Advertisement

LordRam:ಕನ್ನಡ ನೆಲದಲ್ಲೂ ಶ್ರೀರಾಮನ ಪಾದಸ್ಪರ್ಶ; ಶಬರಿಗಾಗಿ ಶ್ರೀರಾಮ ಬಂದ ತಾಣವೇ ಶಬರಿಕೊಳ್ಳ

11:36 AM Jan 21, 2024 | Team Udayavani |

ಬೆಳಗಾವಿ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಕನ್ನಡ ನಾಡಿಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧ ಇದೆ. ಸೀತಾಪಹರಣವಾದಾಗ ಶ್ರೀರಾಮ ಸೀತೆಯನ್ನು ಹುಡುಕುತ್ತ ಬರುವುದನ್ನು ಕಾಯುತ್ತ ಕುಳಿತಿದ್ದ ಶಬರಿಗೆ ದರ್ಶನ ನೀಡಿರುವ ಕನ್ನಡ ನೆಲ ಶಬರಿಕೊಳ್ಳದಲ್ಲಿ ಕುರುಹುಗಳು ಇನ್ನೂ ಜೀವಂತವಾಗಿವೆ.

Advertisement

ಶ್ರೀರಾಮನಿಗಾಗಿ ಹಲವು ವರ್ಷಗಳಿಂದ ಕಾಯುತ್ತ ಕುಳಿತಿದ್ದ ಶಬರಿಗೆ ಕೊನೆಗೂ ಶ್ರೀರಾಮ ದರ್ಶನ ನೀಡಿದ್ದಾನೆ. ಶಬರಿಯ ಭಕ್ತಿಗೆ ಮೆಚ್ಚಿದ ಶ್ರೀರಾಮ ವರ ನೀಡಿದ ಪುಣ್ಯ ಕ್ಷೇತ್ರವೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಶಬರಿಕೊಳ್ಳ.

ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಪುಣ್ಯ ಕ್ಷೇತ್ರದಲ್ಲಿ ಶ್ರೀರಾಮ ಬಂದು ಹೋಗಿರುವ ಅನೇಕ ಐತಿಹ್ಯಗಳನ್ನು ಇಂದಿಗೂ ಕಾಣಬಹುದಾಗಿದೆ.

ಶಬರಿಕೊಳ್ಳ ಎಂದೇ ಖ್ಯಾತಿ ಗಳಿಸಿರುವ ಈ ಪೌರಾಣಿಕ ಕ್ಷೇತ್ರ ಇನ್ನೂ ಜೀವಂತವಾಗಿದೆ. ಈ ಸ್ಥಳಕ್ಕೆ ಬಂದರೆ ರಾಮಾಯಣದಲ್ಲಿ ಉಲ್ಲೇಖವಾಗಿರುವ ಅನೇಕ ಪ್ರತೀಕಗಳು ಕಾಣ ಸಿಗುತ್ತವೆ. ಸಾವಿರ ವರ್ಷಗಳ ಹಿಂದೆ ಜಕಣಾಚಾರಿ ನಿರ್ಮಿಸಿದ್ದಾರೆ ಎನ್ನಲಾದ ಶಬರಿ ದೇಗುಲ, ಶ್ರೀರಾಮ ಬಾಣದಿಂದ ಚಿಮ್ಮಿಸಿದ ಪುಷ್ಕರಣಿ, ಶ್ರೀರಾಮನಿಗೆ ಶಬರಿ ಭಕ್ತಿಯಿಂದ ತಿನ್ನಿಸಿದ ಬೋರೆ(ಬಾರಿ) ಹಣ್ಣಿನ ಮರ, ಶ್ರೀರಾಮ ನಿರ್ಮಿಸಿದ ಜನಿವಾರ ಇರುವ ಲಿಂಗ, ಎತ್ತರವಾದ ಗುಡ್ಡ-ಬೆಟ್ಟಗಳು ಶ್ರೀರಾಮ ಹೆಜ್ಜೆ ಇಟ್ಟ ಸ್ಥಳದ ಪುರಾವೆ ಒದಗಿಸುತ್ತಿವೆ.

ಶಬರಿ ಯಾರು?:

Advertisement

ಪುರಾಣದಲ್ಲಿ ಉಲ್ಲೇಖ ಆಗಿರುವಂತೆ ಛತ್ತೀಸಗಡದ ಶಬರ ಮಹಾರಾಜನ ಮಗಳು ಶಬರಿ. ಶಬರಿಯ ಸ್ವಯಂವರ(ಮದುವೆ) ಶಬರ ಮಹಾರಾಜರ ನಿಶ್ಚಯಿಸಿದ್ದರು. ಸಾಮಾನ್ಯವಾಗಿ ಮದುವೆಗಾಗಿ ಮಂಟಪಕ್ಕೆ ತಳಿರು ತೋರಣಗಳಿಂದ ಸಿಂಗರಿಸುತ್ತಾರೆ. ಆದರೆ ಶಬರಿಯ ಮದುವೆಯನ್ನು ವಿಶೇಷವಾಗಿ ಮಾಡಬೇಕೆಂಬ ಉದ್ದೇಶದಿಂದ ಮಂಟಪಕ್ಕೆ ಪ್ರಾಣಿಗಳ ರುಂಡವನ್ನು ತೋರಣವಾಗಿ ಕಟ್ಟಿಸಿ ಸಿಂಗಾರ ಮಾಡುತ್ತಾನೆ. ಇದರಿಂದ ದುಖಿ:ತಳಾದ ಶಬರಿ ವೈರಾಗ್ಯ ತಾಳಿ ಅರಮನೆ ಬಿಟ್ಟು ಭಗವಂತನ ನಾಮಸ್ಮರಣೆ ಮಾಡುತ್ತ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಗೆ ಬಂದು ನೆಲೆಸುತ್ತಾಳೆ. ಇಲ್ಲಿ ಮಾತಂಗಿ ಋಷಿಯನ್ನು ಭೇಟಿಯಾಗಿ ಕೆಲ ದಿನ ಇಲ್ಲಿಯೇ ಉಳಿದು ಬಳಿಕ ಸುರೇಬಾನಕ್ಕೆ ಬರುತ್ತಾಳೆ.

ಗುಡ್ಡ ಬೆಟ್ಟಗಳ ಮಧ್ಯೆ ಆಶ್ರಮ ಮಾಡಿಕೊಂಡು ಶಬರಿ ಕಾಯುತ್ತಿರುತ್ತಾಳೆ. ಶ್ರೀರಾಮ ಬರುತ್ತಾನೆ ಎಂದು ನಿತ್ಯವೂ ಮಾರ್ಗ ಸ್ವಚ್ಛಗೊಳಿಸಿ, ಸಿಹಿಯಾದ ಬೋರೆ ಹಣ್ಣು ತೆಗೆದಿಡುತ್ತಿರುತ್ತಾಳೆ. ಬೋರೆ ಹಣ್ಣು ಕಚ್ಚಿ ಸಿಹಿಯಾದದ್ದನ್ನು ತೆಗೆದಿಟ್ಟು, ಹುಳಿ ಹಣ್ಣನ್ನು ಬಿಸಾಡುತ್ತಿರುತ್ತಾಳೆ. ಇದು ನಿತ್ಯವೂ ಶ್ರೀರಾಮನಿಗಾಗಿ ಕಾಯುತ್ತಿದ್ದ ಶಬರಿಯ ದಿನಚರಿ. ಇಲ್ಲಿ ಇನ್ನೂ ಆ ಬೋರೆ ಮರ ಇದೆ.

ಕರಡಿಗುಡ್ಡದಲ್ಲಿ ರಾಕ್ಷಸನ ಸಂಹಾರ: ಸೀತೆಯನ್ನು ಹುಡುಕುತ್ತ ಅಯೋಧ್ಯೆಯಿಂದ ಹಲವು ರಾಜ್ಯಗಳನ್ನು ಸುತ್ತುತ್ತ ಶ್ರೀರಾಮ ಕರ್ನಾಟದಲ್ಲಿಯೂ ಕಾಲಿಡುತ್ತಾನೆ. ರಾಮದುರ್ಗ ಸಮೀಪದ ಕರಡಿಗುಡ್ಡ ಬಳಿ ಕಬಂಧ ಬಾಹು ರಾಕ್ಷಸನಿದ್ದನು. ಈತನಿಗೆ ಅತಿ ಉದ್ದವಾದ ಕೈಗಳಿದ್ದವು. ಕುಳಿತಲ್ಲಿಯೇ ತನ್ನ ಕೈಯಿಂದ ಶ್ರೀರಾಮ-ಲಕ್ಷ್ಮಣನನ್ನು ಎಳೆದು ತಿನ್ನಲು ಯತ್ನಿಸುತ್ತಾನೆ. ಆಗ ಶ್ರೀರಾಮ ಕಬಂಧ ಬಾಹು ರಾಕ್ಷಸನನ್ನು ಸಂಹರಿಸುತ್ತಾನೆ. ಋಷಿಯೊಬ್ಬರು ಶಬರಿ ಕಾಯುತ್ತಿರುವ ಬಗ್ಗೆ ರಾಮ-ಲಕ್ಷ್ಮಣನಿಗೆ ತಿಳಿಸಿದಾಗ ಅಲ್ಲಿಂದ ನಡೆದುಕೊಂಡು ಶ್ರೀರಾಮ ಮತ್ತು ಲಕ್ಷ್ಮಣ ಸುರೇಬಾನಕ್ಕೆ ಬಂದಾಗ ಶಬರಿ ಅತ್ಯಂತ ಭಕ್ತಿಯಿಂದ ಬರಮಾಡಿಕೊಳ್ಳುತ್ತಾಳೆ.

ಎಂದಿಗೂ ಬತ್ತದ ಪುಷ್ಕರಣಿ: ಶ್ರೀರಾಮ ಮತ್ತು ಲಕ್ಷ್ಮಣನಿಗೆ ಶಬರಿ ತಾನು ಕಚ್ಚಿದ್ದ ಸಿಹಿಯಾದ ಬೋರೆ ಹಣ್ಣು ಕೊಡುತ್ತಾಳೆ. ಎಂಜಲಾಗಿದ್ದರೂ ಅತ್ಯಂತ ಭಕ್ತಿಯಿಂದ ಶ್ರೀರಾಮ ಹಣ್ಣು ಸವಿಯುತ್ತಾನೆ. ಆಗ ನೀರಿನ ಅಗತ್ಯ ಇರುವುದರಿಂದ ಶ್ರೀರಾಮ ತನ್ನ ಬಿಲ್ಲು-ಬಾಣದಿಂದ ಹೊಡೆದು ನೀರು ಚಿಮ್ಮಿಸುತ್ತಾನೆ. ಅದುವೇ ಪುಷ್ಕರಣಿ. ಇಲ್ಲಿ ನಿರಂತರವಾಗಿ ನೀರು ಹರಿಯುತ್ತದೆ. ಬೇಸಿಗೆಯಲ್ಲೂ ಈ ನೀರು ಬತ್ತಿಲ್ಲ. ಸತತವಾಗಿ ಇಲ್ಲಿ ನೀರು ಹರಿಯುತ್ತದೆ. ಸಿಹಿಯಾದ ಈ ನೀರನ್ನು ಸುರೇಬಾನ ಗ್ರಾಮಸ್ಥರು ಇಂದಿಗೂ ಬಳಸುತ್ತಾರೆ.

ಈ ಪುಷ್ಕರಣಿಗೆ ಎರಡು ಹೊಂಡಗಳನ್ನು ನಿರ್ಮಿಸಲಾಗಿದೆ. ಈ ತಾಣವನ್ನು ಶಬರಿಕೊಳ್ಳ ಎಂದು ಕರೆಯಲಾಗುತ್ತದೆ. ಈಗಲೂ ಶಬರಿಯ ದೇವಿಗೆ ನಡೆದುಕೊಳ್ಳುವ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ಶಬರಿಗೆ ಸೋರೆವವ್ವ ಅಂತಲೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಕೋತಿಗಳೂ ಇವೆ.

ಕಿಷ್ಕಿಂದೆ ಮಾರ್ಗ ತೋರಿಸಿದ್ದೇ ಶಬರಿ: ಕಿಷ್ಕಿಂದೆಯಲ್ಲಿ ಹನುಮನ ಇರುವಿಕೆ ಬಗ್ಗೆ ಶಬರಿಯೇ ರಾಮನಿಗೆ ಮಾಹಿತಿ ನೀಡುತ್ತಾಳೆ. ಅಲ್ಲಿಂದ ಮಾರ್ಗ ಶೋಧಿಸುತ್ತ ರಾಮ ಕಿಷ್ಕಿಂದೆಯತ್ತ ಪ್ರಯಾಣ ಬೆಳೆಸುತ್ತಾರೆ. ಶಬರಿ ಇದೇ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ವರ್ಷಗಳ ಹಿಂದೆ ಜಕಣಾಚಾರಿ ನಿರ್ಮಿಸಿದ್ದಾರೆ ಎನ್ನಲಾದ ಶಬರಿ ಮಂದಿರವೂ ಇದೆ.

ಶಬರಿಯನ್ನು ಭೇಟಿಯಾದ ಶ್ರೀರಾಮ ಇದೇ ಸ್ಥಳದಲ್ಲಿ ಲಿಂಗ ಪೂಜೆ ಮಾಡಿದ ಶ್ರೀರಾಮಲಿಂಗೇಶ್ವರ ದೇವಸ್ಥಾನವೂ ಇದೆ. ಸಾಮಾನ್ಯವಾಗಿ ಲಿಂಗಕ್ಕೆ ಜನಿವಾರ ಇರುವುದಿಲ್ಲ. ಆದರೆ ಇಲ್ಲಿರುವ ಲಿಂಗಕ್ಕೆ ಜನಿವಾರ ಇರುವುದೇ ವಿಶೇಷ ಎನ್ನುತ್ತಾರೆ ಇತಿಹಾಸಕಾರರು. ಕೆಲ ವರ್ಷಗಳ ಹಿಂದೆ ಅಯೋಧ್ಯೆಯಿಂದ ಶ್ರೀರಾಮನ ಪಾದವನ್ನು ತಂದು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಜತೆಗೆ ಹಲವು ದಶಕಗಳ ಹಿಂದೆ ಈ ತಾಲೂಕಿಗೆ ರಾಮದುರ್ಗ ಅಂತಲೂ ನಾಮಕರಣ ಮಾಡಲಾಗಿದೆ.

ಶಬರಿಕೊಳ್ಳ ಪೌರಾಣಿಕ ಹಾಗೂ ಐತಿಹಾಸ ಹಿನ್ನೆಲೆ ಹೊಂದಿದರೂ ಇನ್ನೂ ಅಭಿವೃದ್ಧಿಯಿಂದ ಮರೀಚಿಕೆಗೊಂಡಿದೆ. ಈ ಪುಣ್ಯ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸರ್ಕಾರ ಮನಸ್ಸು ಮಾಡಬೇಕಿದೆ. ಅಯೋಧ್ಯೆ ಅಭಿವೃದ್ಧಿಯಾದಂತೆ ಶ್ರೀರಾಮನ ಪರಮ ಭಕ್ತೆ ಶಬರಿ ಇರುವ ಶಬರಿಕೊಳ್ಳ ಅಭಿವೃದ್ಧಿಯಾಗಬೇಕು. ಯಾತ್ರಿ ನಿವಾಸ ನಿರ್ಮಿಸಿ ಪ್ರವಾಸಿ ತಾಣವನ್ನಾಗಿ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಿರಿಯರಾದ ಮಲ್ಲಣ್ಣ ಇಟಗಿ ಮನವಿ ಮಾಡಿದ್ದಾರೆ.

ಶಬರಿಕೊಳ್ಳಕ್ಕೆ ಹೋಗುವುದು ಹೇಗೆ?

ಬೆಳಗಾವಿಯಿಂದ 110 ಕಿ.ಮೀ. ದೂರ ಇರುವ ಶಬರಿಕೊಳ್ಳಕ್ಕೆ ಯರಗಟ್ಟಿ ಮೂಲಕ ರಾಮದುರ್ಗಕ್ಕೆ ಹೋಗಬೇಕು. ಅಲ್ಲಿಂದ 15 ಕಿ.ಮೀ. ಸಾಗಿದರೆ ಶಬರಿಕೊಳ್ಳ ಸಿಗುತ್ತದೆ. ಇತ್ತ ಜಮಖಂಡಿ, ಬಾದಾಮಿಯಿಂದಲೂ ಅತಿ ಸಮೀಪವಾಗಿದೆ. ಹುಬ್ಬಳ್ಳಿ-ಧಾರವಾಡದಿಂದ ಬರುವವರು ಸವದತ್ತಿಗೆ ಬಂದು ಅಲ್ಲಿಂದ ಶಬರಿಕೊಳ್ಳ ತಲುಪಬಹುದಾಗಿದೆ.

ಶ್ರೀರಾಮ ಇಲ್ಲಿಗೆ ಬಂದು ಶಬರಿಗೆ ದರ್ಶನ ನೀಡಿರುವ ಶಬರಿಕೊಳ್ಳದಲ್ಲಿ ನಾನು ಸುಮಾರು 20 ವರ್ಷದಿಂದ ನೆಲೆಸಿದ್ದೇನೆ. ಶಬರಿ ದೇವಿ, ಶ್ರೀರಾಮ, ಲಕ್ಷö್ಮಣ, ಸೀತೆಯ ದೇವಸ್ಥಾನದಲ್ಲಿ ಸೇವೆ ಮಾಡುತ್ತಿದ್ದೇನೆ. ದೇಶದ ಹಲವು ಸಂತರು ಭೇಟಿ ನೀಡುತ್ತಾರೆ. ರಾಮಾಯಣದಲ್ಲಿ ಶಬರಿಕೊಳ್ಳದ ಉಲ್ಲೇಖವಿದ್ದು, ಅದನ್ನು ನಾವು ಇಲ್ಲಿ ನೋಡಬಹುದಾಗಿದೆ. – ಶ್ರೀ ಔದೇಶ ಮಹಾರಾಜರು, ಚಿತ್ರಕೂಟ, ಉತ್ತರ ಪ್ರದೇಶ

ಶ್ರೀರಾಮ ನಮ್ಮ ಸುರೇಬಾನ ನೆಲದಲ್ಲಿ ಕಾಳಿಟ್ಟಿರುವ ಅನೇಕ ಐತಿಹ್ಯಗಳು ಇವೆ. ರಾಮಾಯಣದಲ್ಲಿಯೂ ಶಬರಿಯ ಉಲ್ಲೇಖವಿದೆ. ಶಬರಿ ದೇವಿಯನ್ನು ಆರಾಧಿಸುವ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ಉತ್ತರ ಪ್ರದೇಶ ಮೂಲದ ಅನೇಕ ಸಾಧು-ಸಂತರು ಇಲ್ಲಿಗೆ ಬಂದು ಧ್ಯಾನ, ಪೂಜೆ ನಡೆಸುತ್ತಾರೆ. ಶ್ರೀರಾಮ ಚಿಮ್ಮಿಸಿದ ಪುಷ್ಕರಣಿ ಇನ್ನೂ ಜೀವಂತವಾಗಿದೆ.  -ಬಸಪ್ಪ ಮದಕಟ್ಟಿ, ಹಿರಿಯರು, ಸುರೇಬಾನ

ಶ್ರೀರಾಮನಿಗಾಗಿ ಹಲವಾರು ವರ್ಷಗಳಿಂದ ಕಾಯುತ್ತ ಕುಳಿತಿದ್ದ ಶಬರಿಗೆ ರಾಮ ದರ್ಶನ ನೀಡಿ ವರ ನೀಡಿದ್ದಾರೆ. ಪೌರಾಣಿಕ ಕ್ಷೇತ್ರವಾದ ಶಬರಿಕೊಳ್ಳದ ಅಭಿವೃದ್ಧಿಯತ್ತ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕು. ಇಲ್ಲಿಗೆ ಆಗಮಿಸುವ ಸಾಧು-ಸಂತರು, ಭಕ್ತರ ಅನುಕೂಲಕ್ಕೆ ಯಾತ್ರಿ ನಿವಾಸ ನಿರ್ಮಿಸಬೇಕು. ದೇಶವೇ ಗುರುತಿಸುವಂತ ಪುಣ್ಯ ಕ್ಷೇತ್ರವನ್ನಾಗಿ ರೂಪಿಸಬೇಕು. –  ಶ್ರೀಶೈಲ ಮೆಳ್ಳಿಕೇರಿ, ಹಿರಿಯರು, ಸುರೇಬಾನ

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next