Advertisement

ಪ್ರವಾಹದ ಬೆನ್ನಲ್ಲೇ ಬರದ ಛಾಯೆ

10:02 AM Oct 08, 2019 | Sriram |

ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದು ಅರ್ಧಕ್ಕೂ ಹೆಚ್ಚು ರಾಜ್ಯ ಮುಳುಗಿ ಜನರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಕೆಲವೆಡೆ ಬರ ಪರಿಸ್ಥಿತಿ ಇದ್ದು, ರಾಜ್ಯ ಸರಕಾರಕ್ಕೆ ಬರ ತಾಲೂಕುಗಳ ಆಯ್ಕೆಯ ಸವಾಲು ಎದುರಾಗಿದೆ.

Advertisement

ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಬಂದು ಸುಮಾರು 38 ಸಾವಿರ ಕೋಟಿ ರೂಪಾಯಿ ಆಸ್ತಿ, ಪಾಸ್ತಿ ಹಾನಿಯಾಗಿದೆ ಎಂದು ರಾಜ್ಯ ಸರಕಾರ ಅಧಿಕೃತವಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗ ಮುಂಗಾರು ಹಂಗಾಮಿನ ಅವಧಿ ಮುಕ್ತಾಯವಾಗಿದ್ದು ರಾಜ್ಯದ ಮಳೆಯ ಕೊರತೆ ಪ್ರಮಾಣ ಆಧರಿಸಿ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಬೇಕಿದೆ.

ಈ ಕುರಿತಂತೆ ಅ. 9ರಂದು ಕಂದಾಯ ಸಚಿವ ಆರ್‌. ಅಶೋಕ್‌ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ ಪರಿಹಾರ ಕುರಿತ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ರಾಜ್ಯ ದಲ್ಲಿ ಮುಂಗಾರು ಹಂಗಾಮಿನಲ್ಲಿ ಬರ ಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಬರ ಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿ, ಜಾನು ವಾರುಗಳಿಗೆ ಮೇವಿನ ಕೊರತೆ, ಗೋಶಾಲೆಗಳ ಸ್ಥಾಪನೆ, ಕುಡಿಯುವ ನೀರಿನ ಸಮಸ್ಯೆ ಕುರಿತು ಕೇಂದ್ರ ಸರಕಾರಕ್ಕೆ ಬರದಿಂದ ಆಗಿರುವ ನಷ್ಟದ ಪಟ್ಟಿ ಮಾಡಿ ಅಕ್ಟೋಬರ್‌ ಅಂತ್ಯದೊಳಗೆ ಬರ ಪರಿಹಾರ ನೀಡುವಂತೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಜೂ.1ರಿಂದ ಸೆ. 30ರ ವರೆಗೆ ಮುಂಗಾರು ಮಳೆ ಹಂಗಾಮು ಅವಧಿ ನಿಗದಿಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ. 23 ಮಳೆ ಪ್ರಮಾಣ ಹೆಚ್ಚಾಗಿದೆ.

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 840.7 ಸೆಂ.ಮೀ. ವಾಡಿಕೆ ಮಳೆಯಾಗುತ್ತದೆ. ಆದರೆ ಈ ವರ್ಷ 1032.1 ಮಿ.ಮೀ. ಮಳೆಯಾಗಿದೆ. ಆದರೆ ಉತ್ತರ ಕರ್ನಾಟಕದ ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದರೂ ಮಳೆ ಪ್ರಮಾಣ ಕಡಿಮೆಯಾಗಿದ್ದು ಜನರು ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

Advertisement

ಆಯ್ಕೆ ಗೊಂದಲ
ಈಗಾಗಲೇ ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ ಮಾಡಿರುವು ದರಿಂದ ಅದೇ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ದಕ್ಷಿಣ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಬರಗಾಲ ಪರಿಸ್ಥಿತಿ ಎದುರಿಸುತ್ತಿವೆ. ರಾಜ್ಯದ ಹೊಸ ತಾಲೂಕುಗಳ ಲೆಕ್ಕಾಚಾರದಲ್ಲಿ ಬರ ಪೀಡಿತ ತಾಲೂಕುಗಳ ಸಂಖ್ಯೆ 100 ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅ. 9ರಂದು ನಡೆಯುವ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯ ಸರಕಾರ ಈ ಕುರಿತು ಅಧಿಕೃತ ತೀರ್ಮಾನ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next