ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಸೋನೆ ಮಳೆಗೆ ಬಿ.ಎಚ್ ರಸ್ತೆಯ ಬದಿಯಲ್ಲಿ ನೀರು ನಿಂತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಮಳೆ ನೀರು ಚರಂಡಿಗೆ ಹರಿಯುವ ವ್ಯವಸ್ಥೆ ಮಾಡದಿರುವುದರಿಂದ ಕೆಲವೊಮ್ಮೆ ವಾಹನಗಳು ರಸ್ತೆ ಬಿಟ್ಟು ಪಕ್ಕದಲ್ಲಿ ಸಂಚರಿಸುವುದರಿಂದ ಕೆಸರುಗದ್ದೆಯಾಗಿ ಪರಿಣಮಿಸಿದೆ.
ನೆಹರು ಸರ್ಕಲ್ನಿಂದ ಶೆಟ್ಟಿಕೆರೆ ಗೇಟ್, ರೋಟರಿ ಶಾಲೆ ರಸ್ತೆಯಲ್ಲಿನ ಎರಡು ಬದಿ ಮಳೆ ನೀರು ಶೇಖರಣೆಯಾಗಿದ್ದು, ಪಾದಚಾರಿಗಳು ನಡೆದುಕೊಂಡು ಹೋಗಲು ತೀವ್ರ ತೊಂದರೆಯಾಗಿದೆ. ನೂರಾರು ವಿದ್ಯಾರ್ಥಿಗಳು ದಿನನಿತ್ಯ ಇದೇ ರಸ್ತೆಯಲ್ಲಿ ಶಾಲಾ- ಕಾಲೇಜುಗಳಿಗೆ ಹೋಗುತ್ತಾರೆ. ವಾಹನಗಳು ಪಕ್ಕದಲ್ಲೇ ಸಂಚರಿಸುವಾಗ ಕೆಸರು ಸಿಡಿದು ಬಟ್ಟೆಯ ಮೇಲಾಗುತ್ತದೆ. ವಾಹನಗಳು ಬಂದರೆ ಕೆಸರು ಸಿಡಿಯುವುದರಿಂದ ರಕ್ಷಿಸಿಕೊಳ್ಳಲು ಓಡುವ ಸ್ಥಿತಿ ಇದೆ. ಪಟ್ಟಣ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದಿರುವುದರಿಂದ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ.
ಚರಂಡಿಗೆ ನೀರು ಹೋಗದೆ ಸಮಸ್ಯೆ: ಬಿ.ಎಚ್. ರಸ್ತೆ ಬದಿಯಲ್ಲಿನ ಚರಂಡಿಗೆ ಮಳೆ ನೀರು ಸರಾಗವಾಗಿ ಹರಿಯಲು ಕಾಲುವೆ ಮಾಡದ ಕಾರಣ ಮಳೆ ನೀರು ರಸ್ತೆ ಪಕ್ಕ ನಿಂತುಕೊಳ್ಳುತ್ತಿದೆ. ದಿನನಿತ್ಯ ರಸ್ತೆಗೆ ಹಾಗೂ ಪುರಸಭೆಗೆ ಸಂಬಂಧಿಸಿದ ಅಧಿಕಾರಿಗಳು ಇದೇ ಮಾರ್ಗವಾಗಿ ಓಡಾಡುತ್ತಿದ್ದರೂ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿಲ್ಲ. ಮಳೆ ನೀರು ಚರಂಡಿಗೆ ಹೋಗುವಂತೆ ವ್ಯವಸ್ಥೆ ಮಾಡದ ಕಾರಣ ಸಾವಿರಾರು ಜನರಿಗೆ ತೊಂದರೆಯಾಗಿದೆ. ಪಟ್ಟಣದ ನಿರ್ವಹಣೆ ಹೊತ್ತಿರುವ ಪುರಸಭೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೋನೆ ಮಳೆ ಬಂದರೆ ಸಾಕು ಮಾರುತಿ ನಗರದ ತಗ್ಗು ಪ್ರದೇಶದಲ್ಲಿರುವ ಗ್ರ್ಯಾಂಟ್ ಮನೆಗಳು ಸೇರಿ 15ರಿಂದ 20 ಮನೆಗಳಿಗೆ ನೀರು ನುಗ್ಗುತ್ತಿದೆ.
ದುರ್ಗಮ್ಮನಗುಡಿ ಬೀದಿ, ಆಚಾರ್ ಬೀದಿ, ಲಿಂಗಾಯತರ ಬೀದಿ, ಮಸೀದಿ ಬೀದಿಯಲ್ಲಿ ಬೀಳುವ ಮಳೆ ನೀರು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನುಗ್ಗುತ್ತದೆ. ಸಮಸ್ಯೆ ದಶಕಗಳಿಂದ ಇದೆ. ಜೋರು ಮಳೆ ಬಂದರಂತೂ ಬಡವರ ಪಾಡು ಹೇಳತೀರದು. ರಾತ್ರಿ ವೇಳೆ ಮಳೆ ಬಂದರೆ ಜಾಗರಣೆ ಅನಿವಾರ್ಯ. ಮಳೆಯ ನೀರು ಬಂದರೆ ಸಹಿಸಿಕೊಳ್ಳಬಹುದು. ಆದರೆ ತ್ಯಾಜ್ಯ ಹರಿದು ಬರುವುದರಿಂದ ದುರ್ನಾತ ಬೀರುತ್ತದೆ.
ಒಮ್ಮೆ ಮನೆ ಒಳಗೆ ನುಗ್ಗಿದರೆ ಒಂದು ವಾರ ಫಿನಾಯಿಲ್ ಹಾಕಿ ತೊಳೆದರೂ ವಾಸನೆ ಹೋಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಹರೀಶ್.
ಈ ಹಿಂದೆ ಗ್ರಾಪಂ ಇದ್ದಾಗ ಅನೇಕ ಸಲ ದೂರು ನೀಡಲಾಗಿದ್ದರೂ ಸ್ಪಂದಿಸಿಲ್ಲ. ಜೋರಾಗಿ ಮಳೆ ಬಂದರೆ ಮನೆ ಕುಸಿಯುವ ಆತಂಕದಲ್ಲಿ ದಿನ ಕಳೆಯುತ್ತಾರೆ. ಇನ್ನಾದರೂ ಅಧಿಕಾರಿಗಳು ಗಮನಹರಿಸಬೇಕಿದೆ.
● ಚೇತನ್