Advertisement

ಫೇಸ್‌ಬುಕ್‌ ಗೆಳೆಯರ ಅಶ್ಲೀಲ ವರ್ತನೆ

11:52 AM Oct 30, 2018 | |

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶ, ಪೋಟೋಗಳನ್ನು ಪ್ರಕಟಿಸಿದ್ದವರ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ, ಸೈಬರ್‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಈ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಕ್ರಮವಹಿಸಿದ್ದಾರೆ. 

Advertisement

ಹಳೆಯ ಸ್ನೇಹಿತನೊಬ್ಬ, ಮದುವೆಗೂ ಮುನ್ನ ತನ್ನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಈಗ ಫೇಸ್‌ಬುಕ್‌ನಲ್ಲಿ ಅಪ್ಲೋಡ್‌ ಮಾಡಿದ್ದಲ್ಲದೆ, ತಮ್ಮ ಪತಿ ಹಾಗೂ ಸಂಬಂಧಿಕರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ವಿವಾಹಿತ ಮಹಿಳೆಯೊಬ್ಬರು ಸೈಬರ್‌ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ.

ತನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿರುವ ಸುನೀಲ್‌ ಬಿ.ಆರ್‌. ಎಂಬಾತ, ಇಬ್ಬರೂ ಜೊತೆಗಿರುವ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದಾನೆ. ಜತೆಗೆ, ಅಶ್ಲೀಲವಾಗಿ ಮೆಸೇಜ್‌ ಮಾಡಿ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, ನಕಲಿ ಇ-ಮೇಲ್‌ ಐಡಿ ಸೃಷ್ಟಿಸಿರುವ ಆರೋಪಿ, ಅದೇ ಇ-ಮೇಲ್‌ನಿಂದ ಪತಿ ಕೆಲಸ ಮಾಡುವ ಪ್ರತಿಷ್ಠಿತ ಕಂಪನಿಯ ಮೇಲ್‌ ಐಡಿಗೆ, “ನಿನ್ನ ಪತ್ನಿ ನಡತೆಗೆಟ್ಟವಳು, ಶೀಲ ಕಳೆದುಕೊಂಡವಳು’ ಎಂದು ಕೆಟ್ಟದಾಗಿ ಸಂದೇಶಗಳನ್ನು ಕಳುಹಿಸಿ ತನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದಾನೆ ಎಂದು ಆರೋಪಿಸಿ, ಮಹಿಳೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸುನೀಲ್‌ ಬಂಧನಕ್ಕೆ ಬಲೆ ಬೀಸಿದ್ದಾರೆ. 

ದೂರುದಾರ ಮಹಿಳೆ ವಿಧ್ಯಾಭ್ಯಾಸದ ವೇಳೆ ಪರಿಚಿತನಾಗಿದ್ದ ಸುನೀಲ್‌, ಸ್ನೇಹಿತನಾಗಿದ್ದ. ಈ ವೇಳೆ ಇಬ್ಬರೂ ಕೆಲವವೊಂದು ಫೋಟೋ ತೆಗೆಸಿಕೊಂಡಿದ್ದರು. ಇದಾದ ಕೆಲವು ವರ್ಷಗಳಲ್ಲಿ ಮಹಿಳೆಗೆ ಬೇರೊಬ್ಬರ ಜತೆ ವಿವಾಹವಾಗಿದೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಅಪರಿಚಿತ ನಂಬರ್‌ನಿಂದ ಕರೆ ಮಾಡಿದ ಆರೋಪಿ, ಅಶ್ಲೀಲವಾಗಿ ಮಾತನಾಡುತ್ತಿದ್ದ. ಜತೆಗೆ, ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಲು ಆರಂಭಿಸಿದ್ದ. ಕೂಡಲೇ ಆತನ ಮೊಬೈಲ್‌ ಸಂಖ್ಯೆಯನ್ನು ಮಹಿಳೆ ಬ್ಲಾಕ್‌ ಮಾಡಿದ್ದರು.

Advertisement

ಇದಾದ ಬಳಿಕ ಫೇಸ್‌ಬುಕ್‌ನಲ್ಲಿ ದೂರುದಾರ ಮಹಿಳೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದ ಆರೋಪಿ ಸುನೀಲ್‌, ಇಬ್ಬರೂ ಜತೆಗಿದ್ದ ಹಲವು ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದ. ಹಾಗೇ, ಮಹಿಳೆಯ ಪತಿಗೆ ಅಶ್ಲೀಲ ಸಂದೇಶ ಕಳುಹಿಸಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. 

ಬೆತ್ತಲೆ ಪೋಟೋ ಕಳಿಸು ಎಂದ ಎಫ್ಬಿ ಗೆಳೆಯ: ಮತ್ತೂಂದು ಪ್ರಕರಣದಲ್ಲಿ, “ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬ ಅರೆಬೆತ್ತಲೆ ಫೊಟೋ ಕಳಿಸುವಂತೆ ಬೇಡಿಕೆ ಇಟ್ಟಿದ್ದ. ಫೋಟೋ ಕಳುಹಿಸಲು ನಾನು ನಿರಾಕರಿಸಿದ್ದಕ್ಕೆ ನನ್ನ ಫೋಟೋಗಳ ಜತೆ ಅಶ್ಲೀಲ ಬರೆವಣಿಗೆ ಬರೆದು ಫೇಸ್‌ ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ’ ಎಂದು ಆರೋಪಿಸಿ ಯುವತಿಯೊಬ್ಬರು ದೂರು ನೀಡಿದ್ದಾರೆ. 

“ಕಳೆದ ಜೂನ್‌ ತಿಂಗಳಿನಲ್ಲಿ ಅಭಿ ಕಿಂಗ್‌ ಅಭಿ ಎಂಬ ಹೆಸರಿನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಮನವಿಯನ್ನು ಸ್ವೀಕರಿಸಿದ್ದೆ. ಕೆಲ ದಿನಗಳ ಬಳಿಕ ಚಾಟ್‌ ಆರಂಭಿಸಿದ ಆತ, ಗುಡ್‌ಮಾರ್ನಿಂಗ್‌ ಇತ್ಯಾದಿ ಮೆಸೇಜ್‌ಗಳನ್ನು ಮಾಡುತ್ತಿದ್ದ. ಬಳಿಕ ಇಬ್ಬರೂ ಪರಸ್ಪರ ಸಂದೇಶ ಕಳುಹಿಸುತ್ತಿದ್ದೆವು.’

“ಕೆಲವೇ ದಿನಗಳಲ್ಲಿ ತನ್ನ ವರಸೆ ಬದಲಿಸಿದ ಆರೋಪಿ, ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ. ಹೀಗಾಗಿ, ಆತನ ಜತೆ ಮೆಸೇಜ್‌ ಮಾಡುವುನ್ನು ನಿಲ್ಲಿಸಿದ್ದೆ. ಆದರೆ, ಪದೇ ಪದೆ ಮೆಸೇಜ್‌ ಮಾಡುತ್ತಿದ್ದ ಆರೋಪಿ, ನನ್ನ ಅರಬೆತ್ತಲೆ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ನನ್ನ ಫೇಸ್‌ಬುಕ್‌ ಖಾತೆಯಲ್ಲಿದ್ದ ಫೋಟೋಗಳನ್ನು ಬಳಸಿ ಅವುಗಳ ಜತೆ ಅಶ್ಲೀಲವಾಗಿ ಬರೆದು ಪೋಸ್ಟ್‌ ಮಾಡುತ್ತಿದ್ದಾನೆ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. 

ರಿಕ್ವೆಸ್‌ ಒಪ್ಪುವ ಮುನ್ನ ಎಚ್ಚರ ವಹಿಸಿ
* ಖಾಸಗಿ ಪೋಟೋಗಳನ್ನು ಫೇಸ್‌ಬುಕ್‌ ಜಾಲತಾಣಗಳಲ್ಲಿ ಶೇರ್‌ ಮಾಡಬೇಡಿ
* ಖಾಸಗಿ ಫೋಟೋಗಳನ್ನು ಯಾರಿಗೂ ಕಳುಹಿಸಬೇಡಿ, ಅವರೇ ಮುಂದೆ ತೊಂದರೆಕೊಡಬಹುದು
* ಸಾಮಾಜಿಕ ಜಾಲತಾಣಗಳಲ್ಲಿ ಸೆಕ್ಯೂರಿಟಿ ನೋಟಿಫಿಕೇಶನ್‌ ಬರುವ ಹಾಗೆ ಮಾಡಿಕೊಳ್ಳಬೇಕು
* ಅಪರಿಚಿತರ ಫ್ರೆಂಡ್‌ ರಿಕ್ವೆಸ್ಟ್‌ ಒಪಿಕೊಳ್ಳುವ ಮುನ್ನ ಎಚ್ಚರ ವಹಿಸಿ

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next