Advertisement

ಲೈಂಗಿಕ ದೌರ್ಜನ್ಯ: ನಾಲ್ಕು ಸ್ವಯಂಪ್ರೇರಿತ ಕೇಸು

12:16 PM Jan 06, 2017 | Team Udayavani |

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿ ಹೊಸ ವರ್ಷಾಚರಣೆ ವೇಳೆ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆರೋಪ ಸಂಬಂಧ ಪೊಲೀಸರು ಪ್ರತ್ಯೇಕವಾಗಿ ನಾಲ್ಕು ಸ್ವಯಂ ಪ್ರೇರಿತ ಎಫ್ಐಆರ್‌ ದಾಖಲಿಸಿದ್ದಾರೆ.

Advertisement

ಈ ಘಟನೆ ಕುರಿತು ಆಂಗ್ಲ ದಿನ ಪತ್ರಿಕೆ ಪ್ರಕಟಿತ ವರದಿ ಹಾಗೂ ಮಹಿಳೆಯೊಬ್ಬರ ಫೇಸ್‌ಬುಕ್‌ ಸ್ಟೇಟಸ್‌ ಆಧರಿಸಿ ಎಫ್ಐಆರ್‌ ದಾಖಲಾಗಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಪತ್ರಿಕೆ ಹಾಗೂ ಸ್ಟೇಟಸ್‌ ಹಾಕಿದ್ದ ಮಹಿಳೆಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ನಗರದ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಹೇಳಿದ್ದಾರೆ. 

ನಗರದ ತಮ್ಮ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಾಚರಣೆ ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಬಂದಿದೆ. ಈವರೆಗೆ ಸುಮಾರು 60ಕ್ಕೂ ಅಧಿಕ ಸಿಸಿಟೀವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದೇವೆ. ಹಲವು ಮಂದಿಯನ್ನು ವಿಚಾರಣೆ ಗೊಳಪಡಿಸಿದ್ದರೂ ಕೃತ್ಯದ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ ಎಂದರು.

ಅಲ್ಲದೆ ಈ ಘಟನೆ ಕುರಿತು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ತಾಣಗಳಲ್ಲಿ ಸ್ಟೇಟಸ್‌ ಬರೆದಿದ್ದವರನ್ನು ಸಂಪರ್ಕಿಸಿ ದೂರು ನೀಡುವಂತೆ ಮನವಿ ಮಾಡಿದ್ದೇವೆ. ಆದರೆ ಯಾರೊಬ್ಬರು ದೂರು ಕೊಡಲು ಮುಂದೆ ಬಂದಿಲ್ಲ. ಪೊಲೀಸರನ್ನು ಸಂಪರ್ಕಿಸಿದ್ದರೂ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈಗ ಪತ್ರಿಕೆ ಹಾಗೂ ಸಾಮಾಜಿಕ ತಾಣದ ಸ್ಟೇಟಸ್‌ ಆಧರಿಸಿ ಸ್ವಯಂ ಪ್ರೇರಿತ ಎಫ್ಐಆರ್‌ ಮಾಡಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ. 

ಮಹಿಳೆಯ ಸ್ಟೇಟಸ್‌ ಅನ್ನು ದೂರಾಗಿ ಪರಿಗಣಿಸಿ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನುಳಿದಂತೆ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಎರಡು ಹಾಗೂ ಅಶೋಕ ನಗರ ಠಾಣೆಯಲ್ಲಿ ತಲಾ ಒಂದು ಎಫ್ಐಆರ್‌ಗಳು ಆಂಗ್ಲ ದೈನಿಕದಲ್ಲಿ ಘಟನೆ ಕುರಿತು ಕೆಲವರು ನೀಡಿದ್ದ ಹೇಳಿಕೆ ಆಧಾರದ ಮೇಲೆ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಕಬ್ಬನ್‌ಪಾರ್ಕ್‌ ಹಾಗೂ ಅಶೋಕನಗರ ಠಾಣಾ ಎಫ್ಐಆರ್‌ ಸಂಬಂಧ 12 ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ. 

Advertisement

ಠಾಣೆಗಳಿಗೆ ದಿಢೀರ್‌ ಭೇಟಿ: ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರು ಗುರುವಾರ ಬೆಳಗ್ಗೆ ಠಾಣೆಗಳಿಗೆ ದಿಢೀರ್‌ ಭೇಟಿ ಕೊಟ್ಟು, ಸಿಬ್ಬಂದಿಯ ಕಾರ್ಯವೈಖರಿ, ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು.  ಠಾಣೆಗಳಿಗೆ ಭೇಟಿ ಕೊಡುವ ಕುರಿತು ಆಯುಕ್ತರು ಯಾವುದೇ ಮಾಹಿತಿ ನೀಡದೆ ತಮ್ಮ ಗನ್‌ ಮ್ಯಾನ್‌ ಮತ್ತು ಕಾರು ಚಾಲಕನೊಂದಿಗೆ ಉಪ್ಪಾರಪೇಟೆ, ಕಾಟನ್‌ಪೇಟೆ ಸೇರಿದಂತೆ ನಗರದ ವಿವಿಧ ಠಾಣೆಗಳಿಗೆ ಭೇಟಿ ಕೊಟ್ಟಿದ್ದಾರೆ.

ಆಯುಕ್ತರ ದಿಢೀರ್‌ ಭೇಟಿಯಿಂದ ಠಾಣೆಯ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರು. ಪ್ರವೀಣ್‌ ಸೂದ್‌ ಅವರು ಠಾಣೆಗೆ ಭೇಟಿ ಕೊಟ್ಟ ವೇಳೆ ಕೆಲ ಸಿಬ್ಬಂದಿ ಮಫ್ತಿಯಲ್ಲಿದ್ದರು. ಇದನ್ನು ಕಂಡು ಗರಂ ಆದ ಪೊಲೀಸರು ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ. ಕರ್ತವ್ಯ ನಿರತ ಸಿಬ್ಬಂದಿ ಸಮವಸ್ತ್ರದಲ್ಲಿರಬೇಕು ಎಂದು ಸೂಚಿಸಿದರು. ಬಳಿಕ ಠಾಣೆಯ ದಿನಚರಿ ಪುಸ್ತಕ ಹಾಗೂ ಅಲ್ಲಿನ ನಿರ್ವಹಣೆ ಬಗ್ಗೆ ಪರಿಶೀಲಿಸಿದರು.

ಉಪ್ಪಾರಪೇಟೆಯಲ್ಲಿರುವ ಪಶ್ಚಿಮ ವಿಭಾಗ ಡಿಸಿಪಿ ಎಂ.ಎನ್‌. ಅನುಚೇತ್‌ ಅವರ ಕಚೇರಿಗೂ ಆಯುಕ್ತರು ಭೇಟಿ ನೀಡಿದರು. ಈ ವೇಳೆ ಕಚೇರಿಯಲ್ಲಿ ಡಿಸಿಪಿ ಇರಲಿಲ್ಲ. ಬಳಿಕ ಫೋನಿನಲ್ಲಿ ಡಿಸಿಪಿಯೊಂದಿಗೆ ಸಂಭಾಷಣೆ ನಡೆಸಿ ಕೆಲ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಪರಂ ರಾಜೀನಾಮೆಗೆ ಮಹಿಳಾ ಬಿಜೆಪಿ ಆಗ್ರಹ
ಬೆಂಗಳೂರು:
ಯುವತಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ ಖಂಡಿಸಿ ಬೀದಿಗಿಳಿದ ಬಿಜೆಪಿಯ ಮಹಿಳಾ ಮೋರ್ಚಾ, ನೈತಿಕ ಹೊಣೆ ಹೊತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ನಗರದ ಆನಂದ್‌ರಾವ್‌ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಯುವತಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಇಂತಹ ಘಟನೆಗಳು ಕಪ್ಪು ಚುಕ್ಕೆಯಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸರ್ಕಾರ ಅನುವು ಮಾಡಿಕೊಡುತ್ತಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತಿಲ್ಲ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದ್ದು, ನೈತಿಕ ಹೊಣೆ ಹೊತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ನಗರದಲ್ಲಿ ಯುವತಿಯರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ. ನಗರದ ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದಾಗಿ ರಾಜ್ಯದ ಮಾನ ದೇಶದೆಲ್ಲೆಡೆ ಹರಾಜಾಗುವಂತಾಗಿದೆ.

ಹೀಗಿದ್ದರೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫ‌ಲರಾಗಿದ್ದಾರೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರುತಿ, ಉಪಾಧ್ಯಕ್ಷೆ ಶಿಲ್ಪಾ ಗಣೇಶ್‌, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾ ನಾಯಕ್‌ ಸೇರಿದಂತೆ ಇತರರು ಭಾಗವಹಿಸಿದ್ದರು.

ಬಾಣಸವಾಡಿ ಠಾಣೆಗೆ ಜೆಡಿಎಸ್‌ ಮುತ್ತಿಗೆ
ಬೆಂಗಳೂರು:
ಕಮ್ಮನಹಳ್ಳಿಯಲ್ಲಿ ನೂತನ ವರ್ಷಾಚರಣೆ ರಾತ್ರಿಯಂದು ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಯುವ ಜೆಡಿಎಸ್‌ ಕಾರ್ಯಕರ್ತರು ಗುರುವಾರ ಬಾಣಸವಾಡಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸ್‌ ರಾತ್ರಿ ಗಸ್ತು ವ್ಯವಸ್ಥೆಯ ನಿಷ್ಕ್ರಿಯತೆಯೇ ಘಟನೆಗೆ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಗರದೆಲ್ಲೆಡೆ ರಾತ್ರಿ ಗಸ್ತು ಬಿಗಿಗೊಳಿಸಲು ನಗರ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬೆಂಗಳೂರು ನಗರ ಯುವ ಜೆಡಿಎಸ್‌ ಅಧ್ಯಕ್ಷ ರಮೇಶ್‌ಗೌಡ, ಕಮ್ಮನಹಳ್ಳಿಯಲ್ಲಿ ನಡೆದ ಘಟನೆ ಇಡೀ ಸರ್ವಜ್ಞನಗರ ಕ್ಷೇತ್ರದಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಮಹಿಳೆಯರು ರಾತ್ರಿ ವೇಳೆ ಓಡಾಡಲು ಭಯ ಬೀಳುವಂತಾಗಿದೆ. ಪೊಲೀಸರ ಭದ್ರತಾ ವೈಫ‌ಲ್ಯವೂ ಇದಕ್ಕೆ ಕಾರಣವಾಗಿದೆ ಎಂದು ದೂರಿದರು. ಬೆಂಗಳೂರಿನಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು. ಹೊಯ್ಸಳ, ಚೀತಾ ವಾಹನಗಳನ್ನು ಸಂಖ್ಯೆ ಹೆಚ್ಚಿಸಬೇಕು. ಪೊಲೀಸ್‌ ಆಯುಕ್ತರೇ ಈ ಬಗ್ಗೆ ಗಮನ ಹರಿಸಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

2 ತಿಂಗಳಲ್ಲಿ 550 ಸಿಸಿಟೀವಿ ಅಳವಡಿಕೆ: ಪರಮೇಶ್ವರ್‌
ಬೆಂಗಳೂರು:
ಮುಂದಿನ ಎರಡು ತಿಂಗಳಲ್ಲಿ ನಗರದ ವಿವಿಧೆಡೆ 39 ಕೋಟಿ ರೂ. ವೆಚ್ಚದಲ್ಲಿ 550 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಅಲ್ಲದೆ, ಪ್ರಸ್ತುತ 15 ಲೈನ್‌ಗಳಿರುವ ಡಯಲ್‌ 100 (ಪೊಲೀಸ್‌ ನಿಯಂತ್ರಣ ಕೊಠಡಿ) ಲೈನುಗಳ ಸಂಖ್ಯೆಯನ್ನು ಸುಮಾರು 14 ಕೋಟಿ ರೂ. ವೆಚ್ಚದಲ್ಲಿ 100ಕ್ಕೆ ಹೆಚ್ಚಿಸಲಾಗುವುದು.

ಜತೆಗೆ ಮಹಿಳಾ ಪೊಲೀಸ್‌ ಸಿಬ್ಬಂದಿ ಪ್ರಮಾಣವನ್ನು ಶೇ. 20ಕ್ಕೆ ಹೆಚ್ಚಿಸಲಾಗುವುದು ಎಂದರು. ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಹೆಣ್ಣು ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಗುರುವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅನಾಹುತ ಸಂಭವಿಸಿದೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಂಡಿಲ್ಲ. ಮೊದಲೇ ಈ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ಈ ಘಟನೆ ನಂತರ ಅದನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. 550 ಸಿಸಿಟೀವಿ ಕ್ಯಾಮೆರಾ ಅಳವಡಿಕೆ ಮತ್ತು ಡಯಲ್‌ 100 ಲೈನ್‌ಗಳ ಸಂಖ್ಯೆ ಹೆಚ್ಚಳವನ್ನು ಎರಡು ತಿಂಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಒಟ್ಟಾರೆ 5000 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 550 ಸಿಸಿಟೀವಿ ಕ್ಯಾಮೆರಾ ಅಳವಡಿಸಲಾಗುವುದು. ಉಳಿದ ಕ್ಯಾಮೆರಾಗಳನ್ನು ಹಂತ ಹಂತವಾಗಿ ಅಳವಡಿಸಲಾಗುವುದು. ಯಾವುದು ಸೂಕ್ಷ್ಮ ಪ್ರದೇಶ? ಎಲ್ಲಿ ಅದರ ಅವಶ್ಯಕತೆ ಇದೆ ಎಂಬುದನ್ನು ಪೊಲೀಸರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next