ಮಂಗಳೂರು: ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಚಾಣಕ್ಯ ಹಾಗೂ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ 3 ದಿನಗಳ ಕರಾವಳಿ ಭೇಟಿ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ. ಶಾ ಭೇಟಿಯೊಂದಿಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆ ಗಳಲ್ಲಿ ಬಿಜೆಪಿ ನಾಯಕರು ಅಧಿಕೃತವಾಗಿ ಚುನಾವಣೆಯ ಅಖಾಡಕ್ಕಿಳಿದು ತೊಡೆ ತಟ್ಟಿಕೊಳ್ಳಲಿದ್ದಾರೆ.
ಪ್ರಮುಖ ಎದುರಾಳಿಗಳಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಘಟಾನುಘಟಿ ನಾಯ ಕರು ಒಬ್ಬರ ಹಿಂದೊಬ್ಬರು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಈ ಎರಡೂ ಪಕ್ಷ ಗಳು ಈ ಬಾರಿ ಜನಾದೇಶ ಪಡೆದುಕೊಳ್ಳು ವುದಕ್ಕೆ ಶಕ್ತಿಮೀರಿದ ಕಸರತ್ತಿನಲ್ಲಿ ತೊಡಗಿವೆ ಎನ್ನುವುದಕ್ಕೆ ನಿದರ್ಶನ. ಕಳೆದ ವಾರವಷ್ಟೇ ರಾಹುಲ್ ಗಾಂಧಿ ಉತ್ತರ ಕರ್ನಾಟಕದಲ್ಲಿ ಸಮಾವೇಶ, ರ್ಯಾಲಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಶಾ ಕರಾವಳಿಯಲ್ಲಿ ತಂತ್ರಗಾರಿಕೆಯ ಜಾಲ ಹರಡಲು ಆಗಮಿಸಿದ್ದಾರೆ.
ವಿಮಾನವಿಳಿದೊಡನೆ ಭಾಷಣ: ಕರಾವಳಿಗೆ ಕಾಲಿಟ್ಟ ಬಳಿಕ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದಕ್ಕೆ ಬಳಸಿಕೊಂಡಿದ್ದಾರೆ. ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ದರ್ಶನ ಪಡೆದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದ್ದಾರೆ, ಜತೆಗೆ ಪಕ್ಷದ ಪ್ರಮುಖರ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಪ್ರಮುಖರು ಈ ಸಭೆಯಲ್ಲಿ ಭಾಗವಹಿದ್ದು,
ಈ ವೇಳೆ ಶಾ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು ರಾಜಕೀಯ ಸ್ಥಿತಿಗತಿ ಹಾಗೂ ಬಿಜೆಪಿಗೆ ಪೂರಕ ಅಂಶಗಳು ಮತ್ತು ಸವಾಲುಗಳು, ಪಕ್ಷ ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ನಡೆದಿರುವ ಕಾರ್ಯಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಫೆ. 21ರಂದು ಅಮಿತ್ ಶಾ ಐದು ಜಿಲ್ಲೆ ಗಳನ್ನೊಳಗೊಂಡ ಮಂಗಳೂರು ಮತ್ತು ಶಿವಮೊಗ್ಗ ವಿಭಾಗಗಳ ಬಿಜೆಪಿ ಶಕ್ತಿಕೇಂದ್ರಗಳ ಪ್ರಮುಖರ ಜತೆ ಸಭೆ ಉಡುಪಿಯಲ್ಲಿ ನಡೆಸಲಿದ್ದಾರೆ.
ಮುಂದಿನ ಚುನಾವಣೆ ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ, ಕಾರ್ಯತಂತ್ರಗಳ ಕುರಿತು ಆಗಿರುವ ಪ್ರಗತಿಯ ಬಗ್ಗೆ ಅವಲೋಕನ ನಡೆಸಲಿದ್ದಾರೆ. ಆಗಬೇಕಾಗಿರುವ ಮುಂದಿನ ಕಾರ್ಯತಂತ್ರಗಳ ಕುರಿತು ಸೂಕ್ತ ನಿರ್ದೇಶಗಳನ್ನು ಇದೇ ಸಂದರ್ಭದಲ್ಲಿ ಅವರು ರಾಜ್ಯದಲ್ಲಿನ ಪಕ್ಷದ ಪ್ರಮುಖರಿಗೆ ನೀಡುವ ಸಾಧ್ಯತೆಯಿದೆ.
ಸಂಘಟನಾತ್ಮಕ ಸಮಾವೇಶಗಳು: ವಿದ್ಯಾರ್ಥಿಗಳೊಂದಿಗೆ ಸಂವಾದ, ಬೂತ್ ಪ್ರಮುಖರ ಸಮಾವೇಶ, ಯುವ ಮತದಾರ ರೊಂದಿಗೆ ಸಂವಾದ, ಶಕ್ತಿಕೇಂದ್ರಗಳ ಪ್ರಮು ಖರ ಸಭೆ, ಮೀನುಗಾರರ ಸಮಾವೇಶ, ಸಾಮಾಜಿಕ ಜಾಲತಾಣ ವಿಭಾಗದ ಪ್ರಮು ಖರ ಜತೆ ಸಮಾಲೋಚನೆ ಸೇರಿದಂತೆ ಅಮಿತ್ ಶಾ ವ್ಯೂಹಾತ್ಮಕವಾಗಿ ತಮ್ಮ ಪ್ರವಾಸ ವನ್ನು ಹೆಣೆದಿದ್ದಾರೆ.
ವಿಳಂಬ ಕಾರ್ಯತಂತ್ರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಅವಕಾಶ ನಿರೀಕ್ಷೆ ಹೊಂದಿ ಕ್ಷೇತ್ರದಲ್ಲಿ ತಮ್ಮ ನೆಲೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಆಕಾಂಕ್ಷಿಗಳು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಪಕ್ಷದ ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ ಅಮಿತ್ ಶಾ ಅವರ ಲೆಕ್ಕಾಚಾರ ಬೇರೆಯೇ ಆಗಿದೆ. ಈಗಾಗಲೇ ನಡೆಸಿರುವ ರಹಸ್ಯ ಸಮೀಕ್ಷೆಯ ವರದಿ ಅವರ ಬಳಿ ಇದ್ದು, ಪಟ್ಟಿ ಬಿಡುಗಡೆಯಲ್ಲಿ ವಿಳಂಬ ಕಾರ್ಯತಂತ್ರ ಅನುಸರಿಸುವ ಸಾಧ್ಯತೆ ಇದೆ.