ಬೆಂಗಳೂರು: ಧಾರವಾಹಿ ಹಾಗೂ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಂಗೀತ ಸಂಯೋಜಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕೆ.ಎಸ್.ಲೇಔಟ್ ನಿವಾಸಿ ಮುರಳೀಧರ್ (42) ಬಂಧಿತ. ಆರೋಪಿ ಕೆಂಗೇರಿ ನಿವಾಸಿ 34 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬುಧವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಚಿತ್ರರಂಗದ ಪ್ರತಿಷ್ಠಿತ ಸಂಗೀತ ನಿರ್ದೇಶಕರ ಜತೆ ಸಂಗೀತ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಇತ್ತೀಚೆಗಷ್ಟೇ ಕುಮಾರಸ್ವಾಮಿ ಲೇಔಟ್‌ನಲ್ಲಿ ಸ್ವಂತ ಸ್ಟುಡಿಯೋ ತೆರೆದಿದ್ದು, ಮ್ಯೂಸಿಕ್ ಅಲ್ಬಂಗಳನ್ನು ಬಿಡುಗಡೆ ಮಾಡಿದ್ದಾನೆ. 2017ರಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಸಂತ್ರಸ್ತೆಯನ್ನು ಪರಿಚಯಿಸಿಕೊಂಡ ಆರೋಪಿ, 2019ರಲ್ಲಿ ಮೆಸೆಂಜರ್ ಮೂಲಕ ಸಂತ್ರಸ್ತೆಯನ್ನು ಸಂಪರ್ಕಿಸಿ, ಧಾರವಾಹಿ ಹಾಗೂ ಜಾಹೀರಾತುಗಳಲ್ಲಿ ನಟಿಸಲು ಇಷ್ಟ ಇದೆಯೇ ಎಂದು ಪ್ರಶ್ನಿಸಿದ್ದಾನೆ.
ಅದಕ್ಕೆ ಸಂತ್ರಸ್ತೆ ಒಪ್ಪುತ್ತಿದ್ದಂತೆ ತನ್ನ ಮೊಬೈಲ್ ನಂಬರ್ ಕಳುಹಿಸಿ, ಆಕೆ ಜತೆ ನಿರಂತರವಾಗಿ ವಾಟ್ಸ್‌ಆ್ಯಪ್ ಚಾಟಿಂಗ್ ಮಾಡಿದ್ದಾನೆ. ಒಮ್ಮೆ ಕುಮಾರಸ್ವಾಮಿ ಲೇಔಟ್‌ನ ಪ್ರತಿಷ್ಠಿತ ಕಾಲೇಜೊಂದರ ಬಳಿ ಇರುವ ತನ್ನ ಸ್ಟುಡಿಯೋಗೆ ಬರುವಂತೆ ಆಹ್ವಾನ ನೀಡಿದ್ದ. ಆದರೆ, ಸಂತ್ರಸ್ತೆ ಕೆಲಸದೊತ್ತಡದಿಂದ ಬರಲು ಸಾಧ್ಯವಾಗಿಲ್ಲ. ಆದರೆ, ಆರೋಪಿ ಆಕೆ ಜತೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
ಬೋಲ್ಡ್ ಟಾಸ್ಕ್ ಮಾಡಬೇಕಾಗುತ್ತೆ: ವಾಟ್ಸ್‌ಆ್ಯಪ್ ಚಾಟಿಂಗ್ ವೇಳೆ ತನ್ನ ಬಳಿ ಐಸ್‌ಕ್ರೀಂ, ಸೀರೆ, ಅಗರಬತ್ತಿ, ಚಿನ್ನಾಭರಣ ಸೇರಿ ನಾನಾ ಮಾದರಿಯ ಜಾಹೀರಾತುಗಳಿವೆ. ಪ್ರತಿ ಜಾಹೀರಾತಿಗೆ ಕನಿಷ್ಠ 25-30 ಸಾವಿರ ರೂ. ಸಂಭಾವನೆ ಇರುತ್ತದೆ. ಆದರೆ, ಹಗ್, ರೋಮ್ಯಾನ್ಸ್ ಹಾಗೂ ಸೆಕ್ಸ್ ಇಂತಹ ಬೋಲ್ಡ್ ಟಾಸ್ಕ್ಗಳು ಇರುತ್ತವೆ. ಅವುಗಳನ್ನು ಸರಿಯಾಗಿ ನಿಭಾಯಿಸಬೇಕು. ಒಳಉಡುಪುಗಳ ಜಾಹಿರಾತಿಗೆ 70 ಸಾವಿರ ರೂ. ಸಂಭಾವನೆ ಕೊಡಲಾಗುವುದು ಎಂದೆಲ್ಲ ಸಂತ್ರಸ್ತೆಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ಹೇಳಿದರು.
ಸ್ಟೇಟಸ್ ಲೈಕ್ ಮಾಡಲು ದುಂಬಾಲು: ಈ ಮಧ್ಯೆ ಕೆಲ ತಿಂಗಳ ಹಿಂದೆ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ತನ್ನದೇ ನಗ್ನ ಪೋಟೋಗಳನ್ನು ಹಾಕಿ, ಅವುಗಳನ್ನು ನೋಡಿ ಲೈಕ್ ಮಾಡುವಂತೆ ಸಂತ್ರಸ್ತೆಗೆ ದುಂಬಾಲು ಬಿದ್ದಿದ್ದ. ಆರೋಪಿಯ ಸ್ಟೇಟಸ್ ಕಂಡು ಮುಜುಗರಕ್ಕೊಳಗಾದ ಸಂತ್ರಸ್ತೆ ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಆತ, ಮಹಿಳಾ ನಿರ್ಮಾಪಕಿಯೊಬ್ಬರು ಸಿನಿಮಾವೊಂದಕ್ಕೆ ತನ್ನ ಬಳಿ ಸಹಿ ಮಾಡಿಸಿಕೊಂಡರು. ಒಳ್ಳೆಯ ಸಿನಿಮಾ ಎಂದು ಸಹಿ ಮಾಡಿದೆ, ಆದರೆ, ಅದು ನೀಲಿ ಚಿತ್ರ ಎಂಬುದು ಬಳಿಕ ಗೊತ್ತಾಯಿತು.
ಆ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಎಂದಾಗ, ತನ್ನ ಬೆತ್ತಲೆ ಫೋಟೋಗಳಿಗೆ ಬೇಡಿಕೆ ಇಟ್ಟಿದ್ದು, ಅವುಗಳನ್ನೇ ಸ್ಟೇಟಸ್‌ಗೆ ಹಾಕಿದ್ದೇನೆ. ಇಷ್ಟವಾದರೆ ಲೈಕ್ ಮಾಡಿ ಎಂದು ಆ ಪೋಟೋಗಳನ್ನು ಸಂತ್ರಸ್ತೆಗೆ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದ. ಅದರಿಂದ ಬೇಸರಗೊಂಡ ಸಂತ್ರಸ್ತೆ ಮಂಗಳವಾರ(ಆ.27) ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.