ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವಂತೆ ಉಪ್ಪಳದಲ್ಲಿ ಕಿರು ಸೇತುವೆ ನಿರ್ಮಿಸಲು ತೋಡಿದ ಬೃಹತ್ ಹೊಂಡದಲ್ಲಿ ಪರಿಸರದಿಂದ ಮಲಿನ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದೆ.
ಮಂಗಲ್ಪಾಡಿ ಗ್ರಾ.ಪಂ.ವ್ಯಾಪ್ತಿಯ ಉಪ್ಪಳ ಬಸ್ ನಿಲ್ದಾಣ ಸಮೀಪದ ಮೀನು ಮಾರುಕಟ್ಟೆಗೆ ತೆರಳುವ ರಸ್ತೆಯ ಹೆದ್ದಾರಿ ಬದಿಯಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ತೋಡಿದ ಹೊಂಡದಲ್ಲಿ ಮಲಿನ ನೀರು ತುಂಬಿಕೊಂಡಿದೆ. ಹೆದ್ದಾರಿಯ ಇಕ್ಕೆಡೆಯಲ್ಲಿರುವ ಫ್ಲಾಟ್ ಹಾಗೂ ವ್ಯಾಪಾರ ಸಂಸ್ಥೆ ಹೊಂದಿರುವ ಕಟ್ಟಡಗಳಿಂದ ಮಲಿನ ನೀರು ಹರಿದು ತುಂಬಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಹೀಗೆ ತುಂಬಿಕೊಂಡ ಮಲಿನ ನೀರು ದುರ್ವಾಸನೆಯಿಂದ ಕೂಡಿದ್ದು, ಹೆದ್ದಾರಿಯಲ್ಲಿ ಹಾಗೂ ಮೀನು ಮಾರುಕಟ್ಟೆಗೆ ತೆರಳುವವರು ಮೂಗು ಮುಚ್ಚಿಕೊಂಡೇ ತೆರಳಬೇಕಾದ ಸ್ಥಿತಿ ಎದುರಾಗಿದೆ.
ಹಲವು ವರ್ಷಗಳಿಂದ ಈ ಮಲಿನ ನೀರು ಮೀನು ಮಾರುಕಟ್ಟೆ ರಸ್ತೆಯ ಚರಂಡಿಯಿಂದ ಹರಿದು ಹೋಗುತ್ತಿತ್ತು. ಆದರೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಿರು ಸೇತುವೆ ನಿರ್ಮಿಸಲು ಹೊಂಡವನ್ನು ತೋಡಲಾಗಿದೆ. ಅದರಲ್ಲಿ ಹರಿದು ಬಂದ ಮಲಿನ ನೀರು ಸಂಗ್ರಹಗೊಂಡಿದೆ. ಹೀಗೆ ಮಲಿನ ನೀರು ಹರಿದು ಬರುತ್ತಿರುವುದರಿಂದ ಕಿರು ಸೇತುವೆ ನಿರ್ಮಾಣದ ಕಾಮಗಾರಿ ಆರಂಭಿಸಲು ಕೂಡ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ಶಾಶ್ವತ ಪರಿಹಾರಕ್ಕೆ ಒತ್ತಾಯ
ಉಪ್ಪಳ ಪರಿಸರದಲ್ಲಿ ಹಲವಾರು ಕಟ್ಟಡ ಹಾಗೂ ಪ್ಲಾಟ್‌ಗಳಿಂದ ರಾಜಾರೋಷವಾಗಿ ಮಲಿನ ನೀರು ಸಾರ್ವಜನಿಕ ಸ್ಥಳಕ್ಕೆ ಹರಿಯ ಬಿಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.