Advertisement

ಯುಜಿಡಿ ಕಾಮಗಾರಿ ವಿಳಂಬಕ್ಕೆ ತೀವ್ರ ಆಕ್ಷೇಪ

11:30 AM Jun 01, 2022 | Team Udayavani |

ಕುಂದಾಪುರ: ಯುಜಿಡಿ ಕಾಮಗಾರಿ ಸಕಾಲದಲ್ಲಿ ಮುಗಿಯಲಿಲ್ಲ. ಹಾಳಾದ ರಸ್ತೆಗಳು ದುರಸ್ತಿಯಾಗಿಲ್ಲ. ಹೇಳಿದ ಕಾಮಗಾರಿಗಳು ಪೂರ್ಣವಾಗಲಿಲ್ಲ. ಆದ್ದರಿಂದ ಯುಜಿಡಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪುರಸಭೆ ಸದಸ್ಯ ಸಂತೋಷ ಕುಮಾರ್‌ ಶೆಟ್ಟಿ ಒತ್ತಾಯಿಸಿದರು.

Advertisement

ಮಳೆಗಾಲಕ್ಕೆ ಕಷ್ಟ

ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಯುಜಿಡಿ ವಿಳಂಬ ಕುರಿತು ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಶ್ರೀಧರ ಶೇರೆಗಾರ್‌, ಅಬ್ಬು ಮಹಮ್ಮದ್‌, ಶೇಖರ ಪೂಜಾರಿ, ಶ್ರೀಕಾಂತ್‌, ಅಶ್ವಿ‌ನಿ ಪ್ರದೀಪ್‌, ರತ್ನಾಕರ್‌, ಪ್ರಭಾಕರ್‌ ವಿ. ಸಮಸ್ಯೆಗಳನ್ನು ಬಿಚ್ಚಿಟ್ಟರು. ಐದು ಬಾರಿ ಮುಖ್ಯಾಧಿ ಕಾರಿಗೆ ಪತ್ರ ಬರೆದರೂ ಉತ್ತರವೂ ಪರಿಹಾರವೂ ಇಲ್ಲ ಎಂದು ಸಂತೋಷ್‌, ಯಾವ ಮೀಟಿಂಗ್‌ನಿಂದಲೂ ಪ್ರಯೋಜನ ಇಲ್ಲ. ಹಾಳಾದ ರಸ್ತೆಯಲ್ಲಿ ಮಳೆಗಾಲ ಹೇಗೆ ಕಳೆಯುವುದು ಎಂದು ಶ್ರೀಧರ್‌, ಶೆಣೈ ಪಾರ್ಕ್‌ ಬಳಿ ರಸ್ತೆ ಇಂಟರ್‌ಲಾಕ್‌ ಹಾಳಾಗಿದೆ ಎಂದು ರತ್ನಾಕರ್‌, ವೆಂಕಟರಮಣ ಶಾಲೆ ಬಳಿ ರಸ್ತೆ ಅಗೆತ ಮಾಡಿದ್ದು ಕೇಳಿದಾಗ ಕೆಲಸಗಾರರು ಉಡಾಫೆ ಮಾತಾಡಿದ್ದಾರೆ ಎಂದು ಅಶ್ವಿ‌ನಿ ಹೇಳಿದರು.

ಯುಜಿಡಿ ಕಾಮಗಾರಿ ಸಂಬಂಧಿಸಿದಂತೆ ಅಧಿಕಾರಿ ಗಳನ್ನು ಕರೆಸಲಾಗಿದ್ದು ಈಗಾಗಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು. ಇನ್ನೂ ಮಾಡಿಲ್ಲ. ತುರ್ತು ಅವಶ್ಯ ಇರುವ ಕಾಮಗಾರಿಯನ್ನು ಪುರಸಭೆಯಿಂದ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಕಾಂಡ್ಲಾವನ ಗೊಂದಲ

Advertisement

ಸಿಎಸ್‌ಐ ಚರ್ಚ್‌ ಬಳಿ ಕಾಮಗಾರಿ ನಡೆಸಲು ಒಂದೂವರೆ ವರ್ಷದಿಂದ ಮನವಿ ನೀಡುತ್ತಿದ್ದರೂ ಸರಿಪಡಿಸಿಲ್ಲ. ಶಾಲಾ ಮಕ್ಕಳು ಸೇರಿದಂತೆ ನೂರಾರು ಮಂದಿ ಓಡಾಡುವ ಜಾಗ ಅದು ಎಂದು ಪ್ರಭಾವತಿ ಶೆಟ್ಟಿ ಹೇಳಿದರು. ಕಾಂಡ್ಲಾವನದಲ್ಲಿ ಕಾಂಡ್ಲಾಗಿಡ ಈವರೆಗೆ ಎಷ್ಟು ನೆಡಲಾಗಿದೆ ಎಂಬ ಮಾಹಿತಿ ಅರಣ್ಯ ಇಲಾಖೆ ನೀಡಿಲ್ಲ ಎಂದು ಚಂದ್ರಶೇಖರ ಖಾರ್ವಿ ಹೇಳಿದರು.

ನದಿ ಬದಿ ನೆಡಲು ಅವಕಾಶ ಕೊಟ್ಟವರು ಯಾರು, 12.5 ಎಕರೆ ನದಿ ದಂಡೆಯಲ್ಲಿ ಹಾಕಲು ಸಾಧ್ಯವೇ. ಒಟ್ಟಾರೆ ಕಾಮಗಾರಿ ಮಾಡಿದ ಕಾರಣ ಮೀನುಗಾರಿಕೆಗೆ ಉಪದ್ರ ಆಗುತ್ತಿದೆ, ಮುಳ್ಳುಮೀನು ಬಂದು ತೊಂದರೆಯಾಗುತ್ತಿದೆ ಎಂದರು.  ಎಲ್ಲ ಕಡೆ ಹಾಕಿಲ್ಲ, ಅವಕಾಶ ಇರುವಲ್ಲಿ ಮಾತ್ರ ಹಾಕಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಉದಯ ಉತ್ತರಿಸಿದರು.

 ಜಲಸಿರಿ ಅವಾಂತರ

ಕೋಡಿಯಲ್ಲಿ ಜಲಸಿರಿ ಕಾಮಗಾರಿ ಅಸಮರ್ಪಕ ಆಗಿದೆ ಎಂದು ಅಶೋಕ್‌, ಚರ್ಚ್‌ ರೋಡ್‌ ವ್ಯಾಪ್ತಿಯಲ್ಲಿ ಸರಿ ನಡೆಯಲಿಲ್ಲ ಎಂದು ಪ್ರಭಾಕರ್‌ ವಿ., ಕಾಮಗಾರಿ ಸರಿಯಾಗಿ ನಡೆಸಲಿಲ್ಲ ಎಂದು ಸಂತೋಷ ಶೆಟ್ಟಿ, ಚರ್ಚ್‌ ರೋಡ್‌ ನಲ್ಲಿ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ ಇದೆ ಎಂದು ರತ್ನಾಕರ್‌ ಹೇಳಿದರು.

ಸದಸ್ಯರು ಹೇಳಿದ ದೂರುಗಳಿಗೆ ಕ್ಷಿಪ್ರ ಸ್ಪಂದಿಸಿ ಎಂದು ಮೋಹನದಾಸ ಶೆಣೈ ಹೇಳಿದರು. ಅರ್ಜಿ ನೀಡಿ ಒಂದೂವರೆ ತಿಂಗಳಾದರೂ ನೀರಿನ ಸಂಪರ್ಕ ನೀಡಿಲ್ಲ ಎಂದು ರಾಘವೇಂದ್ರ ಖಾರ್ವಿ ಹೇಳಿದರು. ಸರಿಯಾದ ರೀತಿ ಕಾಮಗಾರಿ ಮಾಡಿ ಎಂದು ಗೋಪಾಲಕೃಷ್ಣ ಶೆಟ್ಟಿ ಎಂಜಿನಿಯರ್‌ಗೆ ಸೂಚಿಸಿದರು. ಎಂಜಿನಿಯರ್‌ ಹರೀಶ್‌ ನೀಡಿದ ಉತ್ತರ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಅಸಮರ್ಪಕ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್‌ ದೇವಾಡಿಗ ಉಪಸ್ಥಿತರಿದ್ದರು.

ಕಸಕ್ಕೆ ವಿರೋಧ

ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕಸವನ್ನು ಕಂದಾವರದಲ್ಲಿ ಇರುವ ಕುಂದಾಪುರ ಪುರಸಭೆಯ ಕಸ ವಿಲೇ ಘಟಕಕ್ಕೆ ಹಾಕುವ ಪ್ರಸ್ತಾವ ಬಂದಿದೆಯೇ ಎಂದು ಚಂದ್ರಶೇಖರ ಖಾರ್ವಿ ಕೇಳಿದರು. ಮನವಿ ಬಂದಿದೆ, ಈಗಾಗಲೇ 15 ಲೋಡ್‌ ಕಸ ಪ.ಪಂ. ಕಚೇರಿ ಬಳಿ ಸಂಗ್ರಹಿಸಿಡಲಾಗಿದೆ. ಪರಿಶೀಲಿಸಿ ಎಂದು ಡಿಸಿಯಿಂದ ಪತ್ರ ಬಂದಿದೆ ಎಂದು ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಈ ಪ್ರಸ್ತಾವಕ್ಕೆ ಶ್ರೀಧರ ಶೇರೆಗಾರ್‌, ದೇವಕಿ ಸಣ್ಣಯ್ಯ, ಚಂದ್ರಶೇಖರ್‌ ಖಾರ್ವಿ ವಿರೋಧ ಮಾಡಿದರು. ಆಡಳಿತ ಪಕ್ಷದ ಮೋಹನದಾಸ ಶೆಣೈ, ಪುಷ್ಪಾ ಶೇಟ್‌, ಪ್ರಭಾಕರ್‌ ಒಂದು ಬಾರಿ ಕಸ ಹಾಕಬಹುದೇ ಎಂದು ಪರಿಶೀಲಿಸಿ ಎಂದರು.

ಕಂದಾವರ ಘಟಕ ರಚನೆಗೆ ಕೋರ್ಟ್‌, ಸಾರ್ವಜನಿಕರ ವಿರೋಧ, ಚಾಲಕನ ಮೇಲೆ ಹಲ್ಲೆಯಂತಹ ಘಟನೆ‌ ಎದುರಿಸಿದ್ದೇವೆ. ಅವರಿಗೂ ಅನುಭವ ಆಗಲಿ. ಕೋಟೇಶ್ವರದ ಕೊಡಿ ಹಬ್ಬದ ಕಸ ಪಡೆಯುವಾಗಲೇ ಸಾಕಷ್ಟು ವಿಮರ್ಶೆ ಮಾಡಲಾಗಿದೆ. ಹಾಗಿರುವಾಗ ಏಕಾಏಕಿ ಸಾಲಿಗ್ರಾಮದ ಕಸ ಯಾಕೆ ಪಡೆಯಬೇಕು. ಪಡೆದರೆ ನಮ್ಮ ವಿರೋಧ ಇದೆ. ಧರಣಿ ನಡೆಸುತ್ತೇವೆ. ಮುಂದಿನ ಎಲ್ಲ ಅನಾಹುತಗಳಿಗೆ ಅಧ್ಯಕ್ಷರೇ ಜವಾಬ್ದಾರರು ಎಂದು ಚಂದ್ರಶೇಖರ, ಶ್ರೀಧರ್‌ ಹೇಳಿದರು.

ಸುದಿನ ವರದಿ

ಯುಜಿಡಿ ಅವಾಂತರ ಕುರಿತು ಉದಯವಾಣಿ ಸುದಿನ ಪ್ರಕಟಿಸಿದ ವರದಿ ಸಭೆಯಲ್ಲಿ ಚರ್ಚೆಗೆ ಬಂತು. ಕಾಮಗಾರಿ ವಿಳಂಬ ಕುರಿತು ಸದಸ್ಯರು ಕೇಸು ದಾಖಲಿಸುವಂತೆ ಆಗ್ರಹಿಸಿದರು. ‌

 

Advertisement

Udayavani is now on Telegram. Click here to join our channel and stay updated with the latest news.

Next