Advertisement

ಅಯ್ಯಪ್ಪ ಸುತ್ತ ಭದ್ರಕೋಟೆ: ಇಂದು ಸಂಜೆ ದೇಗುಲದ ಬಾಗಿಲು ಮುಕ್ತ

06:09 AM Oct 17, 2018 | Team Udayavani |

ತಿರುವನಂತಪುರ: ಎಲ್ಲರಿಗೂ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿ ಕೊಟ್ಟಿದ್ದ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ದೇಗುಲದ ಬಾಗಿಲು ಬುಧವಾರ ಸಂಜೆ ತೆರೆಯಲಿದ್ದು, ಇಡೀ ಕೇರಳದಲ್ಲಿ  “ಬೂದಿಮುಚ್ಚಿದ ಕೆಂಡ’ದಂತಹ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಕಾರಣಕ್ಕೂ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿ ಕೊಡುವುದಿಲ್ಲ ಎಂದು ಪ್ರತಿಭಟನ ಕಾರರು ಶಬರಿಮಲೆ ದೇಗುಲದ ಕೆಳಗಿರುವ ನಿಳಕ್ಕಲ್‌ನಲ್ಲಿ ಭದ್ರಕೋಟೆ ನಿರ್ಮಿಸಿಕೊಂಡು ಕುಳಿತಿದ್ದಾರೆ. ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳೇ ದೇಗುಲ ಕಾಯಲು ತಮ್ಮ ಕಾರ್ಯಕರ್ತರನ್ನು ಕಳುಹಿಸಿ ಕೊಟ್ಟಿವೆ. ಈ ನಡುವೆ ಮಹಿಳೆಯರ ಪ್ರವೇಶ ವಿರೋಧಿಸಿ ಅಯ್ಯಪ್ಪ ಸ್ವಾಮಿ 
ಭಕ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

Advertisement

ಇನ್ನೊಂದೆಡೆ ಪಂದಳಂ ರಾಜ ಮನೆತನ ಮತ್ತು ದೇಗುಲದ ಮುಖ್ಯ ಅರ್ಚಕ (ತಂತ್ರಿ) ಜತೆಗಿನ ತಿರು ವಾಂಕೂರು ದೇವಸ್ವಂ ಮಂಡಳಿ ನಡೆಸಿದ ಮಾತುಕತೆಯೂ ವಿಫ‌ಲ ವಾಗಿದೆ. ಈ ಕೂಡಲೇ ಸುಪ್ರೀಂ  ಕೋರ್ಟ್‌ಗೆ  ಪುನರ್‌ ಪರಿಶೀಲನ ಅರ್ಜಿ ಸಲ್ಲಿಸಬೇಕು ಎಂದು ರಾಜಮನೆತನ ಮತ್ತು ತಂತ್ರಿಗಳು ಪಟ್ಟು ಹಿಡಿದ ಹಿನ್ನೆಲೆ ಯಲ್ಲಿ ಈ ಸಂಧಾನ ವಿಫ‌ಲವಾಗಿದೆ. ಹೀಗಾಗಿ ಬುಧವಾರ ಇವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬು ದರ ಮೇಲೆ ಮಹಿಳೆಯರ ಪ್ರವೇಶ ವಿಚಾರ ನಿಂತಿದೆ.

ಪ್ರತಿಭಟನಕಾರರ ಕಾವಲು
ಸುಪ್ರೀಂ ಕೋರ್ಟ್‌ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ 30ಕ್ಕೂ ಹೆಚ್ಚು ಸಂಘಟನೆಗಳು, ತಮ್ಮ ಕಾರ್ಯಕರ್ತರನ್ನು ದೇಗುಲದ ಭದ್ರತೆಗಾಗಿ ನಿಯೋಜಿಸಿವೆ. ಕೇರಳದಲ್ಲಿರುವ ಶಿವಸೇನೆಯಂತೂ ಯಾವುದೇ ಕಾರ ಣಕ್ಕೂ ಮಹಿಳೆಯರನ್ನು ದೇಗುಲಕ್ಕೆ ಬಿಡಲೇಬಾರದು ಎಂದು ಪಣ ತೊಟ್ಟಿದೆ.  ಹೀಗಾಗಿಯೇ ಒಂದು ವೇಳೆ ಮಹಿಳೆಯರು ದೇಗುಲ ಪ್ರವೇಶಿಸಿದ್ದೇ ಆದರೆ ತಮ್ಮ ಸಂಘಟನೆಯ ಕಾರ್ಯಕರ್ತೆ ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂಬ ಎಚ್ಚರಿಕೆ ನೀಡಿದೆ. ಅಲ್ಲದೆ ಸಂಘಟನೆಯ ನೂರಕ್ಕೂ ಹೆಚ್ಚು ಕಾರ್ಯಕರ್ತರು ನಿಳಕ್ಕಲ್‌ನಲ್ಲಿ ಬೀಡುಬಿಟ್ಟಿದ್ದಾರೆ.

ಚೆಕ್‌ಬಂದಿಯಾದ ನಿಳಕ್ಕಲ್‌
ನಿಳಕ್ಕಲ್‌ನಲ್ಲಿ ಹೆಚ್ಚು ಕಡಿಮೆ ಪೊಲೀಸರ ಕೆಲಸವನ್ನು ಪ್ರತಿಭಟನ ಕಾರರೇ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು ಎನ್ನುವುದು ವಿಶೇಷ. ದೇಗುಲಕ್ಕೆ ಹೋಗು ತ್ತಿರುವ ಪ್ರತಿ ವಾಹನವನ್ನೂ ಪರಿಶೀಲಿ ಸುತ್ತಿದ್ದಾರೆ. ಬುಧವಾರ ಸಂಜೆಯ ಪೂಜೆಗೆ ಯಾವುದೇ ಮಹಿಳೆಯನ್ನೂ ಬೆಟ್ಟಕ್ಕೆ ಬಿಡುವುದಿಲ್ಲ ಎಂದು ಇವರು ಸ್ಪಷ್ಟವಾಗಿ ಹೇಳಿದ್ದಾರೆ. 

ಒಂದು ವೇಳೆ ವಾಹನದಲ್ಲಿ 10ರಿಂದ 50ರೊಳಗಿನ ವಯಸ್ಸಿನ ಮಹಿಳೆಯರಿದ್ದರೆ ಅವರನ್ನು ಇಳಿಸಿ ವಾಹನ ಮುಂದೆ ಬಿಡಲಾಗುತ್ತಿದೆ. ಬೆಂಗಳೂರಿನ ಕಾಲೇಜೊಂದರ ಯುವತಿಯರಿದ್ದ ವಾಹನವನ್ನು ವಾಪಸ್‌ ಕಳುಹಿಸಲಾಗಿದೆ.  ದೇಗುಲದ ಬಳಿ ವರದಿಗಾರಿಕೆಗೆಂದು ತೆರಳಿದ್ದ ಸುದ್ದಿವಾಹಿನಿಯೊಂದರ ಪತ್ರಕರ್ತೆಯನ್ನೂ ಪ್ರತಿಭಟನಕಾರರು ವಾಪಸ್‌ ಕಳುಹಿಸಿದ್ದಾರೆ.  

Advertisement

ನೇಣಿಗೆ ಶರಣಾಗಲು ಯತ್ನ
ತಿರುವನಂತಪುರದಲ್ಲಿ  ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರು ಮರಕ್ಕೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು, ಪೊಲೀಸರು ಈ ಮಹಿಳೆಯನ್ನು ರಕ್ಷಿಸಿದ್ದಾರೆ. ಕೇರಳ ಸರಕಾರದ ಎಚ್ಚರಿಕೆ ದೇಗುಲ ಪ್ರವೇಶಿಸಲು ತೆರಳುವ ಮಹಿಳೆಯರಿಗೆ ಏನಾದರೂ ಅಡ್ಡಿ ಮಾಡಿದರೆ ಅಂಥವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಎಚ್ಚರಿಕೆ ನೀಡಿದ್ದಾರೆ. ಕೇರಳ ಸರಕಾರದ ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೇರಳ ಸರಕಾರ ದೇಗುಲದ ಸಂಪ್ರದಾಯವನ್ನೇ ನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದೆ.  

ಮಾತುಕತೆ ವಿಫ‌ಲ
ಈ ಎಲ್ಲ ಬೆಳವಣಿಗೆಗಳ ಮಧ್ಯೆ ತಿರುವಾಂಕೂರು ದೇವಸ್ವಂ ಮಂಡಳಿ, ಪಂದಳ ರಾಜಮನೆತನ, ದೇಗುಲದ ಮುಖ್ಯ ಅರ್ಚಕರು, ಅಯ್ಯಪ್ಪ ಸೇವಾ ಸಮಾಜ, ಯೋಗ ಕ್ಷೇಮ ಸಮಾಜ ಹಾಗೂ ಪ್ರತಿಭಟನೆ ನಡೆಸುತ್ತಿರುವ ನಾನಾ ಸಂಘಟನೆಗಳ ಪ್ರಮುಖರ ಜತೆ ಮಾತುಕತೆ ನಡೆಸಿದೆ. ರಾಜಮನೆತನ, ತಂತ್ರಿಗಳು ಮತ್ತು ದೇವಸ್ವಂ ಮಂಡಳಿಯ ಅಧ್ಯಕ್ಷ ಎ. ಪದ್ಮಕುಮಾರ್‌ ನಡುವೆ ಸಹಮತ ಮೂಡದೇ ಇದ್ದುದರಿಂದ ಮಾತುಕತೆ ವಿಫ‌ಲವಾಯಿತು.

22ರ ವರೆಗೆ ಮಾತ್ರ
ಶಬರಿಮಲೆ ಸ್ವಾಮಿ ಅಯ್ಯಪ್ಪನ ದೇಗುಲವು ಬುಧವಾರದಿಂದ ಸೋಮವಾರದವರೆಗೆ ತೆರೆದಿರುತ್ತದೆ. ಮಲಯಾಳಂ ತಿಂಗಳಾದ ತುಲಂ ನಿಮಿತ್ತ ದೇಗುಲದ ಬಾಗಿಲು ತೆರೆಯಲಾಗುತ್ತಿದೆ. 22ಕ್ಕೆ ಬಾಗಿಲು ಮುಚ್ಚಿದರೆ ಮತ್ತೆ ನ. 5ರಂದು ಶ್ರೀ ಚಿತ್ರ ಅತ್ತತ್ತಿರುನಾಳ್‌ಗಾಗಿ ಬಾಗಿಲನ್ನು ತೆರೆಯಲಾಗುತ್ತದೆ. ಮಾರನೇ ದಿನವೇ ಬಾಗಿಲು ಮುಚ್ಚಲಾಗುತ್ತದೆ. 

ಸುಪ್ರೀಂ ತೀರ್ಪಿಗೆ ವಿರುದ್ಧವಾಗಿ ಹೋಗಲು ಅವಕಾಶ ನೀಡುವುದಿಲ್ಲ. ಶಬರಿಮಲೆ ದೇಗುಲ ಪ್ರವೇಶಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ  ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಸರಕಾರದ ನಿಲುವಿನಲ್ಲಿಯೂ ಯಾವುದೇ ಬದಲಾವಣೆ ಇಲ್ಲ.
-ಪಿಣರಾಯಿ ವಿಜಯನ್‌,ಸಿಎಂ

ದೇಗುಲ ಪ್ರವೇಶಕ್ಕೆ ಸಿದ್ಧವಾಗಿರುವ ಪ್ರಗತಿಪರ ಮಹಿಳೆಯರು ದೇಗುಲದ ಸುತ್ತ ಪ್ರತಿಭಟನಕಾರರ ಸರ್ಪಗಾವಲು
ಪಂಪಾ ದಡದಲ್ಲಿ ನೇಣಿಗೆ ಶರಣಾಗಲು ಭಕ್ತೆಯೊಬ್ಬರಿಂದ ಯತ್ನ 
ಕಾನೂನು ಕೈಗೆ ತೆಗೆದುಕೊಂಡರೆ ತಕ್ಕ ಶಾಸ್ತಿ ಎಂದ ಕೇರಳ ಸರಕಾರ  
ದೇವಸ್ವಂ ಮಂಡಳಿ, ರಾಜಮನೆತನ, ತಂತ್ರಿಗಳ ಮಾತುಕತೆ ವಿಫ‌ಲ 
ಪುನರ್‌ಪರಿಶೀಲನ ಅರ್ಜಿ ಸಲ್ಲಿಕೆಗೆ ರಾಜಮನೆತನ, ತಂತ್ರಿಗಳ ಪಟ್ಟು 
ಸರಕಾರದಿಂದ ನಿರಾಕರಣೆ, ಮಂಡಳಿಯಿಂದ ವಿಳಂಬ ಧೋರಣೆ

Advertisement

Udayavani is now on Telegram. Click here to join our channel and stay updated with the latest news.

Next