ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಷಡಾಕ್ಷರಿ ವರ್ಗಾವಣೆ ಆದೇಶ ಹೊರಬಿದ್ದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಈ ವರ್ಗಾವಣೆ ಮಾಡುವಂತೆ ಕಳೆದ ಸೆ.21ರಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.
ಶಿವಮೊಗ್ಗದ ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಣಿಕೆಯಿಂದ ರಾಜ್ಯ ಸರ್ಕಾರಕ್ಕೆ 71 ಲಕ್ಷ ರೂ.ಗಳಿಗೂ ಹೆಚ್ಚಿನ ರಾಜಸ್ವ ನಷ್ಟವಾಗಿದ್ದು, ಇದಕ್ಕೆ ಕಾರಣರಾದ ಷಡಾಕ್ಷರಿ ಅವರ ವರ್ಗಾವಣೆ ಮಾಡುವಂತೆ ಸಚಿ ವರು ಈ ಪತ್ರದಲ್ಲಿ ಕೋರಿದ್ದರು. ಅದರಂತೆ ಮುಖ್ಯಮಂತ್ರಿಗಳು ಷಡಾಕ್ಷರಿ ಅವರ ವರ್ಗಾವಣೆಗೆ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
ಈಚೆಗೆ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಷಡಾಕ್ಷರಿ ಅವರ ಹೆಸರು ಪ್ರಸ್ತಾಪವಾಗಿತ್ತು. ಅಬ್ಬಲಗೆರೆಯ ಮುದ್ದಣ್ಣನ ಕೆರೆಯಿಂದ ಲೇಔಟ್ ನಿರ್ಮಾಣಕ್ಕೆ ಅನುಮತಿಗಿಂತ ಹೆಚ್ಚು ಮಣ್ಣು ತೆಗೆದು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ವಿಚಾರ ಪ್ರಸ್ತಾಪವಾಗಿತ್ತು. ಸಭೆ ಬೆನ್ನಲ್ಲೇ ಸಿಎಂಗೆ ಪತ್ರ ಬರೆದಿದ್ದರು ಎನ್ನಲಾಗಿದೆ.
ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಷಡಾಕ್ಷರಿ ಅದರಿಂದ ಬಿಡುಗಡೆಗೊಂಡು ಎಂಟು ವರ್ಷಗಳೇ ಕಳೆದಿವೆ. ಜಿಲ್ಲೆಯ ಸರ್ಕಾರಿ ನೌಕರರ ವಲಯದಲ್ಲಿ ಹಿಡಿತ ಇಟ್ಟುಕೊಂಡಿರುವ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಪರ ಪರೋಕ್ಷವಾಗಿ ಕೆಲಸ ಮಾಡುವ ಸಾಧ್ಯತೆಗಳಿದ್ದು, ಅದನ್ನು ತಪ್ಪಿಸುವ ಸಲುವಾಗಿ ವರ್ಗಾವಣೆ ಅಸ್ತ್ರ ಪ್ರಯೋಗಿಸಲಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ.
ಇನ್ನೊಂದೆಡೆ ಇದೇ ಮೊದಲ ಬಾರಿಗೆ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ವರ್ಗಾವಣೆ ಮಾಡಿರುವುದು ದ್ವೇಷ ರಾಜಕಾರಣ ಎಂಬ ಮಾತೂ ನೌಕರರ ವಲಯದಲ್ಲಿ ಕೇಳಿಬರುತ್ತಿದೆ.
ಷಡಾಕ್ಷರಿ ವರ್ಗಾವಣೆ ಸರಕಾರದ ತೀರ್ಮಾನ. ನಾನೂ ಸರಕಾರದಲ್ಲಿ ಇದ್ದೇನೆ. ವರ್ಗಾ ವ ಣೆ ದೊಡ್ಡ ವಿಷಯ ಏನಲ್ಲ. ಅವರ ಮೇಲೆ ಹಗರಣಗಳ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
– ಮಧು ಬಂಗಾರಪ್ಪ, ಸಚಿವ
ಷಡಾಕ್ಷರಿ ಆಗಲಿ ಮತ್ತೊಬ್ಬರು ಆಗಲಿ ಸರಕಾರ ಬಂದಾಗ ಅ ಧಿಕಾರಿಗಳು ಬದಲಾಗುತ್ತಾರೆ. ಒಳ್ಳೆಯ ಅ ಧಿಕಾರಿಗಳಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು.
– ಬಿ.ವೈ.ರಾಘವೇಂದ್ರ, ಸಂಸದ