Advertisement

ವರಕವಿ ಬೇಂದ್ರೆ ಮನೆ, ಮುರುಘಾಮಠಕ್ಕೂ ಶಾ ಭೇಟಿ

03:54 PM Apr 13, 2018 | |

ಧಾರವಾಡ: ನಗರಕ್ಕೆ ಗುರುವಾರ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ವರಕವಿ ಡಾ| ದ.ರಾ.ಬೇಂದ್ರೆ ಮನೆ ಹಾಗೂ ಮುರುಘಾ ಮಠಕ್ಕೆ ಭೇಟಿ ನೀಡಿದರು.

Advertisement

ಕೆಲಗೇರಿ ಬೈಪಾಸ್‌ ಮೂಲಕ ಆಗಮಿಸಿದ ಶಾ, ಬೆಳಗ್ಗೆ 11:30ಕ್ಕೆ ಸಾಧನಕೇರಿ ಬೇಂದ್ರೆ ಭವನಕ್ಕೆ ಭೇಟಿ ನೀಡಿದರು. ಮಹಿಳಾ ಕಾರ್ಯಕರ್ತರು ಹೂ ಗುತ್ಛ ಹಾಗೂ ಧಾರವಾಡ ಪೇಡೆ ನೀಡಿ, ಆರತಿ ಎತ್ತಿ ಸ್ವಾಗತಿಸಿದರು. ನಂತರ ಬೇಂದ್ರೆ ಭವನಕ್ಕೆ ಭೇಟಿ ಕೊಟ್ಟ ಅಮಿತ್‌ ಶಾ, ವರಕವಿ ಡಾ| ದ.ರಾ. ಬೇಂದ್ರೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಭವನದಲ್ಲಿನ ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಬೇಂದ್ರೆ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ|ಡಿ. ಎಂ. ಹಿರೇಮಠ ಅವರು ಬೇಂದ್ರೆ ಅವರ ಮಾಹಿತಿ ಒಳಗೊಂಡ ಕಿರು ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು.

ನಂತರ ಪಕ್ಕದಲ್ಲೇ ಇರುವ ಬೇಂದ್ರೆ ಅವರ ನಿವಾಸಕ್ಕೆ ಭೇಟಿ ನೀಡಿದರು. ಬೇಂದ್ರೆ ಅವರು ತಮ್ಮ ಮನೆಗೆ ಬರುವವರಿಗೆ ಸಕ್ಕರೆ ನೀಡುವ ಸಂಸ್ಕೃತಿ ಬೆಳೆಸಿಕೊಂಡಿದ್ದರು. ಅದೇ ರೀತಿಯಲ್ಲಿ ಅಮಿತ್‌ ಶಾ ಅವರಿಗೂ ಸಹ ಸಕ್ಕರೆ ನೀಡಿ ಸ್ವಾಗತಿಸಲಾಯಿತು. ಅಮಿತ್‌ ಶಾ ಅವರು ಬೇಂದ್ರೆ ಅವರ ಸೊಸೆ ಪದ್ಮಾಬಾಯಿ ಬೇಂದ್ರೆ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಬೇಂದ್ರೆ ಕುಟುಂಬಸ್ಥರು ನಾಕು ತಂತಿ ಇಂಗ್ಲಿಷ್‌ ಅನುವಾದಿತ ಕೃತಿ ‘ಫೋರ್‌ ಸ್ಟ್ರಿಂಗ್ಸ್‌’ ಹಾಗೂ ‘ಸ್ಪ್ರಿಂಗ್‌ ಫೈಯರ್‌’ ಎಂಬ ಕವನ ಗುಚ್ಛ  ಪುಸಕ್ತವನ್ನು ನೀಡಿ ಗೌರವಿಸಿದರು.

ಮುರುಘಾ ಮಠಕ್ಕೆ ಭೇಟಿ: ಕವಿಮನೆ ಭೇಟಿ ಬಳಿಕ ಮುರುಘಾ ಮಠಕ್ಕೆ ಭೇಟಿ ನೀಡಿದ ಅಮಿತ್‌ ಶಾ ಅವರಿಗೆ ಬಿಜೆಪಿ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಹೂವಿನ ಸುರಿಮಳೆ ಗೈಯುವ ಮೂಲಕ ಸ್ವಾಗತಿಸಿದರು. ಬಳಿಕ ನೇರವಾಗಿ ಮುರುಘೇಂದ್ರ, ಮೃತ್ಯುಂಜಯ ಹಾಗೂ ಮಹಾಂತ ಅಪ್ಪಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ನಂತರ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರೊಂದಿಗೆ ಎರಡು ನಿಮಿಷ ಆಪ್ತ ಸಮಾಲೋಚನೆ ನಡೆಸಿದ ಶಾ ಅವರನ್ನು ಶ್ರೀಗಳು ಶಾಲು ಹೊದಿಸಿ ಸನ್ಮಾನಿಸಿ, ಆಶೀರ್ವಾದ ನೀಡಿದರು. ಇದೇ ವೇಳೆ ಡಾ| ಎನ್‌. ಜಿ.ಮಹಾದೇವಪ್ಪನವರು ರಚಿಸಿದ ‘ಲಿಂಗಾಯತಾಸ್‌ ಆರ್‌ ನಾಟ್‌ ಹಿಂದೂಸ್‌’ ಎಂಬ ಗ್ರಂಥ ಹಾಗೂ ಬಸವಣ್ಣನವರ ಭಾವಚಿತ್ರವನ್ನು ಅಮಿತ್‌ ಶಾ ಅವರಿಗೆ ಶ್ರೀಗಳು ನೀಡಿದರು. ನಂತರ ಮಠದ ಸಭಾಭವನದ ವೇದಿಕೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ್‌ ಜೋಶಿ, ಅಮೃತ ದೇಸಾಯಿ, ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ, ಈರೇಶ ಅಂಚಟಗೇರಿ ಸೇರಿದಂತೆ ಅನೇಕರು ಇದ್ದರು. ಈ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಬ್ಯಾನರ್‌ ತೆರವು: ಬೇಂದ್ರೆ ಭವನ ಎದುರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಆಗಮನದ ಹಿನ್ನೆಲೆಯಲ್ಲಿ ಹಾಕಿದ್ದ ಬ್ಯಾನರ್‌ನ್ನು ಚುನಾವಣಾ ಆಯೋಗದ ಅಧಿಕಾರಿಗಳು ತೆರವುಗೊಳಿಸಿದರು. ಪರವಾನಗಿ ಪಡೆದಿರುವುದಾಗಿ ಬಿಜೆಪಿ
ನಾಯಕರು ವಾದಿಸಿದರೂ ಪರವಾನಗಿ ಪತ್ರ ತೋರಿಸುವಲ್ಲಿ ವಿಫಲರಾದ ಕಾರಣ ಅಧಿಕಾರಿಗಳು ಬ್ಯಾನರ್‌ ತೆರವುಗೊಳಿಸಿದರು. ಬಿಗಿ ಭದ್ರತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಗರದಲ್ಲಿ ಭೇಟಿ ನೀಡಿದ ಬೇಂದ್ರೆ ಭವನ, ಮುರುಘಾ ಮಠ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಧರಣಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾ ಆಗಮನಕ್ಕೂ ಕೆಲ ನಿಮಿಷಗಳ ಪೂರ್ವದಲ್ಲಿ ಈ ಸ್ಥಳಗಳಿಗೆ ಶ್ವಾನ ದಳ ಹಾಗೂ ಬಾಂಬ ನಿಷ್ಕ್ರಿಯಯ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.

ಅಮಿತ್‌ ಶಾಗೆ ಮನವಿ: ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಜತೆ ಅಮಿತ್‌ ಶಾ ನಡೆಸಿದ ಆಪ್ತ ಸಮಾಲೋಚನೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂಬ ಸಮಾಜದ ಮನವಿಯನ್ನು ಸಂಸತ್‌ನಲ್ಲಿ ಅಂಗೀಕರಿಸಲು ಸಹಕರಿಸುವಂತೆ ಶ್ರೀಗಳು ಮನವಿ ಸಲ್ಲಿಸಿದರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಲಿಂಗಾಯತ ಸಮಾಜದ ಹಿತ ಕಾಪಾಡುವಂತೆ ಕೋರಿದ ಶ್ರೀಗಳ ಮನವಿ ಸ್ವೀಕರಿಸಿದ ಶಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next