ಲಕ್ನೋ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಉತ್ತರ ಪ್ರದೇಶದ ಸಂಭಾಲ್ ಸಂಸದ ಶಫೀಕರ್ ರಹಮಾನ್ ಬಾರ್ಕ್(94) ಮಂಗಳವಾರ(ಫೆ.27 ರಂದು) ನಿಧನ ಹೊಂದಿದರು.
ಭಾರತದ ಅತ್ಯಂತ ಹಿರಿಯ ಸಂಸದರಾಗಿದ್ದ ಶಫೀಕರ್ ರೆಹಮಾನ್ ಬಾರ್ಕ್ ಅವರು ಮೂತ್ರಪಿಂಡದ ಸೋಂಕಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊರಾದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
ಜುಲೈ 11, 1930 ರಂದು ಜನಿಸಿದ ಬಾರ್ಕ್, ಚೌಧರಿ ಚರಣ್ ಸಿಂಗ್ ಅವರೊಂದಿಗೆ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಅಂದು ದೇಶಾದ್ಯಂತ ಮುಸ್ಲಿಂ ಸಮುದಾಯದ ಪರವಾಗಿ ಧ್ವನಿ ಎತ್ತಿದ್ದರು.
ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯರೂ ಆಗಿದ್ದರು. ಐದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಮುರಾದಾಬಾದ್ ಲೋಕಸಭಾ ಸ್ಥಾನವನ್ನು ಮೂರು ಬಾರಿ (1996, 1998, ಮತ್ತು 2004) ಮತ್ತು ಸಂಭಾಲ್ ಲೋಕಸಭಾ ಸ್ಥಾನವನ್ನು ಎರಡು ಬಾರಿ (2009 ಮತ್ತು 2019) ಗೆದಿದ್ದರು.
ಉತ್ತರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ನಾಲ್ಕು ಬಾರಿ ಸಂಭಾಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2022 ರಲ್ಲಿ, ಅವರು ತಮ್ಮ ಮೊಮ್ಮಗ ಜಿಯಾವುರ್ ರೆಹಮಾನ್ ಬಾರ್ಕ್ ಅವರನ್ನು ಮುರಾದಾಬಾದ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಮಾಡಿದ್ದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾರ್ಕ್ ಅವರ ರಾಜಕೀಯ ಸೇವೆಗಾಗಿ ಅವರನ್ನು ಶ್ಲಾಘಿಸಿ ಮಾತಾನಾಡಿದ್ದರು.
ಶಫೀಕರ್ ರಹಮಾನ್ ಬಾರ್ಕ್ ಅವರ ನಿಧನಕ್ಕೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.