Advertisement

ಒಳಚರಂಡಿ ಅವ್ಯವಸ್ಥೆ: ಪಡುಬಿದ್ರಿಯಲ್ಲಿ ಕೃತಕ ನೆರೆ ಭೀತಿ

06:00 AM Jun 03, 2018 | Team Udayavani |

ಪಡುಬಿದ್ರಿ: ಇಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕೆಲಸ ಅಪೂರ್ಣವಾದ್ದರಿಂದ ಚರಂಡಿ ವ್ಯವಸ್ಥೆ ಇಲ್ಲದೇ ಈ ಬಾರಿ ಮಳೆಗಾಲದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಆತಂಕ ಕಾಡಿದೆ. ಹೆದ್ದಾರಿ ಅಕ್ಕಪಕ್ಕದ ಗ್ರಾ.ಪಂ.ಗಳಾದ ಎರ್ಮಾಳು, ಉಚ್ಚಿಲದಲ್ಲೂ ಇದೇ ಪರಿಸ್ಥಿತಿ ಇದೆ. ಈ ಬಗ್ಗೆ ಗ್ರಾಮ ಪಂಚಾಯತ್‌ನಲ್ಲಿ ವಿಚಾರಿಸಿದರೆ, ಅವರು ಹೆದ್ದಾರಿ ಇಲಾಖೆಯತ್ತ ಕೈತೋರಿಸುತ್ತಿದ್ದಾರೆ.  

Advertisement

ದೇಗುಲಕ್ಕೆ ನೀರು ನುಗ್ಗುವ ಆತಂಕ 
ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ಸುತ್ತಲೂ ನೀರು ನಿಲ್ಲುತ್ತದೆ. ಪಡುಬಿದ್ರಿ ನಾಗರಾಜ ಎಸ್ಟೇಟ್‌ ಬಳಿ ಪ್ರತಿ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾ ಗುತ್ತದೆ. ಈ ಬಾರಿ ಪಡುಬಿದ್ರಿ ಪಂಪ್‌ ಹೌಸ್‌, ಹೆದ್ದಾರಿ ಭಾಗದ ಮನೆಗಳಿಗೆ ಅಪಾಯ ಹೆಚ್ಚಿದೆ. 


ಬಿಲ್ಲವ ಸಂಘದಿಂದ ಬೀಡುವರೆಗೆ ಒಳಚರಂಡಿ ಇಲ್ಲ 
ಹೆದ್ದಾರಿ ಕಾಮಗಾರಿಯಿಂದಾಗಿ ಇಲ್ಲಿನ ಬಿಲ್ಲವ ಸಭಾಭವನದಿಂದ ಪಡುಬಿದ್ರಿ ಬೀಡುವರೆಗಿನ ಸುಮಾರು 3ಕಿಮೀ ದೂರಕ್ಕೆ ಎಲ್ಲೂ ಸಮರ್ಪಕ ಒಳಚರಂಡಿ ವ್ಯವಸ್ಥೆಗಳಿಲ್ಲ. ಗುತ್ತಿಗೆದಾರ ನವಯುಗ ನಿರ್ಮಾಣ ಕಂಪೆನಿ ಕಾಂಕ್ರೀಟ್‌ ಪೈಪುಗಳನ್ನು ತಂದು ಅಲ್ಲಲ್ಲಿ ಹಾಕಿಕೊಂಡಿದೆ. ಆದರೆ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಮಳೆ ಬಂದಾಗ ಎಚ್ಚರದಲ್ಲೇ ಇರಬೇಕಾಗಿದೆ. ಮುಂದೆ ಹೆದ್ದಾರಿ ಪಕ್ಕದ ಗ್ಯಾರೇಜ್‌, ವಿವಿಧ ವ್ಯವಹಾರ ಮಳಿಗೆಗಳು, ಪಾಂಡುರಂಗ ಸಾ ಮಿಲ್‌ ಮುಂತಾದ ಪ್ರದೇಶಗಳು ನೆರೆ ಹಾವಳಿ ಸಂಕಷ್ಟಕ್ಕೆ ಈಡಾಗಲಿವೆ.

ಪೇಟೆಗೂ ಅಪಾಯ  
ಪಡುಬಿದ್ರಿ ಕೆಳಗಿನ ಪೇಟೆ ಬಳಿ ವೆಲ್‌ ಕಮ್‌ ಪಂಪ್‌ ಹೌಸ್‌ ಬಳಿಯ ತೋಡಿಗೆ ಹಲವು ವರ್ಷಗಳಿಂದ ಸ್ಥಳೀಯರು ಕಟ್ಟ ಕಟ್ಟಿ ಭತ್ತ ಬೆಳೆಯುತ್ತಿದ್ದರು. ಆ ತೋಡಿನ ನೀರು ಕವಲುಗಳಾಗಿ ಮುಂದೆ ಹೋಗುತ್ತದೆ, ಕೆಲವು ಮದ್ಮಲ್‌ ಕೆರೆಗೂ ಸೇರುತ್ತದೆ. ಇನ್ನೊಂದು ತೋಡಿನ ಮೂಲಕ ಸಮುದ್ರ ಸೇರುತ್ತದೆ. ಆದರೆ, ಮದ್ಮಲ್‌ ಕೆರೆ ಅಭಿವೃದ್ಧಿ ವೇಳೆ ಸಣ್ಣ ತೋಡುಗಳನ್ನು ಘನ ವಾಹನಗಳ ಸಂಚಾರಕ್ಕಾಗಿ ಮುಚ್ಚಿದ್ದರಿಂದ ಸಮಸ್ಯೆ ಬಿಗಡಾಯಿಸಿದೆ. 


ಮುಖ್ಯ ಡ್ರೈನ್‌ಗಳಿಗೆ ಸಂಪರ್ಕ 
ಸರ್ವಿಸ್‌ ರಸ್ತೆ ಕಾಮಗಾರಿ ಮಳೆಗಾಲಕ್ಕೆ ಮುನ್ನ ಕಷ್ಟ ಸಾಧ್ಯ. ಮಳೆ ನೀರು ಹರಿದು ಹೋಗಲು ಹೆದ್ದಾರಿಯಲ್ಲಿರುವ ಮುಖ್ಯ ಡ್ರೈನ್‌ಗಳಿಗೆ ಸಂಪರ್ಕ ಕಲ್ಪಿಸಿದ್ದೇವೆ. 
– ಶಂಕರ್‌ ರಾವ್‌, ನವಯುಗ ಎಂಜಿನಿಯರ್‌  

ಮನೆಯೊಳಗೆ ನೀರು
ಚರಂಡಿ ವ್ಯವಸ್ಥೆ ಸರಿಯಾಗಿಲ್ಲದಿದ್ದರಿಂದ ಜೋರು ಮಳೆ ಬಂದಾಗ ನೀರು ಮನೆಯೊಳಕ್ಕೆ ನುಗ್ಗುತ್ತದೆ. ಮೊನ್ನೆಯ ಮಹಾಮಳೆಯ ಸಂದರ್ಭದಲ್ಲೂ ಇಲ್ಲಿನ ನಿವಾಸಿಗಳಿಗೆ ಆತಂಕ ಕಾಡಿತ್ತು.
– ಮಾಧವ ಸಿ. ಶೆಟ್ಟಿ, ಸ್ಥಳೀಯರು

– ಆರಾಮ

Advertisement
Advertisement

Udayavani is now on Telegram. Click here to join our channel and stay updated with the latest news.

Next