ಚಿಕ್ಕೋಡಿ: ಮಹಾರಾಷ್ಟ್ರದ ಜಲಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗಡಿ ಭಾಗದ ನದಿಗಳು ಒಡಲುಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಚಿಕ್ಕೋಡಿ ಉಪವಿಭಾಗ ತೀವ್ರ ಕಟ್ಟೆಚರ ವಹಿಸಿದೆ.
ಮಹಾರಾಷ್ಟ್ರದಿಂದ ಜಲಾನಯನ ಪ್ರದೇಶಗಳಾದ ರಾಧಾನಗರಿ, ಪಾಟಗಾಂವ, ಕಾಳಮ್ಮವಾಡಿ ಭಾಗದಲ್ಲಿ ಭಾರಿ ಮಳೆ ಸುರಿಯುವುದರಿಂದ ಕೃಷ್ಣಾ, ದೂಧಗಂಗಾ, ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಮಂಗಳವಾರ ಆರು ಅಡಿಯಷ್ಟು ನೀರು ಏರಿಕೆ ಕಂಡಿದೆ. ಸುಕ್ಷೇತ್ರ ನರಸಿಂಹವಾಡಿ ಹತ್ತಿರ ಪಂಚಗಂಗಾ ನದಿಯಲ್ಲಿಯೂ ಕೂಡಾ ನೀರಿನ ಪ್ರಮಾಣ ಏರಿಕೆ ಕಂಡಿದೆ.
ಈಗಾಗಲೇ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜದಿಂದ ರಾಜ್ಯಕ್ಕೆ 55 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಯಿಂದ 15 ಸಾವಿರ ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಬರುತ್ತಿದ್ದು, ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 64 ಸಾವಿರ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಅಲ್ಲಿಂದ 6850 ಕ್ಯೂಸೆಕ್ ನೀರನ್ನು ಆಲಮಟ್ಟಿಯಿಂದ ಹೊರಬಿಡಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ತಿಳಿಸಿದರು.
ಕಳೆದ ಹತ್ತು ದಿನಗಳಿಂದ ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ಗಡಿ ಭಾಗದಲ್ಲಿಯೂ ಸಹ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದೆ. ಪ್ರತಿ ದಿನ ಹೋಲಿಕೆ ಮಾಡಿದರೇ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುವುದರಿಂದ ಸಂಭವನೀಯ ಪ್ರವಾಹ ಉಂಟಾಗುವುದು ಸಾಧ್ಯತೆ ಹೆಚ್ಚಿದೆ. ಇದರಿಂದ ನದಿ ತೀರದ ಕಡೆಗಳಲ್ಲಿ ತಾಲೂಕಾಡಳಿತ ಪೂರ್ಣ ಪ್ರಮಾಣದ ಕಟ್ಟೆಚರ ವಹಿಸಿದೆ.
ಸೇತುವೆಗಳ ಮೇಲೆ ನಾಲ್ಕು ಅಡಿಯಷ್ಟು ನೀರು: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಾಗಿರುವದರಿಂದ ಕಲ್ಲೋಳ-ಯಡೂರ ಸೇತುವೆ ಜಲಾವೃತಗೊಂಡಿದೆ. ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ ಸೇತುವೆಗಳು ಮುಳುಗಡೆಗೊಂಡಿವೆ. ಎಲ್ಲ ಸೇತುವೆಗಳ ಮೇಲೆ ನಾಲ್ಕ್ತ್ರೈದು ಅಡಿಯಷ್ಟು ನೀರು ಹರಿಯುತ್ತದೆ.
ಮಳೆ ಪ್ರಮಾಣ: ಕೋಯ್ನಾ-95 ಮಿಮೀ, ವಾರಣಾ-154 ಮಿಮೀ, ಕಾಳಮ್ಮವಾಡಿ- 184 ಮಿಮೀ, ನವಜಾ-83 ಸಾಂಗ್ಲೀ-6 ಮಿಮೀ, ರಾಧಾನಗರಿ-130 ಮಿಮೀ, ಪಾಟಗಾಂವ-114 ಮಿಮೀ, ಮಹಾಬಲೇಶ್ವರ-128ಮಿಮೀ, ಕೊಲ್ಲಾಪುರ-18 ಮಿಮೀ ಮಳೆ ಆಗಿದೆ.
ಚಿಕ್ಕೋಡಿ ತಾಲೂಕಿನ ಮಳೆ ವಿವರ: ಚಿಕ್ಕೋಡಿ-1.0 ಮಿಮೀ, ಅಂಕಲಿ-8.6 ಮಿಮೀ, ನಾಗರಮುನ್ನೋಳ್ಳಿ-1.8 ಮಿಮೀ, ಸದಲಗಾ-5.5 ಮಿಮೀ, ಗಳತಗಾ-11.0 ಮಿಮೀ, ಜೋಡಟ್ಟಿ-1.4 ಮಿಮೀ, ನಿಪ್ಪಾಣಿ ಪಿಡಬ್ಲುಡಿ-5.0 ಮಿಮೀ, ನಿಪ್ಪಾಣಿ ಎಆರ್‌ಎಸ್-10.6 ಮಿಮೀ, ಸೌಂದಲಗಾ-17.1 ಮಿಮೀ ಈ ರೀತಿಯಾಗಿ ಮಳೆಯಾಗಿದೆ.