ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದ ಮುಂಬೈ ಮೂಲದ ವ್ಯಕ್ತಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿ.ಚಿರಾಗ್ (37) ಬಂಧಿತ ಆರೋಪಿ. ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಹಾಗೂ ಆರೋಪಿ ನಡುವೆ 2017ರ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸ್ನೇಹ ಬೆಳೆದಿದೆ. ಕೆಲ ದಿನಗಳ ಮಟ್ಟಿಗೆ ಆರೋಪಿ ಒಬ್ಬ ಉತ್ತಮ ಸ್ನೆಹಿತನಂತೆ ನಟಿಸಿದ್ದ.
ಬಳಿಕ ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲು ಆರಂಭಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಆರೋಪಿಯು ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಹಾಗೂ ತಿರುಚಿದ ಪೋಟೋಗಳನ್ನು ಕಳುಹಿಸಿ ಕಿರುಕುಳ ನೀಡಲು ಆರಂಭಿಸಿದ್ದ. ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ಚಾಟ್ ಮಾಡುವುದನ್ನು ನಿಲ್ಲಿಸಿದ್ದಳು.
ಇದರಿಂದ ಕೋಪಗೊಂಡಿದ್ದ ಚಿರಾಗ್, ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದು ಆಕೆ ಓದುತ್ತಿದ್ದ ಕಾಲೇಜಿಗೂ ಹೋಗಿ ಆಕೆಯನ್ನು ಹೊರಗೆ ಕರೆದು ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ವಿದ್ಯಾರ್ಥಿನಿ ಪ್ರತಿರೋಧ ತೋರಿದಾಗ ಸ್ಥಳದಿಂದ ಹೊರಟು ಹೋಗಿದ್ದ.
ಮುಂಬೈಗೆ ತೆರಳಿದ ಬಳಿಕ ಪುನಃ ಮೆಸೇಜ್ ಮಾಡಲು ಆರಂಭಿಸಿದ ಆರೋಪಿ, “ನನ್ನೊಂದಿಗೆ ಚಾಟ್ ಮಾಡದಿದ್ದರೆ ನಿನ್ನ ಪೋಷಕರಿಗೆ ಫೋಟೋ ಕಳುಹಿಸುತ್ತೇನೆ,’ ಎಂದು ಬೆದರಿಸಿದ್ದ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ ಪೋಷಕರಿಗೆ ವಿಷಯ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಪೋಷಕರು ನೀಡಿದ ದೂರಿನ ಅನ್ವಯ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂಬೈಗೆ ತೆರಳಿದ ಪೊಲೀಸರ ತಂಡ, ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಚಿರಾಗ್‌ನನ್ನು ಬಂಧಿಸಿ ಕರೆತಂದಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.