Advertisement

ತಾಲೂಕಿನಾದ್ಯಂತ ತೀವ್ರ ಚಳಿ, ವಿಳಂಬವಾಗಿ ಪ್ರಾರಂಭಗೊಂಡ ಚಳಿಗಾಲ

11:36 PM Jan 06, 2020 | Sriram |

ಕಾಂತಾವರ: ಒಂದೆರಡು ದಿನಗಳಿಂದ ಕಾರ್ಕಳ ತಾಲೂಕಿನಾದ್ಯಂತ ಚಳಿಯು ತೀವ್ರ ಗೊಂಡಿದೆ. ಈ ಬಾರಿ ಚಳಿ ಸುಮಾರು 2 ತಿಂಗಳು ವಿಳಂಬವಾಗಿ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಫ‌ಲ ಬಿಡುವ ಮರಗಳಲ್ಲಿ ಹೂವು ಇನ್ನೂ ಬಿಟ್ಟಿಲ್ಲ. ಸಾಮಾನ್ಯವಾಗಿ ಅಕ್ಟೋಬರ್‌ ನವೆಂಬರ್‌ ತಿಂಗಳು ಕಳೆದ ಅನಂತರ ಚಳಿಗಾಲ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಜನವರಿ ಪ್ರಾರಂಭದಲ್ಲಿ ಚಳಿ ಪ್ರಾರಂಭವಾಗಿದ್ದು, ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.

Advertisement

ಗ್ರಾಮೀಣ ಭಾಗಗಳಲ್ಲಿ ಚಳಿಯ ತೀವ್ರತೆ ಹೆಚ್ಚಿರುವುದರಿಂದ ನಗರ ಪ್ರದೇಶಗಳಿಗಿಂತ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ನಷ್ಟ ಸಂಭವಿಸಬಹುದಾಗಿದೆ.

ಚಳಿಗಾಲ ನವೆಂಬರ್‌ ತಿಂಗಳಿನಿಂದ ಪ್ರಾರಂಭಗೊಂಡಿದ್ದಲ್ಲಿ ಈಗಾಗಲೇ ಮಾವು ಗೇರು ಹಲಸು ಹೂ ಬಿಡಬೇಕಾಗಿತ್ತು. ಆದರೆ ಚಳಿಗಾಲ ವಿಳಂಬವಾಗಿರುವುದರಿಂದ ಗೇರು, ಮಾವಿನ ಮರಗಳು ಬರಿದಾಗಿವೆ.

ಮಳೆಗಾಲ ಸಹ ಸುಮಾರು ಒಂದು ತಿಂಗಳು ವಿಳಂಬವಾಗಿ ಜುಲೈ ತಿಂಗಳಲ್ಲಿ ಪ್ರಾರಂಭವಾಗಿ ಡಿಸೆಂಬರ್‌ ಅಂತ್ಯದವರೆಗೂ ತಾಲೂಕಿನ ವಿವಿಧೆಡೆ ಮಳೆ ಸುರಿದ ಪರಿಣಾಮ ಚಳಿ ಇಲ್ಲದಂತಾಗಿತ್ತು.

ಪ್ರಾಕೃತಿಕ ಅಸಮತೋಲನದಿಂದಾಗಿ ಮುಂದಿನ ಮಳೆಗಾಲವು ವಿಳಂಬವಾಗುವ ಬಗ್ಗೆ ರೈತರಲ್ಲಿ ಆತಂಕ ಮೂಡಿದೆ. ಕೆಲವು ರೈತರು ಗೇರು, ಮಾವು ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಈ ಬಾರಿ ಚಳಿ ವಿಳಂಬವಾದ ಪರಿಣಾಮ ಫ‌ಸಲು ಇಲ್ಲದಂತಾಗಿದೆ. ಈಗಷ್ಟೇ ಚಳಿ ಪ್ರಾರಂಭವಾಗಿರುವುದರಿಂದ ಫ‌ಸಲು ಬಿಟ್ಟರೂ ಸಹ ಕೊಯ್ಲಿಗೆ ಬರುವ ಸಂದರ್ಭ ಮಳೆ ಬರುವ ಆತಂಕ ಕೃಷಿಕರನ್ನು ಕಾಡುತ್ತಿದೆ.

Advertisement

ನೆಡುತೋಪು ವಹಿಸಿಕೊಂಡವರಿಗೆ ಸಂಕಷ್ಟ
ಅರಣ್ಯ, ಪಂಚಾಯತ್‌, ಗೇರು ಅಬಿವೃದ್ಧಿ ನಿಗಮದ ಹಲವಾರು ಗೇರು ನೆಡುತೋಪುಗಳು ಕಾರ್ಕಳ ತಾಲೂಕಿನಾದ್ಯಂತ ಇದ್ದು, ಇದರ ಗುತ್ತಿಗೆಯ ಟೆಂಡರ್‌ ಪ್ರಕ್ರಿಯೆಯು ಅಕ್ಟೋಬರ್‌ ನವೆಂಬರ್‌ ತಿಂಗಳಿನಲ್ಲಿಯೇ ನಡೆಯುತ್ತದೆ. ಟೆಂಡರಲ್ಲಿ ನೆಡುತೋಪು ವಹಿಸಿಕೊಂಡವರು ಬೆಳೆಯಿಲ್ಲದೆ ನಷ್ಟ ಅನುಭವಿಸುವಂತಾಗಿದೆ. ಫ‌ಸಲು ವಿಳಂಬವಾಗಿ ಬರುವುದರಿಂದ ಗೇರು ಮಳೆಯಿಂದ ಹಾನಿಗೊಂಡರೆ ಮಾವು ಹುಳ ಬಾಧೆಗೆ ತುತ್ತಾಗುತ್ತದೆ.

ಹಲಸು ಬೆಳೆಯುವ ರೈತರು ಹಲಸಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಹಲಸು ಬೆಳೆ ಇಲ್ಲದೆ ಇರುವುದರಿಂದ ಉತ್ಪನ್ನಗಳನ್ನೇ ಜೀವನ ನಡೆಸುವವರು ತೀವ್ರ ಸಂಕಷ್ಟಕ್ಕೊಳಗಾಗಲಿದ್ದಾರೆ.

ಸಂಕಷ್ಟ
ಮಳೆಗಾಲ ವಿಳಂಬವಾಗಿ ಪ್ರಾರಂಭವಾದ ಕಾರಣ ಚಳಿಗಾಲ ವಿಳಂಬವಾಗಿದೆ. ಈ ರೀತಿಯಾದಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗಿ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ ಎನ್ನುತ್ತಾರೆ ಹಿಂದೆ ನೆಡುತೋಪು ವಹಿಸಿಕೊಳ್ಳುತ್ತಿದ್ದ ಕಾಂತಾವರದ ಜಯ ಎಸ್‌. ಕೋಟ್ಯಾನ್‌.

ಹಾನಿಯಾಗುವ ಸಂಭವ
ತಾಲೂಕಿನಾದ್ಯಂತ ಸುಮಾರು 1,600 ಹೆಕ್ಟೇರ್‌ ಭೂ ಪ್ರದೇಶದಲ್ಲಿ ಗೇರು ಬೆಳೆಯಲಾಗಿದೆ. ಸುಮಾರು 250 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆ ಬೆಳೆಸಲಾಗುತ್ತಿದೆ.ತಾಲೂಕಿನಾದ್ಯಂತ ಬಹುತೇಕ ರೈತರ ಕೃಷಿ ಭೂಮಿಯಲ್ಲಿ ಹಲಸು ಬೆಳೆಯಲಾಗಿದೆ.ತಾಲೂಕಿನಲ್ಲಿ ವಿಳಂಬವಾಗಿ ಮಳೆ ಪ್ರಾರಂಭವಾಗಿ ಡಿಸೆಂಬರ್‌ ವರೆಗೂ ಮಳೆ ಬಿದ್ದ ಪರಿಣಾಮ ತೋಟಗಾರಿಕೆ ಬೆಳೆಗಳಲ್ಲಿ ಹೂ ಬಿಡುವುದು ವಿಳಂಬವಾಗಿದೆ. ಈಗಷ್ಟೇ ಹೂ ಬಿಡಲು ಪ್ರಾರಂಭವಾಗಿದ್ದು ಬೇಸಗೆಯಲ್ಲಿ ಮಳೆ ಬಂದಲ್ಲಿ ಗೇರು ಬೆಳೆಗೆ ಹಾನಿಯಾಗುವ ಸಂಭವವಿದೆ.
-ಶ್ರೀನಿವಾಸ್‌, ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ ಕಾರ್ಕಳ

ಕೈ ಸುಟ್ಟುಕೊಳ್ಳುವಂತಾಗಿದೆ
ಈ ಬಾರಿ ಚಳಿ ವಿಳಂಬವಾಗಿದ್ದು, ಹೂವು ಬಿಡುವಾಗ ವಿಳಂಬವಾಗಿ ಗೇರು ಫ‌ಸಲು ಇಲ್ಲದಂತಾಗಿದೆ. ಟೆಂಡರ್‌ ಮೂಲಕ ಪಡೆದ ಗೇರು ತೋಪಿನಿಂದಾಗಿ ಕೈ ಸುಟ್ಟುಕೊಳ್ಳುವಂತಾಗಿದೆ.
-ಜಗದೀಶ್‌ ಕೆ. ಪೂಜಾರಿ,
ನೆಡುತೋಪು ಗುತ್ತಿಗೆದಾರರು

Advertisement

Udayavani is now on Telegram. Click here to join our channel and stay updated with the latest news.

Next