ಬ್ರಿಸ್ಟಲ್: ಏಕೈಕ ಟೆಸ್ಟ್ ಪಂದ್ಯದ ಬಳಿಕ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ಕ್ರಿಕೆಟ್ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗುತ್ತಿದೆ. ಇಂದು ಬ್ರಿಸ್ಟಲ್ ನ ಕೌಂಟಿ ಗ್ರೌಂಡ್ ನಲ್ಲಿ ಮೊದಲ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ನಡೆಸಲು ನಿರ್ಣಯಿಸಿದೆ.
ಆತಿಥೇಯ ಹಾಗೂ ವಿಶ್ವ ಚಾಂಪಿಯನ್ ಖ್ಯಾತಿಯ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಅನೇಕ ನಿರೀಕ್ಷೆ ಹಾಗೂ ಕುತೂಹಲವನ್ನು ಹುಟ್ಟುಹಾಕಿದೆ. ಭಾರತ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಸೋತ ಕಾರಣ ಸೇಡಿನ ಅವಕಾಶವೂ ಇದೆ.
17 ವರ್ಷದ ಶಫಾಲಿ ವರ್ಮಾ ಇಂದು ಏಕದಿನ ಮಾದರಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕಿ ಮಿಥಾಲಿ ರಾಜ್ ಅವರು ಶಫಾಲಿಗೆ ಕ್ಯಾಪ್ ನೀಡಿದರು. 96 ಹಾಗೂ 63 ರನ್ ಬಾರಿಸಿ ಇಂಗ್ಲೆಂಡ್ ಎದುರಿನ ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ತನ್ನ ಬ್ಯಾಟಿಂಗ್ ತಾಕತ್ತು ಏನು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತಾನು ಎಲ್ಲ ಮಾದರಿಯ ಪಂದ್ಯಗಳಿಗೂ ಸೈ ಎಂದು ಸಾರಿದ್ದಾರೆ.
ತಂಡಗಳು
ಭಾರತ: ಸ್ಮೃತಿ ಮಂದಾನ, ಶಫಾಲಿ ವರ್ಮಾ, ಪುನಮ್ ರಾವತ್, ಮಿಥಾಲಿ ರಾಜ್ (ನಾ), ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿ.ಕೀ), ಶಿಖಾ ಪಾಂಡೆ, ಜೂಲಾನ್ ಗೋಸ್ವಾಮಿ, ಪೂಜಾ ವಸ್ತ್ರಕರ್, ಏಕ್ತಾ ಬಿಶ್ತ್
ಇಂಗ್ಲೆಂಡ್ : ಲಾರೆನ್ ವಿನ್ಫೀಲ್ಡ್ ಹಿಲ್, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್ (ನಾ), ನಟಾಲಿಯಾ ಸ್ಕಿವರ್, ಆಮಿ ಎಲ್ಲೆನ್ ಜೋನ್ಸ್ (ವಿ.ಕೀ), ಸೋಫಿಯಾ ಡಂಕ್ಲೆ, ಕ್ಯಾಥರೀನ್ ಬ್ರಂಟ್, ಸಾರಾ ಗ್ಲೆನ್, ಸೋಫಿ ಎಕ್ಲೆಸ್ಟೋನ್, ಅನ್ಯಾ ಶ್ರಬ್ಸೋಲ್, ಕೇಟ್ ಕ್ರಾಸ್.