ವಿನೋದ್‌ಪ್ರಭಾಕರ್ ಸಿನಿಮಾ ಅಂದರೆ, ಅಲ್ಲಿ ದರ್ಶನ್ ಹಾಜರಿ ಇದ್ದೇ ಇರುತ್ತೆ. ಹೊಸ ಚಿತ್ರದ ಮುಹೂರ್ತವಿರಲಿ, ಟ್ರೇಲರ್, ಟೀಸರ್, ಆಡಿಯೋ ಹೀಗೆ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿನ ವೇದಿಕೆ ಮೇಲೆ ದರ್ಶನ್ ಅವರು ವಿನೋದ್ ಪ್ರಭಾಕರ್ ಪಕ್ಕ ನಿಂತಿರುತ್ತಾರೆ. ಅದು “ಶಾಡೋ’ ಚಿತ್ರದಲ್ಲೂ ಕಂಡುಬಂತು. ವಿನೋದ್ ಪ್ರಭಾಕರ್ ಸದ್ದಿಲ್ಲದೆಯೇ ಮುಗಿಸಿದ ಚಿತ್ರವಿದು.
ಚಿತ್ರದ ಟೀಸರ್ ಬಿಡುಗಡೆಗೆ ಬಂದಿದ್ದ ದರ್ಶನ್, ವಿನೋದ್‌ಪ್ರಭಾಕರ್ ಅವರ ಬಗ್ಗೆ ಸಾಕಷ್ಟು ಗುಣಗಾನ ಮಾಡಿದರೆ, ದರ್ಶನ್ ಬಗ್ಗೆ ವಿನೋದ್ ಅಷ್ಟೇ ಗುಣಗಾನ ಮಾಡಿದರು. ಇಬ್ಬರು ಪರಸ್ಪರ ಗುಣಗಾನ ಮಾಡಿದ್ದು, ನೆರೆದ ಅಭಿಮಾನಿ ಸಮೂಹಕ್ಕೊಂದು ಹಬ್ಬವಾಗಿತ್ತು. ಟೀಸರ್ ಬಿಡುಗಡೆ ಮಾಡಿದ ದರ್ಶನ್ ಹೇಳಿದ್ದಿಷ್ಟು. “ನನಗೆ ಟೈಗರ್ ಕಂಡರೆ ತುಂಬಾ ಪ್ರೀತಿ. ಅವರ ಯಾವುದೇ ಕಾರ್ಯಕ್ರಮವಿರಲಿ, ಅಲ್ಲಿ ನನ್ನ ಹಾಜರಿ ಖಂಡಿತ ಇರುತ್ತದೆ.
ಅವರು ಹಿಂದೆ ಎಷ್ಟೊಂದು ಕಷ್ಟ ಪಟ್ಟಿದ್ದರು ಎಂಬುದು ನನಗೆ ಗೊತ್ತು. ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ವಿನೋದ್ ಯಾವುದೇ ಚಿತ್ರವಿದ್ದರೂ, ಎಂಥದ್ದೇ ಪಾತ್ರ ಸಿಕ್ಕರೂ ಅದಕ್ಕೆ ಶ್ರದ್ಧೆ ಮತ್ತು ಶ್ರಮವಹಿಸುತ್ತಾರೆ. ಅವರ ದೇಹ ಮಾತ್ರವಲ್ಲ, ವಾಯ್ಸ ಕೂಡ “ರಗಡ್’ ಆಗಿದೆ. ಯಾವುದೇ ಫೋನ್ ಕಾಲ್ ಬಂದರೂ, ಆಮೇಲೆ ಮಾತಾಡಿದರಾಯಿತು ಎನ್ನುವ ಮನಸ್ಥಿತಿ ನನ್ನದು. ಆದರೆ, ವಿನೋದ್ ಫೋನ್ ಬಂದರೆ, ತಕ್ಷಣವೇ ಮೆಸೇಜ್ ಮಾಡಿ ಉತ್ತರಿಸುತ್ತೇನೆ.
ಅಂದಹಾಗೆ, “ಶಾಡೋ’ ಎಲ್ಲರಿಗೂ ತಲುಪಲಿ. ಗೆಲುವು ಕೊಡಲಿ’ ಎಂದು ಹಾರೈಸಿದರು ದರ್ಶನ್. ವಿನೋದ್ ಪ್ರಭಾಕರ್ ಕೂಡ, ಅಂದು ದರ್ಶನ್ ಆಗಮನ ಕುರಿತು ಸಾಕಷ್ಟು ಮಾತನಾಡಿದರು. “ಗೆಳೆತನಕ್ಕೆ ಇನ್ನೊಂದು ಅರ್ಥ ದರ್ಶನ್. ಫ್ರೆಂಡ್‌ಶಿಪ್ ಅಂದರೆ, ಸದಾ ಮುಂದೆ ಇರುತ್ತಾರೆ. ನಾನು ಖನ್ನತೆಯಲ್ಲಿದ್ದಾಗ, ನಿನ್ನಲ್ಲಿ ಪ್ರತಿಭೆ ಇದೆ. ಅದನ್ನು ಸರಿಯಾಗಿ ಬಳಸಿಕೋ ಅಂತ ಧೈರ್ಯ ತುಂಬಿದವರು. ನಾನು ಎಲ್ಲೇ ಇದ್ದರೂ, ತಿರುಗಿ ನಿಂತರೆ ನೀನು ಕಾಣಬೇಕು ಅಂತ ಹೇಳುತ್ತಾರೆ.
ನನ್ನ ಸಿನಿಮಾದ ಟೀಸರ್ ಬಿಡುಗಡೆಗೆ ಬನ್ನಿ ಅಂದಿದ್ದಕ್ಕೆ ಒಪ್ಪಿ, ತಮ್ಮೆಲ್ಲಾ ಒತ್ತಡದ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಬಂದಿದ್ದಾರೆ’ ಅಂತ ಹೇಳಿಕೊಂಡರು ವಿನೋದ್. ಇನ್ನು, ಈ ಹಿಂದೆ ಕೆಲ ಚಿತ್ರಗಳಿಗೆ ಡಬ್ಬಿಂಗ್ ಮಾಡಲು ಹದಿನೈದು ದಿನ ಸಮಯ ಪಡೆಯುತ್ತಿದ್ದೆ. ವಾಯ್ಸ ಸರಿಯಾಗಿರಲಿಲ್ಲ. ಅದಕ್ಕೆ ಚಿಕಿತ್ಸೆ ಪಡೆದ ಬಳಿಕ ಎರಡು-ಮೂರು ದಿನಗಳಲ್ಲೇ ಡಬ್ಬಿಂಗ್ ಮುಗಿಸುತ್ತಿದ್ದೇನೆ. “ಶಾಡೋ’ ಅಭಿಮಾನಿಗಳಿಗೆ ಖುಷಿ ಕೊಡುತ್ತೆ. ಅವರನ್ನು ಖುಷಿಪಡಿಸುವುದಷ್ಟೇ ನನ್ನ ಕೆಲಸ’ ಎಂಬುದು ವಿನೋದ್ ಮಾತು.
ನಿರ್ದೇಶಕ ರವಿಗೌಡ ಅವರಿಗೆ ಇದು ಮೊದಲ ಚಿತ್ರ. ಹಾಗಂತ ಅನುಭವ ಇಲ್ಲವೆಂದಲ್ಲ, ತೆಲುಗು ನಿರ್ದೇಶಕ ಪೂರಿಜಗನ್ನಾಥ್ ಅವರ ಶಿಷ್ಯ. “ಶಾಡೋ’ ಟೀಸರ್ ನೋಡಿದಾಗ, ಮಾಸ್ ಅಂಶಗಳೇ ಹೆಚ್ಚು ತುಂಬಿರುವುದು ಗೊತ್ತಾಗುತ್ತೆ. ಪಕ್ಕಾ ಮಾಸ್ ಎಂಟರ್‌ಟೈನ್‌ಮೆಂಟ್ ಚಿತ್ರ ಇದಾಗಿದ್ದು, ಎಲ್ಲಾ ವರ್ಗಕ್ಕೆ ಇಷ್ಟ ಆಗೋ ಸಿನಿಮಾ ಅಂದರು ನಿರ್ದೇಶಕರು. ನಿರ್ಮಾಪಕ ಚಕ್ರವರ್ತಿ, ಶರತ್‌ಲೋಹಿತಾಶ್ವ, ಲೋಕೇಶ್, ರಾಮ್‌ನಾರಾಯಣ್ ಸೇರಿದಂತೆ ಅನೇಕರು “ಶಾಡೋ’ ಬಗ್ಗೆ ಹೊಗಳಿದರು.