ಕೋಲ್ಕತಾ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ತೀವ್ರ ಚಂಡಮಾರುತವಾಗಿ ಕೇಂದ್ರೀಕೃತಗೊಂಡು ಪಶ್ಚಿಮ ಬಂಗಾಳದ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಖೇಪುಪಾರಾ ನಡುವೆ ಮೇ 26 ರ ಮಧ್ಯರಾತ್ರಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 26 ರಂದು ಗಂಟೆಗೆ 100 ರಿಂದ 110 ಕಿಮೀ ಮತ್ತು ಮೇ 27 ರಂದು ಗಂಟೆಗೆ 90 ರಿಂದ 100 ಕಿಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ನೀಡಲಾಗಿದೆ. ಜತೆಗೆ ಎರಡೂ ದಿನಗಳಲ್ಲಿ ಭಾರಿ ಮಳೆಯಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕೋಲ್ಕತಾ, ಹೌರಾ ಮತ್ತು ಪುರ್ಬಾ ಮೇದಿನಿಪುರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮೇ 26 ರಂದು ಗಂಟೆಗೆ 80 ರಿಂದ 90 ಕಿಮೀ ವೇಗದಲ್ಲಿ ಮತ್ತು ಮೇ 27 ರಂದು ಗಂಟೆಗೆ 70 ರಿಂದ 80 ಕಿಮೀ ವೇಗದಲ್ಲಿ ಗಾಳಿ ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ.
ಕೇರಳದಲ್ಲಿ ಭಾರಿ ಮಳೆ
ಕೇರಳದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿರುವ ಕಾರಣ ರಾಜ್ಯ ಸರ್ಕಾರಿ ಸಂಸ್ಥೆಗಳು ಶುಕ್ರವಾರ ಕಟ್ಟೆಚ್ಚರ ವಹಿಸಿವೆ. ಪತ್ತನಂತಿಟ್ಟ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ದೈನಂದಿನ ವರದಿ ತಿಳಿಸಿದೆ.