ಬೆಂಗಳೂರು: ಯುವತಿಯೊಬ್ಬಳು ಕೋರಮಂಗಲ ಪೊಲೀಸರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಬೆಂಗಳೂರು ನಗರ ಪೊಲೀಸರು ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಆ ಯುವತಿ ದೂರು ನೀಡಿದ್ದಾರೆ.
ಕೋರಮಂಗಲ ನಿವಾಸಿ 24 ವರ್ಷದ ಯುವತಿ ದೂರು ನೀಡಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತೆಗೆ ಸೂಚಿಸಿದ್ದಾರೆ.
ಏ.6 ರಂದು ಯುವತಿ ಕೋರಮಂಗಲದಲ್ಲಿರುವ ಪಬ್‌ಗ ಹೋಗಿದ್ದು, ಈ ವೇಳೆ ಪಬ್ ಸಿಬ್ಬಂದಿ ಜತೆ ಜಗಳವಾಡಿದ್ದಾರೆ. ಅಲ್ಲದೆ, ಹೊರಗಡೆ ಇದ್ದ ಹೂವಿನ ಕುಂಡಗಳನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಆಕೆಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ ಮದ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರ ಯಾವುದೇ ಪ್ರಶ್ನೆಗೆ ಆಕೆ ಉತ್ತರ ನೀಡಿಲ್ಲ ಎಂಬುದು ಪೊಲೀಸರ ಹೇಳಿಕೆ.
ಆದರೆ, ಯುವತಿ ಮಾತ್ರ ಪೊಲೀಸರೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡು, ಅದನ್ನು ಬೆಂಗಳೂರು ನಗರ ಪೊಲೀಸರು ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಖಾತೆಗೆ ಟ್ಯಾಗ್ ಮಾಡಿದ್ದಾರೆ.