Advertisement

ಮಾರಿ ಜಾತ್ರೆ; ಹೋವಳೆ ಕುಟುಂಬಕ್ಕೆ ಸೀರೆ ಬಾಗಿನದ ಗೌರವ

04:02 PM Feb 17, 2020 | Naveen |

ಸಾಗರ: ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿಧಿ-  ವಿಧಾನಗಳ ಆಚರಣೆಯಲ್ಲಿ ಒಂದಿನಿತು ಮುಕ್ಕಾಗುವುದನ್ನು ಒಪ್ಪದ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬೆಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಶಾಸ್ತ್ರಕ್ಕೆ ಮೊದಲು ವಧುವಿಗೆ ಹೊಸ ಸೀರೆ, ಬಂಗಾರ, ಬಾಸಿಂಗ ತಂದು ಸಿಂಗರಿಸುವ ಜವಾಬ್ದಾರಿ ಪ್ರತಿ ಬಾರಿಯೂ ಸಾಗರದ ನಾಮದೇವ ಸಿಂಪಿ ಸಮಾಜದ ದಿ.
ಗೋವಿಂದ ರಾವ್‌ ಹೋವಳೆ ಕುಟುಂಬದವರದಾಗುವುದು ವಿಶೇಷ.

Advertisement

ಹಿಂದೊಮ್ಮೆ ಅವತ್ತಿನ ಲೋಕಸಭಾ ಸದಸ್ಯ, ನಗರದ ಕೆ.ಜಿ. ಶಿವಪ್ಪನವರು ಜಾತ್ರಾ ಮೂರ್ತಿಗೆ ತಾವು ಸೀರೆ ನೀಡುವ ಕುರಿತು ಸಮಾಲೋಚಿಸಿದಾಗ, ಪೋತರಾಜನಿಂದ ತನ್ನ ಜಾತ್ರಾ ಮೂರ್ತಿಗೆ ಸೀರೆ ಬೇರೆಯವರು ನೀಡುವುದನ್ನು ನಾನು ಒಪ್ಪುವುದಿಲ್ಲ ಎಂದು ತಾಯಿ ಹೇಳಿಸಿದ್ದಳಂತೆ. ಆಗ ಶಿವಪ್ಪ ತಾಯಿಯ ಇಚ್ಛೆಗೆ ತಲೆಬಾಗಿ ತಾವು ನೀಡಬೇಕೆಂದಿದ್ದ ಸೀರೆಯನ್ನು ಜಾತ್ರೆಯ ದಿನದಂದು ಸಮರ್ಪಿಸಿದ ಕತೆಯನ್ನೂ ಹಲವರು ಹೇಳುತ್ತಾರೆ.

ಮಾರಿಕಾಂಬೆಗೆ ಹೊಸ ಸೀರೆಯನ್ನು ನೀಡುವ ಪದ್ಧತಿ 60ಕ್ಕೂ ಹೆಚ್ಚು ವರ್ಷದಿಂದ ನಡೆಸಿಕೊಂಡು ಬರುತ್ತಿರುವುದು ನಗರದ ನಾಮದೇವ ಸಿಂಪಿ ಸಮಾಜದ ದಿ. ಗೋವಿಂದರಾವ್‌ ಹೋವಳೆ ಕುಟುಂಬದವರು. ಗೋವಿಂದರಾವ್‌ ನಗರದ ತಿಲಕ್‌ ರಸ್ತೆಯಲ್ಲಿ ಭವಾನಿ ಕ್ಲಾತ್‌ ಸ್ಟೋರ್‌ ಎಂಬ ಉಡುಪಿನ ಅಂಗಡಿ ನಡೆಸುತ್ತಿದ್ದರು. ಅವರು ಆಗಿನಿಂದಲೂ ಮಾರಮ್ಮನಿಗೆ ಜಾತ್ರಾ ಮೂರ್ತಿಗೆ ಸೀರೆ ಕೊಟ್ಟು ಅದನ್ನು ಜಾತ್ರೆಯ ಹಿಂದಿನ ದಿನದಂದು ಮೂರ್ತಿಗೆ ಉಡಿಸಿ ಅಲಂಕಾರ ಮಾಡುತ್ತಿದ್ದರು.

ಹಿಂದಿನ ಜಾತ್ರೆಯವರೆಗೂ (2017) ಅವರೇ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದರು. ಈ ಬಾರಿ ಅವರು ನಿಧನ ಹೊಂದಿದ ಕಾರಣ ಅವರ ಮಕ್ಕಳಾದ ಹೋವಳೆ ಭವಾನಿ ಶಂಕರ್‌ರಾವ್‌, ವಿನಾಯಕ್‌ ರಾವ್‌, ಅರುಣ್‌ ಕುಮಾರ್‌ ಮತ್ತು ರಾಜರಾಮ್‌ ರಾವ್‌ ಮತ್ತು ಮೊಮ್ಮಗ ಡಾ| ಕಿರಣ್‌ಕುಮಾರ ರಾವ್‌ ಅವರು ಮುಂದುವರಿಸಿದ್ದಾರೆ. ಈ ಬಾರಿ ಗೋವಿಂದರಾವ್‌ ಅವರ ದ್ವಿತೀಯ ಪುತ್ರ ವಿನಾಯಕ ರಾವ್‌ ದೇವಿಗೆ ಸೀರೆ ಉಡಿಸಿ ಸಿಂಗರಿಸಲಿರುವರು. ಅವರು ಹೇಳುವಂತೆ ದೇವಿಗೆ ಸೀರೆ ಉಡಿಸಲು ಸುಮಾರು 5 ಗಂಟೆ ತಗಲುತ್ತದೆ. ದೇವಿಯ ಜಾತ್ರಾ ಮೂರ್ತಿಗೆ ಉಡಿಸಲು ಹಸಿರು ಬಣ್ಣದ ರೇಷ್ಮೆಯ 4 ಸೀರೆ ಬಳಸಲಾಗುತ್ತದೆ. ಸೆರಗಿಗೆ ಪ್ರತ್ಯೇಕ ಸೀರೆ, ರವಿಕೆಗೆ 5 ಮೀಟರ್‌ ಬಟ್ಟೆ ಮತ್ತು ಪ್ರತಿ ಕೈಗಳಿಗೆ ಒಂದು ಮೀಟರ್‌ ಬಟ್ಟೆ ಬೇಕಾಗುತ್ತದೆ. ಈ ಕುಟುಂಬ ಈಗಾಗಲೇ 20ಕ್ಕೂ ಹೆಚ್ಚು ಜಾತ್ರೆಗೆ ಸೀರೆ ನೀಡಿದ್ದು, ಈ ಬಾರಿಯೂ ಆ ಸಂಪ್ರದಾಯ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next