ಕೋಲಾರ: ಪುರುಷ-ಮಹಿಳಾ ಅನುಪಾತದಲ್ಲಿ ವ್ಯತ್ಯಾಸವಾಗುವುದರಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುವ ಆತಂಕವಿದ್ದು, ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ್ ತಿಳಿಸಿದರು.
ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ “ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ’ ಕಾರ್ಯಕ್ರಮದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕೀಳರಿಮೆ ಬೇಡ: ದೇಶದಲ್ಲಿ ಈಗಾಗಲೇ ಪುರುಷ-ಮಹಿಳಾ ಅನುಪಾತ 1000: 950ಕ್ಕಿಂತ ಕಡಿಮೆಯಾಗಿದೆ. ಹೆಣ್ಣು ಮಕ್ಕಳೆಂಬ ಕೀಳಿರಿಮೆ ಅಗತ್ಯವಿಲ್ಲ, ಇಂದು ಪ್ರತಿಯೊಂದು ರಂಗದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸುತ್ತಿರುವುದನ್ನು ಕಾಣುತ್ತಿದ್ದೇವೆ, ಭ್ರೂಣಹತ್ಯೆಯಂತ ಕೃತ್ಯಗಳು ಗಮನಕ್ಕೆ ಬಂದರೆ ಕೂಡಲೇ ದೂರು ನೀಡಿ, ಇದು ಮಹಾಪರಾಧ, ವೈದ್ಯರಿಗೆ 3 ವರ್ಷ ಶಿಕ್ಷೆ ಇದೆ, ಲಿಂಗಪತ್ತೆ ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು.
1098 ದೂರವಾಣಿಗೆ ಕರೆ ಮಾಡಿ: ದೇಶದಲ್ಲಿ 18ನೇ ಶತಮಾದಲ್ಲಿದ್ದ ಬಾಲ್ಯವಿವಾಹ ಪಿಡುಗು ಇಂದು ಕೆಲವು ಕಡೆ ನಡೆಯುತ್ತಿರುವ ದೂರುಗಳಿವೆ, ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ಕಡ್ಡಾಯವಾಗಿರಬೇಕು. ಅದನ್ನು ಮೀರಿ ಎಲ್ಲಾದರೂ ಮದುವೆಗಳು ನಡೆಯುತ್ತಿದ್ದರೆ ಕೂಡಲೇ 1098 ದೂರವಾಣಿಗೆ ಕರೆ ಮಾಡಿ ದೂರು ನೀಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ. ಶ್ರೀನಿವಾಸ್, ಕಳೆದ 2015ರಲ್ಲಿ ಹೆಣ್ಣುಮಕ್ಕಳನ್ನು ಉಳಿಸಿ ಯೋಜನೆ ಜಾರಿಗೆ ಬಂದಿದೆ, ನಿಗಧಿತ ವಯಸ್ಸಿಗೆ ಮುನ್ನಾ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಎಂದು ತಿಳಿಸಿ, ವಿವಿಧ ಇಲಾಖೆಗಳಿಂದ ಹೆಣ್ಣು ಮಕ್ಕಳಿಗಾಗಿ ಇರುವ ಆರೋಗ್ಯವಿಮಾ ಯೋಜನೆ, ಸುಕನ್ಯ ಸಮೃದ್ಧಿ ಯೋಜನೆ ಮತ್ತಿತರ ಕಾರ್ಯಕ್ರಮಗಳ ಕುರಿತು ತಿಳಿಸಿಕೊಟ್ಟರು.
ಕಿವಿಮಾತು: ವಕೀಲ ಎ.ಎಸ್.ಅರವಿಂದಕುಮಾರ್, ಹಿರಿಯ ವಕೀಲ ಸಿ.ಎನ್.ಬಸವರಾಜಪ್ಪ, ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಮಕ್ಕಳಿಗೆ ಸಮಗ್ರ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಪ್ರದೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಸಚ್ಚಿದಾ ನಂದಮೂರ್ತಿ ಕಾನೂನುಗಳ ಪಾಲನೆ, ದಿಕ್ಕರಿಸದರೆ ಆಗುವ ಶಿಕ್ಷೆ ಕುರಿತು ತಿಳಿಸಿ, ಹೆಣ್ಣುಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ, ವಕೀಲ ಎ.ಎಂ.ಅಪೂರ್ವ, ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ರಾಘವೇಂದ್ರ, ಶಿಕ್ಷಕರಾದ ಭವಾನಿ, ಶ್ರೀನಿವಾಸಲು, ಪಿ.ಲೀಲಾ, ಡಿ.ಚಂದ್ರಶೇಖರ್, ವಸಂತಮ್ಮ, ನೇತ್ರಾವತಿ ದಾಕ್ಷಾಯಿಣಿ, ಜಮುನಾ ಮತ್ತಿತರರಿದ್ದರು.