Advertisement

ಲೈಂಗಿಕ ಅಲ್ಪಸಂಖ್ಯಾಕರು, ಭಿಕ್ಷುಕರಿಂದ ಮತದಾನ 

11:23 AM May 14, 2018 | Team Udayavani |

ಮಂಗಳೂರು: ಕಳೆದ ಬಾರಿಯ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗಿದ್ದು, ಮತದಾನ ಜಾಗೃತಿ ಮೂಡಿಸುವಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ಮಂಗಳಮುಖೀಯರು ಹಾಗೂ ಭಿಕ್ಷುಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. 

Advertisement

ಸುಮಾರು ಎರಡು ತಿಂಗಳಿನಿಂದ ಜಿಲ್ಲಾ ಸ್ವೀಪ್‌ ಸಮಿತಿಯು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಕಾರ್ಯವನ್ನು ಮಾಡಿತ್ತು. 

“ಬನ್ನಿ, ಮತದಾನ ಕೇಂದ್ರಕ್ಕೆ’ 
ಜಿಲ್ಲಾ ಸ್ವೀಪ್‌ ಸಮಿತಿ ನಡೆಸಿದ ಎಲ್ಲ ಜಾಗೃತಿ ಕಾರ್ಯಕ್ರಮಗಳನ್ನೂ “ಬನ್ನಿ, ಮತದಾನ ಕೇಂದ್ರಕ್ಕೆ’ ಎಂಬ ಶೀರ್ಷಿಕೆಯಡಿಯಲ್ಲೇ ನಿರ್ವಹಿಸ ಲಾಗಿತ್ತು. ವಿವಿಧ ಸೆಲೆಬ್ರಿಟಿಗಳ ಮೂಲಕ ಆಡಿಯೋ ಜಿಂಗಲ್ಸ್‌, ವೀಡಿಯೋ
ಗಳನ್ನು ಮಾಡಿಕೊಂಡು ಜನರನ್ನು ಜಾಗೃತಿಗೊಳಿಸುವ ಕಾರ್ಯ ಮಾಡ ಲಾಗಿತ್ತು. ಜಿ.ಪಂ. ಸಿಇಒ ಸೇರಿದಂತೆ ಒಟ್ಟು 6 ಮಂದಿಯ ತಂಡ ಸ್ವೀಪ್‌ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ. ಜತೆಗೆ ಪ್ರತಿ ತಾ.ಪಂ.ಗಳ ಇಒಗಳನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. 

ಶೇಕಡಾವಾರು ಹೆಚ್ಚಳ
ಈ ಬಾರಿ ಜಿಲ್ಲೆಯಲ್ಲಿ ಶೇ.77.63 ಮತದಾನವಾಗಿದ್ದು, 2013ರ ಚುನಾವಣೆಯಲ್ಲಿ ಶೇ. 74.48 ಮತದಾನ ವಾಗಿತ್ತು. ಅಂದರೆ ಈ ಬಾರಿ ಶೇ.3.15 ಹೆಚ್ಚಳವಾದಂತಾಗಿದೆ. ಜಿಲ್ಲೆಯಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 76.67 ಮತದಾನವಾಗಿದ್ದು, ಈ ಬಾರಿ ಶೇ. 0.96 ಹೆಚ್ಚಳವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆದ ಶೇ. 64 ಮತದಾನ ಕಳೆದ ಬಾರಿಯ ಅತಿ ಕನಿಷ್ಟ. ಈ ಬಾರಿ ಅದು ಶೇ. 67.47ಕ್ಕೆ ಏರಿಕೆಯಾಗಿದೆ. 

31 ಲಕ್ಷ ರೂ. ಅನುದಾನ
ಮತದಾರರ ಜಾಗೃತಿ ಕಾರ್ಯಕ್ಕಾಗಿ ಸ್ವೀಪ್‌ ಸಮಿತಿಗೆ ಒಟ್ಟು 31 ಲಕ್ಷ ರೂ. ಅನುದಾನ ನೀಡಲಾಗಿದೆ. ಇದರಲ್ಲಿ 29 ಲಕ್ಷ ರೂ. ಆರಂಭದಲ್ಲಿ ನೀಡಲಾಗಿತ್ತು. ಬಳಿಕ 2 ಲಕ್ಷ ರೂ.ಗಳನ್ನು ಪಿಂಕ್‌ ಮತಗಟ್ಟೆಗಾಗಿ ತಲಾ 10 ಸಾವಿರ ರೂ.ಗಳಂತೆ ನೀಡಲಾಗಿದೆ. ಜಾಗೃತಿ ಕಾರ್ಯದ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿಕೊಂಡು ಅನುದಾನ ನಿರ್ವಹಿಸಲಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. 

Advertisement

ಮತದಾನದಲ್ಲಿ ಭಾಗಿ
ಜಿಲ್ಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾಕರು ಹಾಗೂ ಭಿಕ್ಷುಕರು ಮತದಾನದಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 42 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಪಚ್ಚನಾಡಿ ಭಿಕ್ಷುಕರ ಪುನರ್ವಸತಿ ಕೇಂದ್ರದ 22 ಮಂದಿ ಮತ ಚಲಾಯಿಸಿದ್ದಾರೆ. ಇವರು ಮತದಾನ ಮಾಡಲು ಸ್ವೀಪ್‌ ವಿಶೇಷ ಕಾಳಜಿ ವಹಿಸಿತ್ತು ಎಂದು ಜಿಲ್ಲಾ ಸ್ವೀಪ್‌ ಮುಖ್ಯಸ್ಥರು ತಿಳಿಸಿದ್ದಾರೆ. 

ಸ್ವೀಪ್‌ ಜಾಗೃತಿಗಿಂತಲೂ ಜಿಲ್ಲೆಯ ಪ್ರಜ್ಞಾವಂತ ಮತದಾರರು ಮತದಾನದ ಕುರಿತು ವಿಶೇಷ ಕಾಳಜಿ ವಹಿಸಿದ್ದಾರೆ. ನಾವು ಎಷ್ಟೇ ಅಭಿಯಾನ ನಡೆಸಿದರೂ ಅದರ ಯಶಸ್ಸು ಮತದಾರರ ಕೈಯಲ್ಲಿತ್ತು. ಸ್ವೀಪ್‌ ಚಟುವಟಿಕೆಯಲ್ಲಿ ಜಿಲ್ಲೆಯ ಸರಕಾರಿ ಇಲಾಖೆಗಳು, ವಿವಿಧ ಸಂಘಸಂಸ್ಥೆಗಳು ಸಹಕಾರ ನೀಡಿವೆ. ಶೇ. 3.25 ಮತದಾನ ಹೆಚ್ಚಳ ದೊಡ್ಡ ಬದಲಾವಣೆಯೇ ಆಗಿದೆ. 
– ಡಾ| ಎಂ.ಆರ್‌. ರವಿ, ಮುಖ್ಯಸ್ಥರು, ಸ್ವೀಪ್‌ ಸಮಿತಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next