Advertisement

ಬಾಪುತೋಟ-ಸಸಿತೋಟದ ಕೆಲವು ಮನೆಗಳಿಗೆ ಕೃತಕ ನೆರೆ ಭೀತಿ!

11:33 PM Jul 05, 2020 | Sriram |

ಮಲ್ಪೆ: ಮಳೆ ಬಂತೆಂದರೆ ರಾಷ್ಟ್ರೀಯ ಹೆದ್ದಾರಿ (169ಎ) ಮಲ್ಪೆ ನಗರದ (ಮುಖ್ಯ ಜಂಕ್ಷನ್‌ನಿಂದ ಫಿಶರೀಸ್‌ ಶಾಲೆಯವರೆಗೆ) ಮುಖ್ಯ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತದೆ. ನೆಪ ಮಾತ್ರಕ್ಕೆ ಚರಂಡಿ ಇದ್ದರೂ ನೀರು ಮಾತ್ರ ರಸ್ತೆಯ ಮೇಲೆ ಹರಿದು ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಮಳೆ ಆರಂಭಗೊಂಡು ತಿಂಗಳು ಕಳೆದರೂ ಸಂಬಂಧಪಟ್ಟ ಆಡಳಿತ ಇನ್ನೂ ಸಮರ್ಪಕ ವ್ಯವಸ್ಥೆಗೆ ಮುಂದಾಗಿಲ್ಲವೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಚರಂಡಿ ಬ್ಲಾಕ್‌
ಮುಖ್ಯರಸ್ತೆಯಲ್ಲಿ ಮಳೆನೀರು ಹೊಳೆಯಂತೆ ಹರಿಯಲು ಪ್ರಮುಖ ಕಾರಣ ಪಡುಗುಡ್ಡೆ ಸರ್ವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಾದು ಹೋಗುವ ಚರಂಡಿಯು ಮುಖ್ಯ ರಸ್ತೆಯಲ್ಲಿ ಬ್ಲಾಕ್‌ ಆಗಿರುವುದು. ಇಲ್ಲಿ ಕಲ್ಲು ಚಪ್ಪಡಿ ಕುಸಿದು ಚರಂಡಿಯೊಳಗೆ ಸೇರಿಕೊಂಡು ನೀರು ಹರಿಯುತ್ತಿಲ್ಲ. ಹಿಂದೆ ಮಲ್ಪೆ ಮೂರು ರಸ್ತೆ ಕೂಡುವಲ್ಲಿ ಮುಖ್ಯ ಜಂಕ್ಷನ್‌ನಿಂದ ಹರಿದು ಬಂದ ಮಳೆ ನೀರು ಈ ತೋಡಿನ ಮೂಲಕ ಹರಿದು ಹೋಗುತ್ತಿತ್ತು. ಇದೀಗ ಈ ತೋಡು ಬ್ಲಾಕ್‌ ಆಗಿದ್ದರಿಂದ ಮಳೆ ನೀರು ರಸ್ತೆಯ ತುಂಬೆಲ್ಲ ಹರಿಯುತ್ತಿದೆ. ಶನಿವಾರ ಸಂಜೆ ನಗರಸಭೆ ಚರಂಡಿ ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದ್ದರೂ ಸಮಸ್ಯೆ ಮಾತ್ರ ಪರಿಹಾರಗೊಂಡಿಲ್ಲ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಳೆ ಬಂದಾಗ ಈ ಚರಂಡಿಗಳನ್ನು ಮಳೆ ನೀರು ಹರಿದು ಮುಂದಕ್ಕೆ ಹೋಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡುವುದೇ ಇಲ್ಲ. ಹೀಗಾಗಿ ಪ್ರತಿ ಬಾರಿ ಮಳೆ ಬಂದಾಗ ಮಳೆನೀರು ರಸ್ತೆಯಲ್ಲಿ ಹರಿದು ಜನತೆಗೆ ಸಮಸ್ಯೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಸಸಿತೋಟದಲ್ಲಿ ಕೃತಕ ನೆರೆ ಸೃಷ್ಟಿ
ಮುಖ್ಯ ರಸ್ತೆಯಲ್ಲಿ ಹರಿದು ಬಂದ ಮಳೆನೀರು ಫಿಶರೀಸ್‌ ಶಾಲೆಯ ವರೆಗೂ ರಸ್ತೆಯ ಮೇಲೆ ಹರಿದು ಮುಂದೆ ಬಾಪುತೋಟ- ಸಸಿ ತೋಟದ ಭಾಗಕ್ಕೆ ಬಂದು ತಗ್ಗು ಪ್ರದೇಶವಾದ್ದರಿಂದ ಹೊಳೆಯಂತೆ ನಿರ್ಮಾಣವಾಗುತ್ತಿದೆ. ಇಲ್ಲಿನ ಸಂಪರ್ಕ ರಸ್ತೆ ಜಲಾವೃತಗೊಂಡಿದ್ದು ಈ ಭಾಗದ ಸುಮಾರು 25 ಮನೆಗಳಿಗೆ ಕೃತಕ ನೆರೆ ಭೀತಿ ಉಂಟಾಗಿದೆ.

ಕೆಲಸ ಪ್ರಗತಿಯಲ್ಲಿ
15 ದಿವಸಗಳ ಹಿಂದೆ ನಗರಸಭೆಯ ವತಿಯಿಂದ ಚರಂಡಿ ಹೂಳು ತೆಗೆಯುವ ಕೆಲಸ ನಡೆದಿತ್ತು. ಆದರೆ ಚರಂಡಿ ಬ್ಲಾಕ್‌ ಆಗಿರುವ ಭಾಗದಲ್ಲಿ ಸರಿಪಡಿಸಲು ಜೆಸಿಬಿ ಇಲ್ಲವೆಂದು ಗುತ್ತಿಗೆದಾರರು ಕಾಮಗಾರಿ ನಡೆಸಿಲ್ಲ . ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ನಗರಸಭೆಗೆ ಮನವಿ ಮಾಡಿದ್ದೇನೆ. ಶನಿವಾರ ಸಂಜೆ ಪೌರ ಕಾರ್ಮಿ ಕರಿಂದ ಚರಂಡಿಯ ಸ್ವತ್ಛತೆ ನಡೆದಿದೆ. ಪೂರ್ಣ ಕೆಲಸ ಇನ್ನಷ್ಟೇ ಆಗಬೇಕಾಗಿದೆ.
-ಎಡ್ಲಿನ್‌ ಕರ್ಕಡ,
ನಗರಸಭಾ ಸದಸ್ಯೆ, ಮಲ್ಪೆ ಸೆಂಟ್ರಲ್‌ ವಾರ್ಡ್‌

ಪರಿಹಾರಕ್ಕೆ ಕ್ರಮ
ನಗರಸಭಾ ಸದಸ್ಯ ಎಡ್ಲಿನ್‌ ಕರ್ಕಡ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ತಾತ್ಕಾಲಿಕವಾಗಿ ಸರಿಪಡಿಸಲು ಶನಿವಾರ ಪೌರ ಕಾರ್ಮಿಕರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇನೆ. ಮುಂದೆ ಆರೋಗ್ಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗುವುದು. ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಸ್ನೇಹಾ, ಪರಿಸರ ಎಂಜಿನಿಯರ್‌, ಉಡುಪಿ ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next