ಟೇಕಲ್: ಗ್ರಾಮದ ಸುತ್ತಮುತ್ತ ಭಾನುವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಯ ಪಕ್ಕ ಮರಗಳು, ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬಗಳು ಕೆಲವು ಮನೆಯ ಚಾವಣಿಗಳು ಜಖಂ ಆಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.
ಶನಿವಾರ ಸಂಜೆ ಬಿದ್ದ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಕೆಂಪಸಂದ್ರ, ಹಳೇಪಾಳ್ಯ, ಕದಿರೇನಹಳ್ಳಿ, ಬಸಾಪುರ, ಕೊಂಡಶೆಟ್ಟಹಳ್ಳಿ, ಅಗರ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆಗಳು, ಟೊಮೆಟೋ, ಮೆಣಸಿನಕಾಯಿ, ಹುರು ಳಿಕಾಯಿ ನೆಲಕಚ್ಚಿದೆ. ಇನ್ನು ಬಾಳೆ ಗಿಡಗಳ ಎಲೆಗಳು ತೂತು ಬಿದ್ದಿದ್ದು, ಬಾಳೆ ಕಾಯಿ ನೆಲಕಚ್ಚಿದೆ.
ಭಾನುವಾರವೂ ಬಿರುಗಾಳಿ ಮಳೆ ಬಿದ್ದಿದ್ದು, ಟೇಕಲ್ನ ಪಟಾಲಮ್ಮನ ಗುಡಿ ರಸ್ತೆಯಿಂದ ಬಂಗಾರಪೇಟೆ ಹೋಗುವ ರಸ್ತೆಗೆ ಅಡ್ಡವಾಗಿ ಟ್ರಾನ್ಸ್ ಫಾರ್ಮರ್ ಕಂಬ ಬಿದ್ದಿದೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ. ಕೂಗಿಟಗಾನಹಳ್ಳಿಯಲ್ಲಿ ಭಾನುವಾರ ರಾತ್ರಿ 10 ಗಂಟೆಯಲ್ಲಿ ಬೃಹತ್ ಬೇವಿನ ಮರವು ಗ್ರಾಮದ ವೆಂಕಟಮ್ಮನವರ ಮನೆ ಮೇಲೆ ಬಿದ್ದು, ಪಕ್ಕದಲ್ಲಿದ್ದ ಪೆಟ್ಟಿಗೆ ಅಂಗಡಿ ಕೂಡ ಜಖಂ ಆಗಿದೆ. ಅದೃಷ್ಟವಶಾತ್ ಆಕೆ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಇನ್ನೂ ಕೆಲವು ಕಡೆ ಸಂಜೆಯಿಂದ ಬಿರುಗಾಳಿ, ಗುಡುಗು ಸಿಡಿಲಿಗೆ ವಿದ್ಯುತ್ ಏರುಪೇರು ಆಗಿದ್ದು, ಕೆಲವು ಮನೆಗಳಲ್ಲಿ ವಿದ್ಯುತ್ ಅಡಚಣೆಯಾಗಿದೆ. ಕೆಲವು ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಇಲ್ಲದಂತಾಗಿದೆ. ಕಂಬಗಳು ಬಿದ್ದಿರುವುದರಿಂದ ರಾತ್ರಿಯಿಡೀ ಕರೆಂಟ್ ಇಲ್ಲದೆ ಕಗ್ಗತ್ತಲಿನಲ್ಲಿ ಜನ ಕಾಲಕಳೆಯುವಂತಾಗಿತ್ತು. ನಿರಂತರ ಮಳೆ ಬರುತ್ತಿದ್ದರೂ ಇದುವರೆಗೂ ಕೆರೆ, ಕುಂಟೆಗಳಿಗೆ ನೀರು ಹರಿದು ಬಂದಿಲ್ಲ, ಶೇಖರಣೆಯಾಗಿಲ್ಲ, ಸಾಕುಪ್ರಾಣಿ ಮತ್ತು ಕಾಡು ಪ್ರಾಣಿಗಳಿಗೆ ಕುಡಿಯಲು ನೀರಿಲ್ಲವಾಗಿದೆ.