ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಬಂದಿದ್ದ ಕೆಲ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಡಿ. 31ರ ರಾತ್ರಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗೆ ಬಂದಿದ್ದ 20ಕ್ಕೂ ಹೆಚ್ಚು ಯುವತಿಯರೊಂದಿಗೆ ಕೆಲ ಯುವಕರ ಗುಂಪು ಅಸಭ್ಯವಾಗಿ ವರ್ತಿಸಿದೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು ಕೇಳಿಬಂದಿದೆ. ಆದರೆ, ಈ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಸುದ್ದಿ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗಿದೆಯೇ ಹೊರತು ಯಾರೊಬ್ಬರೂ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗುಂಪಿನಲ್ಲಿದ್ದ ಕೆಲ ಯುವಕರು, ಯುವತಿಯರನ್ನು ಮುಟ್ಟಿ, ಅವರ ಬಟ್ಟೆ ಎಳೆಯಲು ಮುಂದಾದರು ಎಂಬ ಫೋಟೋಗಳು ಸುದ್ದಿವಾಹಿನಿಯಲ್ಲಿ ಬಿತ್ತರಗೊಂಡಿವೆ. ಆ ಫೋಟೋಗಳನ್ನು ಪಡೆದು ಪರಿಶೀಲಿಸಲಾಗುವುದು. ಅಲ್ಲದೆ, ಎಂ.ಜಿ.ರಸ್ತೆಯ ಸುತ್ತ 60ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿಗಳ ದೃಶ್ಯಾವಳಿ ಪರಿಶೀಲನೆ ಮಾಡಲಾಗುವುದು. ಲೈಂಗಿಕ ದೌರ್ಜನ್ಯ ನಡೆಸಿರುವುದು ಸಿಸಿವಿಟಿಯಲ್ಲಿ ಸೆರೆಯಾಗಿದ್ದರೆ, ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದುವರೆಗೂ ಯಾರೂ ದೂರು ಕೊಟ್ಟಿಲ್ಲ. ಆದರೆ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ನಾವೆಲ್ಲರೂ ತಲೆತಗ್ಗಿಸಬೇಕಾದ ವಿಚಾರ.
-ಡಾ.ಜಿ.ಪರಮೇಶ್ವರ, ಗೃಹ ಸಚಿವ