ದೊಡ್ಡಬಳ್ಳಾಪುರ: ಇಂದು ಬಟ್ಟೆಗಳನ್ನು ಹೊಲಿಯುವ ಮೂಲಕ ಮಹಿಳೆಯರು, ಬದುಕನ್ನು ನಡೆಸುತ್ತಿದ್ದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೊಲಿಗೆಯಂತ್ರ ಸಹಕಾರಿಯಾಗಿದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ತಿಳಿಸಿದರು.
ನಗರದ ತಾಪಂ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವತಿಯಿಂದ ನೀಡಲಾದ ಪ.ಪಂಗಡಗಳ ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಿ ಮಾತನಾಡಿದ ಅವರು, ಹೊಲಿಗೆಯಂತ್ರ ಮಹಿಳೆಯರಿಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸೀರೆಗಿಂತ ಕುಪ್ಪಸ ಹೊಲಿಯುವ ಬೆಲೆ ಹೆಚ್ಚಾಗಿದ್ದು, ಸಾವಿರಾರು ರೂ. ಹಣವನ್ನು ಮಹಿಳೆಯರು ಮನೆಯಲ್ಲಿಯೇ ಸಂಪಾದನೆ ಮಾಡುತ್ತಿದ್ದಾರೆ ಎಂದರು. ಸರ್ಕಾರ ನೀಡುವ ಸೌಲಭ್ಯ ಸದುಪಯೋಗ
ಪಡಿಸಿಕೊಳ್ಳಬೇಕಾದ ಹೊಣೆಗಾರಿಕೆ ಸಾರ್ವಜನಿಕರದ್ದಾಗಿದೆ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕನಿಷ್ಠ ಬಡವರಿಗೆ ಮನೆ ನೀಡುತ್ತಿಲ್ಲ ಎಂದು ದೂರಿದರು.
ಸದುಪಯೋಗ ಪಡಿಸಿಕೊಳ್ಳಿ: ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ಸರ್ಕಾರ ಮತ್ತು ಶಾಸಕರು ಮಹಿಳೆಯರು ಸ್ವಾವಲಂಬಿ ಬದುಕನ್ನು ನಡೆಸಲು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ, ಹೊಲಿಗೆಯಂತ್ರ ವಿತರಿಸುತ್ತಿದ್ದೇವೆ. ಆದರೆ, ಇವುಗಳನ್ನು ಮಾರಾಟ ಮಾಡಿ ಕೊಂಡಿರುವುದು ವಿಪರ್ಯಾಸ. ಆದ್ದರಿಂದ, ಮಹಿಳೆಯರ ಜೀವನ ನೆಮ್ಮದಿಯಿಂದ ಇರಲೆಂ ದು ಹೊಲಿಗೆಯಂತ್ರ ವಿತರಿಸುತ್ತಿದ್ದೇವೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ತಾಪಂ ಇಒ ಶ್ರೀನಾಥ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚುಂಚೇಗೌಡ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಯೋಗೀಶ್, ಎಸ್ಟಿ ನಿಗಮದ ರಮೇಶ್, ಮುಖಂಡರಾದ ಜಿ.ಲಕ್ಷ್ಮೀಪತಿ, ಡಿ.ಆರ್. ಧೃವಕುಮಾರ್, ತಿಪ್ಪೂರು ಬೈರೇಗೌಡ, ರಾಮಕೃಷ್ಣಯ್ಯ, ಗಂಗಾಧರ್, ಪುಷ್ಪಲತಾ ಮತ್ತಿತರರಿದ್ದರು.