Advertisement

ಹೊಸ ಶಿಕ್ಷಣ ನೀತಿ ಜಾರಿಯಿಂದ ಶೈಕ್ಷಣಿಕ ವ್ಯವಸ್ಥೆ ಅಧೋಗತಿಗೆ: ಎಸ್ಎಫ್ಐ ರಾಷ್ಟ್ರಾಧ್ಯಕ್ಷ

07:34 PM Jul 23, 2022 | Team Udayavani |

ಗಂಗಾವತಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) ಜಾರಿಗೊಳಿಸಿ ಉಡುಪು, ಆಹಾರದ ಹೆಸರಿನಲ್ಲಿ ಹೆಣ್ಣು ಮಕ್ಕಳು ಆದಿವಾಸಿಗಳು, ದಲಿತರು, ಹಿಂದುಳಿದರು, ಅಲ್ಪಸಂಖ್ಯಾತರನ್ನು ಶಿಕ್ಷಣದ ದೂರ ಉಳಿಸಲು ಮನುವಾದಿಗಳು ವ್ಯವಸ್ಥಿತ ಸಂಚು ರೂಪಿಸಿದ್ದಾರೆ  ಎಂದು ಎಸ್ಎಫ್ಐ ರಾಷ್ಟ್ರಾಧ್ಯಕ್ಷ ವಿ. ಪಿ. ಸಾನು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಅವರು ಶನಿವಾರ ನಗರದ ಶ್ರೀ  ಚನ್ನಬಸವ ಸ್ವಾಮಿ ಕಲ್ಯಾಣ ಮಂಟಪದಲ್ಲಿ  ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ ) ರಾಜ್ಯಮಟ್ಟದ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರದ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ದೊಡ್ಡ ಪ್ರಮಾಣದ ಹೋರಾಟ ಚಳುವಳಿಯನ್ನು ಬೆಳೆಸಲಿದೆ. ಇದರ ಭಾಗವಾಗಿ ಆಗಸ್ಟ್ 1 ರಿಂದ ದೇಶಾದ್ಯಂತ ಶಿಕ್ಷಣ ಉಳಿಸಿ ಸಂವಿಧಾನಗೊಳಿಸಿ ದೇಶ ಉಳಿಸಿ ಎಂಬ ಹೆಸರಿನಲ್ಲಿ ಅಖಿಲ ಭಾರತ ಜಾತ ಹಮ್ಮಿಕೊಳ್ಳಲಾಗಿದೆ ಎಂದರು.

ಬಂಡವಾಳಶಾಹಿ ಆರ್ಥಿಕ ನೀತಿಗಳಿಂದಾಗಿ ಕೋವಿಡ್  ಸಂದರ್ಭದಲ್ಲಿ ಜಗತ್ತಿನಲ್ಲಿ ಆಹಾರ ಮತ್ತು ಲಸಿಕೆ ಅಸಮಾನ ಹಂಚಿಕೆಯಾಗಿದೆ. ಒಂದು ಕಾಲದಲ್ಲಿ ಅಮೇರಿಕದ ಆರ್ಥಿಕ ದಿಗ್ಬಂದನಕ್ಕೆ ಒಳಗಾಗಿ ಒಂದು ಸಿರಂಜ್ ನೀಡಲು ಸಹ ಪರದಾಡುತ್ತಿದ್ದ ಕ್ಯೂಬಾ ಸಮಾಜವಾದಿ ರಾಷ್ಟ್ರ ಈ ಕೋವಿಡ್ ಸಂದರ್ಭದಲ್ಲಿ ಜಗತ್ತಿನ ಶ್ರೀಮಂತ ದೇಶಗಳಿಗೆ ವೈದ್ಯರು ಹಾಗೂ ವೈದ್ಯಕೀಯ ಪರಿಕರಗಳನ್ನು ಕಳುಹಿಸಿದೆ. ಇದು ಜಗತ್ತಿನ ಜನರು ಕೋವಿಡ್ ನಂತರದಲ್ಲಿ ಬಲಪಂಥೀಯ ರಾಜಕಾರಣದಿಂದ ಎಡಪಂಥೀಯ ರಾಜಕಾರಣದ ಕಡೆಗೆ ವಾಲುತ್ತಿದ್ದಾರೆ ಎಂಬುದನ್ನು  ಸೂಚಿಸುತ್ತದೆ ಎಂದರು.

ಇದನ್ನೂ ಓದಿ:  ಲುಲು ಮಾಲ್ ನಮಾಜ್ ಪ್ರಕರಣ: ಯುಪಿ ಪೊಲೀಸರಿಂದ 5 ಮಂದಿ ಬಂಧನ

Advertisement

ಲ್ಯಾಟಿನ್ ಅಮೆರಿಕಾದ ದೇಶಗಳು ಸೇರಿದಂತೆ ಚಿಲಿ, ಬ್ರೆಜಿಲ್, ವಿಯೆಟ್ನಾಂ, ಕ್ಯೂಬಾ ಮುಂತಾದ ದೇಶಗಳು ಸಮಾಜವಾದಿ ಆರ್ಥಿಕ ನೀತಿಗಳಿಂದ ಆ ದೇಶದ ಎಲ್ಲಾ ಜನರಿಗೂ ಆಹಾರ, ಅಕ್ಷರ, ಆರೋಗ್ಯವನ್ನು ಉಚಿತವಾಗಿ ನೀಡುತ್ತಿವೆ. ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವರ ಅನುಸರಿಸಿದ ಬಂಡವಾಳಶಾಹಿ ಆರ್ಥಿಕ ನೀತಿಗಳಿಂದ ನಿರುದ್ಯೋಗ ಹೆಚ್ಚಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಒಂದೊಂದು ಸುಳ್ಳು ಹೇಳಿ ಯುವಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಹೇಳಿ ಉದ್ಯೋಗಗಳನ್ನು ನಾಶಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೀಗ ಚುನಾವಣೆ ಒಂದುವರೆ ವರ್ಷ ಇರುವಾಗ ಅಗ್ನಿಪತ್ ಯೋಜನೆ ಮೂಲಕ ಕೇವಲ ನಾಲ್ಕು ವರ್ಷಗಳಿಗೆ 10 ಲಕ್ಷ ಜನ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದಿರುವುದು ದೇಶದ ಭದ್ರತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡಲಿದೆ. ಏಕೆಂದರೆ ಅಧಿಕಾರಕ್ಕೆ ಬರುವ ಮುನ್ನ ಒನ್ ರಾಂಕ್ ಒನ್ ಪೆನ್ಷನ್ ಎಂದು ಸೈನಿಕರಿಗೆ ಭರವಸೆ ನೀಡಿ ಇದೀಗ ಉಲ್ಟಾ ಹೊಡೆದಿರುವ ಮೋದಿ ಸರ್ಕಾರ ಸೈನಿಕರಿಗೆ ಸಂಬಳ ನೀಡಲು ಸಹ ಸಾಧ್ಯವಿಲ್ಲ ಎಂದು ಹೇಳಿ ನಿರುದ್ಯೋಗಿ ಯುವಕರ ಪಡೆಯನ್ನು ಅಗ್ನಿಪಥ್ ಹೆಸರಿನಲ್ಲಿ ಬಳಸಿ ಬಿಸಾಕುವ ಕೆಲಸಕ್ಕೆ ಮುಂದಾಗಿದೆ ಎಂದು ಆಕ್ರೋಶ  ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್,  ಗ್ಯಾನೇಶ ಕಡಗದ್, ಶಿವಕುಮಾರ್ ಈಚನಾಳ,ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ರಾಜ್ಯ ಪದಾಧಿಕಾರಿಗಳಾದ ಗಾಯತ್ರಿ, ಶಿವಪ್ಪ, ಶಿವಕುಮಾರ್ ಮ್ಯಾಗಳಮನಿ, ಭೀಮನಗೌಡ, ಗ್ಯಾನೇಶ ಕಡಗದ್, ರಮೇಶ ವೀರಾಪೂರು,  ಸೋಮನಾಥ, ನಿರುಪಾದಿ, ಮಂಜುನಾಥ, ಮರಿನಾಗ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next