ಹೈದರಾಬಾದ್: ಏಕದಿನ ವಿಶ್ವಕಪ್ ಗುರುವಾರದಿಂದ(ಅ.5 ರಿಂದ) ಆರಂಭಗೊಳ್ಳಲಿದೆ. ಪಂದ್ಯಾಟ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳಿಗೂ ಅಭ್ಯಾಸ ಪಂದ್ಯಗಳಿತ್ತು. ಈ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಎರಡೂ ಪಂದ್ಯಗಳನ್ನು ಸೋತಿದೆ.
ನ್ಯೂಜೆಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯಗಳನ್ನು ಪಾಕಿಸ್ತಾನ ಸೋತಿದೆ. ಸೋತಿರುವುದು ಮಾತ್ರವಲ್ಲದೆ ಕಳಪೆ ಫೀಲ್ಡಿಂಗ್ ನಿಂದ ಪಾಕಿಸ್ತಾನ ಮುಜುಗರಕ್ಕೊಳಗಾಗಿದೆ. ಪಾಕ್ ತಂಡದ ಕಳಪೆ ಕ್ಷೇತ್ರ ರಕ್ಷಣೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಅಭ್ಯಾಸ ಪಂದ್ಯದಲ್ಲಿ ಬಾಬರ್ ಅಜಂ ಸಂಪೂರ್ಣ ಇನ್ನಿಂಗ್ಸ್ ನಲ್ಲಿ ಮೈದಾನಕ್ಕಿಳಿಯದ ಕಾರಣ ತಂಡವನ್ನು ಶಾದಾಬ್ ಖಾನ್ ಮುನ್ನಡೆಸಿದ್ದರು. ಕಳಪೆ ಫೀಲ್ಡಿಂಗ್ ನಿಂದ ಮುಜುಗರಕ್ಕೊಳಗಾದ ಪಾಕ್ ತಂಡಕ್ಕೆ ಈ ಬಗ್ಗೆ ಪ್ರಶ್ನೆ ಕೇಳಿದಾಗ “ನಮ್ಮ ಕಳಪೆ ಫೀಲ್ಡಿಂಗ್ ಗೆ ʼ ಹೈದರಾಬಾದಿ ಬಿರಿಯಾನಿʼ ಕಾರಣ”ವೆಂದು ಹೇಳಿದ್ದಾರೆ.
ಪಾಕ್ ತಂಡ ಭಾರತಕ್ಕೆ ಬಂದಾಗಿನಿಂದ ಪ್ರತಿನಿತ್ಯ ಆಟಗಾರರು ʼಹೈದರಾಬಾದಿ ಬಿರಿಯಾನಿʼಯನ್ನು ಸೇವಿಸುತ್ತಿದ್ದಾರೆ. ಬಿರಿಯಾನಿಯ ರುಚಿ ಹಚ್ಚಿದ್ದರಿಂದ ಕೆಲ ಆಟಗಾರರಿಗೆ ಅದು ಹೆಚ್ಚು ಬೇಕಾಗಿದೆ. ʼ ಹೈದರಾಬಾದಿ ಬಿರಿಯಾನಿʼಯ ರುಚಿ ನಮ್ಮನ್ನು ಸುಲಭವಾಗಿ ಬಿಡುತ್ತಿಲ್ಲ ಎಂದು ಶಾದಾಬ್ ಹೇಳಿದ್ದಾರೆ.
ನಿರೂಪಕ ಹರ್ಷಾ ಭೋಗ್ಲೆ ಅವರೊಂದಿಗೆ ಮಾತನಾಡಿದ ಶಾದಾಬ್, “ನಾವು ಹೈದರಾಬಾದಿ ಬಿರಿಯಾನಿಯನ್ನು ಪ್ರತಿದಿನ ತಿನ್ನುತ್ತಿದ್ದೇವೆ ಮತ್ತು ಬಹುಶಃ ಅದಕ್ಕಾಗಿಯೇ ನಾವು ಸ್ವಲ್ಪ ನಿಧಾನವಾಗುತ್ತಿದ್ದೇವೆ” ಎಂದು ಹೇಳಿದ್ದಾರೆ.
ಪಾಕಿಸ್ತಾನ ವಿಶ್ವಕಪ್ ನಲ್ಲಿ ಅ.6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.