ತಿರುವನಂತಪುರ: ವಿವಾದಗಳ ಬಿಸಿಯ ನಡುವೆಯೇ 64 ದಿನಗಳ ಯಾತ್ರೆಗಾಗಿ ಶುಕ್ರವಾರ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಾಗುವುದು. ಅದಕ್ಕೆ ಪೂರಕವಾಗಿ ಹಲವು ಬೆಳವಣಿಗೆಗಳು ಗುರುವಾರ ನಡೆದಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದಿದ್ದ ಸರ್ವಪಕ್ಷ ಗಳ ಸಭೆ ವಿಫಲವಾಗಿದೆ. ಈ ನಡುವೆ ಮಹಿಳೆ ಯರ ದೇಗುಲ ಭೇಟಿಗೆಂದು ಪ್ರತ್ಯೇಕ ದಿನ ಗಳನ್ನು ನಿಗದಿಪಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಪಂದಳಂ ರಾಜಮನೆತನ ಕೂಡ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಹಿಳೆಯರ ಪ್ರವೇಶಕ್ಕೆ ತತ್ಕಾಲಕ್ಕೆ ತಡೆ ಕೋರುವಂತೆ ಮನವಿ ಮಾಡಿಕೊಳ್ಳಬಹುದು ಎಂದು ಪಿಣರಾಯಿ ಸುಳಿವು ನೀಡಿದ್ದಾರೆ.
ಸಭೆ ವಿಫಲ
ಸುಪ್ರೀಂ ಕೋರ್ಟ್ ಸೆ.28ರಂದು ನೀಡಿದ್ದ ತೀರ್ಪಿನ ಬಳಿಕ ಉಂಟಾಗಿರುವ ಬೆಳವಣಿಗೆ ಗಳ ಬಗ್ಗೆ ಚರ್ಚೆ ನಡೆಸಲು ಗುರುವಾರ ತಿರುವ ನಂತಪುರದಲ್ಲಿ ಸರ್ವ ಪಕ್ಷಗಳ ಸಭೆ ಕರೆಯ ಲಾಗಿತ್ತು. ಮೂರು ತಾಸುಗಳ ಕಾಲ ನಡೆದ ಸಭೆಯಲ್ಲಿ ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಜ.22ರ ವರೆಗೆ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನ ಸಾಧ್ಯವಿಲ್ಲ ವೆಂದು ಮನವಿ ಮಾಡುವಂತೆ ಕಾಂಗ್ರೆಸ್, ಬಿಜೆಪಿ ಒತ್ತಾಯಿಸಿದವು. ಅದಕ್ಕೆ ಒಪ್ಪದ ಮುಖ್ಯಮಂತ್ರಿ, ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಹೀಗಾಗಿ 10-50ರ ವಯೋ ಮಿತಿಯ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲೇಬೇಕಾಗಿದೆ ಎಂದರು.
ಅದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಕ್ಷೇಪಿಸಿದವು. ಸರಕಾರ ಹಠಮಾರಿ ಧೋರಣೆಯಿಂದ ಕೂಡಿದೆ. ಸಲಹೆಗಳನ್ನು ಸ್ವೀಕರಿಸಲು ಸಿದ್ಧವಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿ ಸಭೆ ಬಹಿಷ್ಕರಿಸಿ ಹೊರ ನಡೆದವು.
ನಿಲುವಿನಲ್ಲಿ ಬದಲಿಲ್ಲ: ಸಭೆ ಬಳಿಕ ಪಿಣರಾಯಿ ವಿಜಯನ್ ಅವರು ಪಂದಳಂ ರಾಜಮನೆತದ ಸದಸ್ಯರು ಮತ್ತು ಮುಖ್ಯ ತಂತ್ರಿ ಕಂದರಾರು ರಾಜೀವರಾರು ಜತೆ ಮಾತುಕತೆ ನಡೆಸಿದರು. ಅಲ್ಲಿಯೂ ಬಿಕ್ಕಟ್ಟು ತಿಳಿಗೊಳ್ಳುವ ವಾತಾವರಣ ಮೂಡಲಿಲ್ಲ. ಆದರೆ ಸುಪ್ರೀಂ ತೀರ್ಪು ಅನುಷ್ಠಾನಕ್ಕೆ ತಾತ್ಕಾಲಿಕವಾಗಿ ತಡೆಕೋರಲು ಟಿಡಿಬಿಗೆ ಅವಕಾಶ ಇದೆ ಎಂದು ಮಾತುಕತೆ ವೇಳೆ ಸಿಎಂ ಸುಳಿವು ನೀಡಿದ್ದಾರೆ.
ವಿದ್ಯುತ್ ಚಾಲಿತ ಬಸ್‌ಗಳ ಪೂರೈಕೆ: ವಿದ್ಯುತ್‌ಚಾಲಿತ ಬಸ್‌ಗಳ ತಯಾರಕ ಸಂಸ್ಥೆ ಒಲೆಕ್ಟ್ರಾ-ಬಿವೈಡಿ ಶಬರಿಮಲೆ ದೇಗುಲಕ್ಕೆ ತೆರಳಲು ಹತ್ತು ಬಸ್‌ಗಳನ್ನು ಪೂರೈಸುವುದಾಗಿ ಹೇಳಿದೆ.
ಶಬರಿಮಲೆಯಲ್ಲಿನ ಸಂಪ್ರದಾಯ, ಭಕ್ತರ ಆಶಯವನ್ನು ಗೌರವಿಸಬೇಕಾಗಿದೆ. ಅಯ್ಯಪ್ಪ ದೇಗುಲಕ್ಕೆ ಸಂಬಂಧಿಸಿ ಲಿಂಗ ಸಮಾನತೆ ಜಾರಿ ಮಾಡಬೇಕಾದ ಅಗತ್ಯವಿಲ್ಲ. ಯಾವುದೇ ಬದಲಾವಣೆ ಮಾಡುವುದಿದ್ದರೂ ಧಾರ್ಮಿಕ ನಾಯಕರ ಜತೆ ಚರ್ಚಿಸಿ ಜಾರಿಗೆ ತರಬೇಕು.
– ಶ್ರೀ ರವಿಶಂಕರ ಗುರೂಜಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಹಲವೆಡೆ ನಿಷೇಧಾಜ್ಞೆ
ಬಂದೋಬಸ್ತ್ ಬಗ್ಗೆ ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥೆ ಬೆಹರಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎಲವುನ್ಕಲ್, ನೀಲಕ್ಕಲ್, ಪಂಪಾ ಮತ್ತು ಸನ್ನಿಧಾನ (ದೇಗುಲ ಆವರಣ)ದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.