Advertisement

ಜಿಲ್ಲಾದ್ಯಂತ ಬರದ ಛಾಯೆ: ಒಣಗಿದ ಬೆಳೆ

07:27 AM Feb 18, 2019 | |

ದೇವನಹಳ್ಳಿ: ಕಳೆದ ವರ್ಷ ಮಳೆ ಸರಿಯಾದ ಸಮಯಕ್ಕೆ ಬಾರದ ಕಾರಣ ಜಿಲ್ಲೆಯ ಜನರನ್ನು ಬರಗಾಲ ಸತತವಾಗಿ ಕಾಡುತ್ತಿದೆ. ಯಾವುದೇ ನದಿ, ನಾಲೆಗಳಿಲ್ಲದ ಜಿಲ್ಲೆ ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿರುವುದರಿಂದ ಎಲ್ಲೆಡೆ ಬರದ ಛಾಯೆ ಕಾಣುತ್ತಿದೆ. 

Advertisement

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳು ಬರಗಾಲ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ. ಬೇಸಿಗೆ ಪ್ರಾರಂಭದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮುಂದಿನ 3.5 ತಿಂಗಳ ಬೇಸಿಗೆಯಲ್ಲಿ ಜನರು ಪರಿತಪಿಸುವ ಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಭೀತಿ ನಿರ್ಮಾಣವಾಗಿದೆ. ಜಿಲ್ಲೆಯ 15 ಗ್ರಾಮಗಳಲ್ಲಿ ಹಾಗೂ ವಿಜಯಪುರ ನಗರದ 3 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ. 

ಟ್ಯಾಂಕರ್‌ ಮೂಲಕ ನೀರು ಸರಬರಾಜು: ದೇವನಹಳ್ಳಿ ತಾಲೂಕಿನ ಗೊಡೂ ಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಪಿ.ರಂಗನಾಥಪುರ, ಭಟ್ರೇನಹಳ್ಳಿ, ಶೆಟ್ಟಿಹಳ್ಳಿ, ಬಿಜ್ಜವಾರ ಗ್ರಾಪಂ ವ್ಯಾಪ್ತಿಯ ಜಿ.ಹೊಸಹಳ್ಳಿ, ಕೊಯಿರಾ ಗ್ರಾಪಂ ವ್ಯಾಪ್ತಿಯ ಜ್ಯೋತಿಪುರ, ಮಂಡಿ ಬೆಲೆ ಗ್ರಾಪಂ ವ್ಯಾಪ್ತಿಯ ಧರ್ಮಪುರ, ಜಾಲಿಗೆ ಗ್ರಾಪಂ ವ್ಯಾಪ್ತಿಯ ಇಂಡ್ರಸನಹಳ್ಳಿ, ಚನ್ನರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ನಾಗನಾಯಕನಹಳ್ಳಿ ಹಾಗೂ

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಪಂ ವ್ಯಾಪ್ತಿಯ ಭಕ್ತರಹಳ್ಳಿ, ಆರೂಢಿ ಗ್ರಾಪಂ ವ್ಯಾಪ್ತಿಯ ಪಾಲನಹಳ್ಳಿ, ಹೊಸಕೋಟೆ ತಾಲೂಕಿನ ಸೂಲಿಬೆಲೆ, ದೊಡ್ಡನಲ್ಲಾಳ ಗ್ರಾಪಂ ವ್ಯಾಪ್ತಿಯ ಚಿಕ್ಕನಲ್ಲಾಳ, ದಬ್ಬಗುಂಟನಹಳ್ಳಿ, ನಂದಗುಡಿ ಗ್ರಾಪಂ ವ್ಯಾಪ್ತಿಯ ಚೊಕ್ಕಸಂದ್ರ, ನೆಲಮಂಗಲ ತಾಲೂಕಿನ ನರಸೀಪುರ ಗ್ರಾಪಂ ವ್ಯಾಪ್ತಿಯ ಕೆರೆ ಪಾಳ್ಯ ಮುಂತಾದ ಗ್ರಾಮಗಳಲ್ಲಿ ಪ್ರತಿನಿತ್ಯ ಟ್ಯಾಂಕರ್‌ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. 

ಕೆರೆಗಳ ಅಭಿವೃದ್ಧಿಗೆ 50 ಕೋಟಿ ರೂ.: ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ, ಚಿಕ್ಕಗೊಲ್ಲಹಳ್ಳಿ, ಹೊಸಕೋಟೆ ತಾಲೂಕಿನ ಮುಗವಾಳ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುವ ಗ್ರಾಮಗಳ ಪಟ್ಟಿಯನ್ನು ಗ್ರಾಮೀಣ ಕುಡಿಯುವ ನೀರು ಸಬರಾಜು ಇಲಾಖೆ ಸಿದ್ಧಪಡಿಸಿದೆ.

Advertisement

ಅನೇಕ ಗ್ರಾಮಗಳಲ್ಲಿ ಟಾಸ್‌ ಪೀಸ್‌ ಅಡಿ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ಹಂತ ಹಂತವಾಗಿ 4 ತಾಲೂಕುಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಈಗಾಗಲೇ ಜಿಲ್ಲೆಯ 20 ಕೆರೆಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೂಳೆತ್ತುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಎತ್ತಿನಹೊಳೆ ಯೋಜನೆಯ ಕೆರೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 50 ಕೋಟಿ ರೂ. ನೀಡಿರುವುದು ಸ್ವಲ್ಪ ಅನುಕೂಲಕರ ಎನ್ನಬಹುದಾಗಿದೆ. 

1.30 ಲಕ್ಷ ಮೆಟ್ರಿಕ್‌ ಟನ್‌ ಮೇವು: ಜಿಲ್ಲೆಯಲ್ಲಿ ಹ‌ಸು, ಎಮ್ಮೆ ಸೇರಿ 1.83 ಲಕ್ಷ ಜಾನುವಾರುಗಳಿವೆ. ಜಿಲ್ಲೆಯ 4 ತಾಲೂಕುಗಳಲ್ಲಿ ಒಂದು ವಾರಕ್ಕೆ 6,410 ಮೆಟ್ರಿಕ್‌ ಟನ್‌ ಮೇವು ಬೇಕಾಗುತ್ತದೆ. 5 ತಿಂಗಳಿಗೆ ಬೇಕಾದಷ್ಟು 1.30 ಲಕ್ಷ ಮೆಟ್ರಿಕ್‌ ಟನ್‌ ಮೇವು ಲಭ್ಯವಿದೆ. ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಪಶುಪಾಲನಾ ಇಲಾಖೆಯಿಂದ 54,800 ಮೇವಿನ ಜೊಳ ಬೀಜದ ಮಿನಿ ಕಿಟ್‌ಗಳನ್ನು ಜನಪ್ರತಿನಿಧಿಗಳು ಮತ್ತು

ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲಾಗಿದೆ. ಮೇವಿನ ಜೊಳ ಬೀಜದಿಂದ ಸರಾಸರಿ 25 ಟನ್‌ ಮೇವು ಬರುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಮೇವಿನ ಸಮಸ್ಯೆ ಬರದಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಯ ಮೇವಿನ ಸರಬರಾಜು ಮಾಡಲು ಆಯಾ ತಾಲೂಕಿನ ತಹಶೀಲ್ದಾರ್‌ ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ನೋಡಲ್‌ ಅಧಿಕಾರಿ ಡಾ.ಸಿ.ಎಸ್‌.ಅನಿಲ್‌ ತಿಳಿಸಿದರು. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಂಗಾರು ಹಂಗಾಮಿನ ಬೆಳೆ ಪರಿಸ್ಥಿತಿ ವಿವರ ಇಂತಿದೆ.
ಮಳೆ ವಿವರ:
2019ರ ಜನವರಿ 1ರಿಂದ ಫೆ.5 ರವರೆಗೆೆ 1.7 ಮಿ.ಮೀ. ವಾಡಿಕೆ ಮಳೆಗೆ 3.5 ಮಿ.ಮೀ. ವಾಸ್ತವ ಮಳೆ ಸುರಿದಿದೆ. 

ಬಿತ್ತನೆ ಮಾಹಿತಿ: 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನೊಳಗೊಂಡಂತೆ ಒಟ್ಟಾರೆ 54,448 ಹೆಕ್ಟೇರ್‌ ವಿಸ್ತೀರ್ಣದ ಗುರಿಗೆ 47,714 ಹೆಕ್ಟೇರ್‌ ವಿಸ್ತೀರ್ಣದಲ್ಲಿ(ಶೇ.88) ಮುಖ್ಯವಾಗಿ 32,093 ಹೆಕ್ಟೇರ್‌ನಲ್ಲಿ ರಾಗಿ ಬೆಳೆ, 901 ಹೆಕ್ಟೇರ್‌ನಲ್ಲಿ ತೊಗರಿ ಬೆಳೆ,  9,125 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 518 ಹೆಕ್ಟೇರ್‌ನಲ್ಲಿ ಅಲಸಂದೆ ಹಾಗೂ 527 ಹೆಕ್ಟೇರ್‌ ಪ್ರದೇಶದಲ್ಲಿ ಎಣ್ಣೆ ಕಾಳು ಬಿತ್ತನೆಯಾಗಿದೆ. 

ಬೆಳೆ ನಷ್ಟದ ವಿವರ: ಆಗಸ್ಟ್‌, ಸೆಪ್ಟಂಬರ್‌, ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಗಣನೀಯವಾಗಿ ಶೇ.39,40,54, ಮತ್ತು ಶೇ.85 ರಷ್ಟು ಕಡಿಮೆ ಮಳೆಯನ್ನು ಪಡೆದಿದ್ದು, ತೇವಾಂಶದ ಕೊರತೆಯಿಂದ ಬೆಳೆ ಕುಂಠಿತವಾಗಿದೆ. ಸರ್ಕಾರದ  ಸಚಿವ ಸಂಪುಟದ ಉಪ ಸಮಿತಿ ತೀರ್ಮಾನದಂತೆ ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ನ.14ರಲ್ಲಿ ಹೊಸಕೋಟೆ ತಾಲೂಕಿನಲ್ಲಿ 1081.89 ಹೆಕ್ಟೇರ್‌, ದೇವನಹಳ್ಳಿ ತಾಲೂಕಿನಲ್ಲಿ 2,995.02 ಹೆಕ್ಟೇರ್‌ ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ 10,319.69 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆ ನಷ್ಟವಾಗಿರುವ ಬಗ್ಗೆ ಜಂಟಿ ಸಮೀಕ್ಷೆ ವರದಿ ಮಾಡಿದೆ. 

ದೇವನಹಳ್ಳಿ ತಾಲೂಕಿನಲ್ಲಿ ನ. 19.2014ರ ವರೆಗೆ ಬೆಳೆ ಪರಿಸ್ಥಿತಿಯನ್ನು ಗಮನಿಸಿದಾಗ ದೇವನಹಳ್ಳಿ ತಾಲೂಕಿನಲ್ಲಿ 3,362.98 ಹೆಕ್ಟೇರ್‌(ಒಟ್ಟು 6127 ಹೆಕ್ಟೇರ್‌)ಹಾಗೂ ಹೊಸಕೋಟೆ ತಾಲೂಕಿನಲ್ಲಿ 4,130.11ಹೆಕ್ಟೇರ್‌(ಒಟ್ಟು 5,212 ಹೆಕ್ಟೇರ್‌)ನಷ್ಟು ಹೆಚ್ಚುವರಿ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದೆ. ಈ ತಾಲೂಕುಗಳಿಂದ ಜಂಟಿ ಸಮೀಕ್ಷೆ ಕೈಗೊಂಡು ವರದಿ ಮಂಡಿಸಲಾಗಿದೆ. ನೆಲಮಂಗಲ ತಾಲೂಕಿನಲ್ಲಿ 1,150 ಹೆಕ್ಟೇರ್‌ನಲ್ಲಿ ತೇವಾಂಶದ ಕೊರತೆಯಿಂದ ಬೆಳೆಗಳು ಬಾಡುತ್ತಿರುವ ಬಗ್ಗೆ ವರದಿ ತಿಳಿಸಿದೆ. 

ಹಿಂಗಾರು ಬೆಳೆ ವಿಸ್ತೀರ್ಣ: 2018-19ನೇ ಸಾಲಿನಲ್ಲಿ ಹಿಂಗಾರಿನಲ್ಲಿ ಒಟ್ಟು 2,515 ವಿಸ್ತೀರ್ಣದ ಗುರಿ ಇದ್ದು, ಇದುವರೆಗೂ 1468 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ  ನಾಲ್ಕೂ ತಾಲೂಕುಗಳನ್ನು ಸರ್ಕಾರದ ಆದೇಶದಂತೆ ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ 988.64 ಹೆಕ್ಟೇರ್‌ ಹುರಳಿ ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಗಿರೀಶ್‌ ಹೇಳಿದರು. 

ರೈತರ ಬೇಸರ: ಮಳೆಯಿಲ್ಲದೇ ರಾಗಿ ಬೆಳೆ ಸರಿಯಾಗಿ ಬಂದಿಲ್ಲ. ಹಾಗಾಗಿ, ರೈತರು ಕಂಗಾಲಾಗಿದ್ದಾರೆ. ಈ ಬಾರಿ ಬರಗಾಲ ಭೀಕರವಾಗಿದೆ. ರಾಸುಗಳಿಗೆ ಮೇವು ಕೊಂಡುಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇರುವ ಬೋರ್‌ವೆಲ್‌ಗ‌ಳಲ್ಲಿ ನೀರು ಕಡಿಮೆಯಾಗುತ್ತಿದೆ. ಯಾವುದೇ ಬೆಳೆ ಬೆಳೆಯಲು ರೈತರಿಗೆ ಸಮಸ್ಯೆ ಎದುರಾಗಿದೆ ಎಂದು ರೈತ ವೇಣುಗೋಪಾಲ್‌ ಬೇಸರ ವ್ಯಕ್ತಪಡಿಸಿದರು. 

ಬರಗಾಲದಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರ ನೀಡಿಲ್ಲ. ಜಿಲ್ಲಾಡಳಿತ ರೈತರಿಗೆ ಪರಿಹಾರ ಒದಗಿಸಬೇಕು. ಸಾಲ ಮನ್ನಾ ಋಣಪತ್ರ ಸರಿಯಾದ ರೀತಿಯಲ್ಲಿ ನೀಡಿಲ್ಲ ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ತಿಳಿಸಿದರು.

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next