ವಾಡಿ: ಅಕ್ಕಿ ಕಾಳುಗಳ ರೂಪದಲ್ಲಿ ಬೆರಕೆ ಮಾಡಲಾಗಿರುವುದು ಪ್ಲಾಸ್ಟಿಕ್ ಅಕ್ಕಿಯಲ್ಲ, ಅದು ಆರೋಗ್ಯಕ್ಕೆ ಹಾನಿಕರವೂ ಅಲ್ಲ ಎಂದು ಶಹಾಬಾದ ಸಿಡಿಪಿಒ ಭೀಮರಾಯ ಹೊಸಮನಿ ಸ್ಪಷ್ಟಪಡಿಸಿದ್ದಾರೆ.
ವಾಡಿ ಪಟ್ಟಣದ ಜಾಂಬವೀರ ಕಾಲೋನಿಯ ಅಂಗನವಾಡಿ ಕೇಂದ್ರಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಸಿಡಿಪಿಒ ಹೊಸೂರ, ಅನುಮಾನಾಸ್ಪದ ಅಕ್ಕಿ ಕಾಳುಗಳ ಕುರಿತು ತಿಳುವಳಿಕೆ ನೀಡಿದರು.
ಯಾವುದೇ ಸಂಶಯ ಹೊಂದದೆ ನಿರ್ಭಯವಾಗಿ ಸೇವಿಸಿರಿ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಪೌಷ್ಠಿಕಾಂಶವುಳ್ಳ ಆಹಾರದ ಮೇಲೆ ಸಾರ್ವಜನಿಕರು ಅನುಮಾನ ಪಡಬಾರದು ಎಂದು ಹೇಳಿದರು.
ಅಂಗನವಾಡಿಯಿಂದ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಸೇರಿದಂತೆ ಮಕ್ಕಳಿಗೆ ವಿತರಿಸಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೂಪದ ಅಕ್ಕಿ ಕಾಳುಗಳನ್ನು ಕಂಡು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಪ್ಲಾಸ್ಟಿಕ್ ಅಕ್ಕಿಗಳೆಂದು ಸಂಗ್ರಹಿಸಿಟ್ಟಿದ್ದ ಮಹಿಳೆಯರಿಂದ ಕಾಳುಗಳನ್ನ ಪುನಃ ಅಕ್ಕಿಗೆ ಬೆರೆಸಿ ಬೇಯಿಸಲು ಸೂಚಿಸಿದ್ದಲ್ಲದೆ ಸ್ವತಃ ಊಟ ಮಾಡಿ ಆತಂಕ ನಿವಾರಿಸುವ ಪ್ರಯತ್ನ ಮಾಡಿದರು. ಈ ಅನುಮಾನಾಸ್ಪದ ಆಕ್ಕಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಮೂರು ದಿನಗಳಲ್ಲಿ ಇದರ ಸತ್ಯಾಸತ್ಯತೆ ಬಹಿರಂಗಪಡಿಸುವುದಾಗಿ ಬಡಾವಣೆಯ ಗ್ರಾಮಸ್ಥರಿಗೆ ತಿಳಿಸಿದರು.
ಇದನ್ನೂ ಓದಿ:ಅಕ್ರಮ ಶಿಲುಬೆ ತೆರವಿಗೆ ಯತ್ನ ಪೊಲೀಸರು, ಬಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಈ ವೇಳೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಗ್ರಾಮಸ್ಥರು, ಅಕ್ಕಿಯಲ್ಲಿ ಪೌಷ್ಟಿಕಾಂಶದ ಪೋರ್ಟಿಫೈಡ್ ಅಕ್ಕಿ ಬೆರಿಸಿದ್ದರೆ ಅದನ್ನು ಜನರಿಗೆ ತಿಳಿಹೇಳಬೇಕಿತ್ತು. ಜನರಿಗೆ ಸಂಶಯ ಬರುವ ಮೊದಲೇ ಈ ಕುರಿತು ಜಾಗೃತಿ ಮೂಡಿಸಬೇಕಿತ್ತು. ನಮಗೆ ಗಾಬರಿ ಮೂಡಿಸಿ ಈಗ ಸ್ಪಷ್ಟೀಕರ ನೀಡಿದರೆ ಹೇಗೆ? ಯಾವೂದಕ್ಕೂ ಈ ಅಕ್ಕಿ ಕಾಳುಗಳ ಪರಿಶೀಲನೆ ನಡೆಸಬೇಕು. ಪ್ರಯೋಗಾಲಯದ ವರದಿ ಬರುವ ವರೆಗೂ ಈ ಆಕ್ಕಿಯನ್ನು ಬೇಯಿಸುವುದಿಲ್ಲ ಎಂದು ಮಹಿಳೆಯರು ಆಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ, ಅಂಗನವಾಡಿ ಕಾರ್ಯರ್ತೆ ಶಶಿಕಲಾ ಹಾಗೂ ಬಡಾವಣೆಯ ಜನರು ಇದ್ದರು.