಗೀಗ ಎಂಬಂತೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ’ ಎಂದು ಗುಡುಗಿದರು.
“ದೇಶಾಭಿವೃದ್ಧಿಯ ದಿಶೆಯಲ್ಲಿ ಈ ವರೆಗೆ ಎರಡು ಮಾದರಿಗಳನ್ನು ಮಾತ್ರವೇ ದೇಶ ಕಂಡಿದೆ – ಅದೆಂದರೆ ಒಂದು ಗಾಂಧಿ-ನೆಹರೂ ಮಾದರಿ; ಇನ್ನೊಂದು ಮೋದಿ ಮಾದರಿ. ಮುಂದಿನ ಬಾರಿ ಯೋಗಿ ಆದಿತ್ಯನಾಥ್ ಅವರು ನಿಮ್ಮ (ಜನರ) ಓಟು ಕೇಳಲು ಬಂದಾಗ ಉತ್ತರ ಪ್ರದೇಶವು ಗುಜರಾತ್‌ನಷ್ಟೇ ಅಭಿವೃದ್ಧಿ ಹೊಂದಿರವುದನ್ನು ನೀವು ಕಾಣುವಿರಿ’ ಎಂದು ಅಮಿತ್ ಶಾ ಹೇಳಿದರು.