Advertisement

Chikkaballapur: ಬರದ ಬೆನ್ನಲ್ಲೇ ಫ್ಲೋರೈಡ್‌ ಹೆಚ್ಚಳ ಆತಂಕ

02:39 PM Dec 19, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯ ಪರಿಣಾಮ ಉಲ್ಬಣಿಸಿರುವ ಭೀಕರ ಬರಗಾಲದಿಂದಾಗಿ ಜಿಲ್ಲಾದ್ಯಂತ ಮತ್ತೆ ಫ್ಲೋರೈಡ್‌ ಸಮಸ್ಯೆ ಹೆಚ್ಚಳ ಆತಂಕ ಮನೆ ಮಾಡಿದೆ. ಸತತ 2-3 ವರ್ಷದಿಂದ ಉತ್ತಮ ಮಳೆಯಿಂದಾಗಿ ಅಂತರ್ಜಲವನ್ನು ಅತಿ ಯಾಗಿ ಅವಲಂಬಿಸದ ಕಾರಣ ಫ್ಲೋರೈಡ್‌ ಸಮಸ್ಯೆ ತುಸು ಕಡಿಮೆಯಾಗಿತ್ತು.

Advertisement

ಸದ್ಯ ಜಿಲ್ಲೆಯಲ್ಲಿ ಮಳೆ ಕೊರತೆ ಯಿಂದ ಕೆರೆ, ಕುಂಟೆಗಳಲ್ಲಿ ನೀರು ಖಾಲಿಯಾಗಿ ಮತ್ತೆ ಕೊಳವೆ ಬಾವಿಗಳು ಕಾರ್ಯಾರಂಭ ಮಾಡುತ್ತಿರುವುದರಿಂದ ಜಿಲ್ಲೆಯನ್ನು ದಶಕಗಳ ಕಾಲದಿಂದಲೂ ಬೆನ್ನು ಬಿಡದೇ ಕಾಡುತ್ತಿರುವ ಫ್ಲೋರೈಡ್‌ ಸಂಕಷ್ಟಕ್ಕೆ ಮತ್ತೆ ಜಿಲ್ಲೆ ಜನತೆ ತುತ್ತಾಗುವ ಆತಂಕ ಎದುರಾಗಿದೆ.

ಜಿಲ್ಲೆಯ ಪೈಕಿ ಫ್ಲೋರೈಡ್‌ ಸಮಸ್ಯೆ ಅಧಿಕವಾಗಿರುವ ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ, ಗೌರಿಬಿದನೂರು ತಾಲೂಕು ಗಳಲ್ಲಿ ಮಳೆ ಕೊರತೆ ಯಿಂದಾಗಿ ಈ ತಾಲೂಕು ಗಳಲ್ಲಿ ಕುಡಿವ ನೀರಿನ ಸಮಸ್ಯೆ ಇತರೇ ತಾಲೂಕುಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಹೀಗಾಗಿ ಅಂತರ್ಜಲ ಬಳಕೆಗೆ ಮುಂದಾ ಗುವುದರಿಂದ ಈ ತಾಲೂಕುಗಳಲ್ಲಿ ಕುಡಿವ ನೀರಿನ ಮೂಲಕ ಜನರಿಗೆ ಫ್ಲೋರೈಡ್‌ ಸೇರಿಕೊಳ್ಳುವ ಸಂಕಷ್ಟ ಎದುರಾಗಿದೆ.

ಜಿಲ್ಲೆಯಲ್ಲಿ ಯುರೇನಿಯಂ ಪತ್ತೆ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಲವು ಭಾಗಗಳಲ್ಲಿ ಕ್ಯಾನ್ಸರ್‌ ಸೇರಿ ಮಾರಕ ಕಾಯಿಲೆಗಳಿಗೆ ಕಾರಣವಾಗುವ ಅಪಾಯಕಾರಿ ಯುರೇನಿಯಂ ಧಾತು ಪತ್ತೆಯಾಗಿದೆ. ಜಿಲ್ಲೆಗೆ ಹೆಬ್ಟಾಳ, ನಾಗವಾರ ತ್ಯಾಜ್ಯ ನೀರು ಹರಿಸಿದ ಬಳಿಕ ಶುದ್ಧ ಕುಡಿವ ನೀರಿನ ಭದ್ರತೆ ಇಲ್ಲದೇ ಜಿಲ್ಲೆಯಲ್ಲಿ ನೀರಿನ ಗುಣಮಟ್ಟದ ಬಗ್ಗೆ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಜಿಲ್ಲೆ ಕುಡಿವ ನೀರಿನಲ್ಲಿ ಫ್ಲೋರೈಡ್‌ ಹೆಚ್ಚಾಗಿ ಕಂಡು ಬಂದಿರುವ ಪರಿಣಾಮ ಜಿಲ್ಲೆಯಲ್ಲಿ ಮೂಳೆ ಸವೆತ ಹೆಚ್ಚಾಗಿ ಕೈ ಮಕ್ಕಳು, ವಯೋವೃದ್ಧರಿಗೆ ಕೈ, ಕಾಲುಗಳು ಬಾಗುವಂತಾಗಿದೆ. ಬರದ ಹಿನ್ನೆಲೆ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ ಕಂಡಿದ್ದ ಫ್ಲೋರೈಡ್‌ ಮತ್ತೆ ಹೆಚ್ಚಾಗುವ ಆತಂಕವನ್ನು ಜಿಲ್ಲೆ ಆರೋಗ್ಯ ಇಲಾಖೆ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಫ್ಲೋರೈಡ್‌ ಹೆಚ್ಚಾದಂತೆ ಮಕ್ಕಳಲ್ಲಿ ಫ್ಲೋರೋಸಿಸ್‌ ಕಾಣಿಸಿಕೊಳ್ಳಲಿದೆ.

ಜಿಲ್ಲೆಯಲ್ಲಿ ಹೆಚ್ಚಿದ 5,000 ಅಧಿಕ ಕೊಳವೆ ಬಾವಿಗಳ ಸದ್ದು!:

Advertisement

2-3 ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಅಪಾರ ಪ್ರಮಾಣದ ಮಳೆ ನೀರು ಕೆರೆ, ಕುಂಟೆಗಳಲ್ಲಿ ಶೇಖರಣೆಗೊಂಡು ಅಂತರ್ಜಲವೂ ವೃದ್ಧಿಯಾಗಿತ್ತು. ಆದರೆ ಬಯಲು ಪ್ರದೇಶವಾದ ಜಿಲ್ಲೆಯಲ್ಲಿ ಈ ವರ್ಷ ಮಳೆ ಕೊರತೆಯಿಂದ ಬೀಕರ ಬರಗಾಲ ಆವರಿಸಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಹೀಗಾಗಿ ಕೃಷಿ ಹಾಗೂ ಕುಡಿಯುವ ನೀರಿಗೆ ಮಿತಿ ಮೀರಿ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದು, ಫ್ಲೋರೈಡ್‌ ಅಧಿಕವಾಗಿ ಪತ್ತೆಯಾಗಿದೆ. ಭೂ ವಿಜ್ಞಾನಿಗಳ ಪ್ರಕಾರ ಜಿಲ್ಲೆಯಲ್ಲಿ ಬರದ ಪರಿಣಾಮ ಸ್ಥಗಿತವಾಗಿದ್ದ ಸುಮಾರು 3000ಕ್ಕೂ ಅಧಿಕ ಕೊಳವೆ ಬಾವಿಗಳು ಮತ್ತೆ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯಿದೆ. ಜಿಲ್ಲೆಯಲ್ಲಿ ಒಟ್ಟು 5000ಕ್ಕೂ ಅಧಿಕ ಕೊಳವೆ ಬಾವಿಗಳು ಅಂತರ್ಜಲ ಮೇಲೆತ್ತಲು ಬಳಕೆ ಆಗುತ್ತಿವೆ.

487 ಮಕ್ಕಳ ಪೈಕಿ 238 ಮಕ್ಕಳಲ್ಲಿ ಹಲ್ಲಿನ ಫ್ಲೋರೋಸಿಸ್‌!:

ಕಳೆದ ವರ್ಷ ಜಿಲ್ಲೆಯಲ್ಲಿ ಬರೋಬ್ಬರಿ 486 ಮಕ್ಕಳ ಹಲ್ಲು ಪರೀಕ್ಷೆ ನಡೆಸಿದಾಗ ಆ ಪೈಕಿ 238 ಮಕ್ಕಳಿಗೆ ಹಲ್ಲಿನ ಫ್ಲೋರೋಸಿಸ್‌ ಇರುವುದು ದೃಢಪಟ್ಟಿದೆ. ಮೂತ್ರವನ್ನು ಒಳಗೊಂಡಂತೆ ಈ ಪರೀಕ್ಷೆಯನ್ನು ಆರೋಗ್ಯ ಇಲಾಖೆ ನಡೆಸಿದೆ. ಅಂದರೆ ಸುಮಾರು ಪರೀಕ್ಷೆಗೆ ಒಳಪಟ್ಟ ಅರ್ಧದಷ್ಟು ಮಕ್ಕಳ ಹಲ್ಲುಗಳು ಫ್ಲೋರೋಸಿಸ್‌ಗೆ ತುತ್ತಾಗಿವೆ. ಕುರಿಕುರಿ, ಲೇಸ್‌, ಜಿಂಕ್‌ ಪುಡ್‌ಗಳ ಸೇವನೆಯಿಂದಲೂ ಹಲ್ಲುಗಳಿಗೆ ಫ್ಲೋರೋಸಿಸ್‌ ಬರುತ್ತದೆ ಎಂದರೂ ಜಿಲ್ಲೆಯಲ್ಲಿ ಶುದ್ಧ ಕುಡಿವ ನೀರಿನ ಕೊರತೆಯಿಂದ ಅದರಲ್ಲೂ ಅತಿಯಾದ ಅಂತರ್ಜಲ ಬಳಕೆಯಿಂದಾಗಿ ಫ್ಲೋರೈಡ್‌ ಅಂಶ ಅಧಿಕವಾಗಿ ಫ್ಲೋರೋಸಿಸ್‌ ಕಾಣಿಸಿಕೊಳ್ಳುತ್ತಿದೆ.

ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಆಗುತ್ತಿಲ್ಲವೆಂಬ ಕಳವಳ:

ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಜನರಿಗೆ ಫ್ಲೋರೈಡ್‌ ಮುಕ್ತ ನೀರು ಕೊಡಬೇಕೆಂದು ಶುದ್ಧ ನೀರಿನ ಘಟಕ ಗಳನ್ನು ಅಳವಡಿಸಲಾಗಿದೆ. ಆದರೆ ಅವು ಕಾಲ ಕಾಲಕ್ಕೆ ನಿರ್ವಹಣೆ ಆಗುತ್ತಿಲ್ಲ. ಇವುಗಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಸರಿ ಯಾಗಿ ನಿರ್ವಹಿಸಿದರೆ ಶುದ್ಧ ನೀರು ಕೊಡಬ ಹುದು. ಆ ಮೂಲಕ ಫ್ಲೋರೈಡ್‌ ಸಮಸ್ಯೆ ನಿವಾರಿ ಸಬಹುದು. ಆದರೆ ಶುದ್ಧ ನೀರಿನ ಘಟಕಗಳು ಹೆಸರಿಗೆ ಇದ್ದರೆ ಸಾಲದು. ಅವುಗಳನ್ನು ನಿರ್ವ ಹಣೆ ಮುಖ್ಯ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು. ಜಿಲ್ಲೆಯಲ್ಲಿ 1100ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ನೀರಿನ ಘಟಕಗಳಿವೆ. ಇನ್ನೂ ಜಿಲ್ಲೆಯ ಅರ್ಧದಷ್ಟು ಗ್ರಾಮಗಳಿಗೆ ಘಟಕಗಳನ್ನು ಅಳವಡಿಸಬೇಕೆಂಬ ಬೇಡಿಕೆಯೂ ಇದೆ.

2-3 ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಫ್ಲೋರೈಡ್‌ ಸಮಸ್ಯೆ ಸುಧಾರಿಸಿತ್ತು. ಇದೀಗ  ಬರಗಾಲ ಆವರಿಸಿರುವ ಪರಿಣಾಮ ಮುಂದಿನ ದಿನಗಳಲ್ಲಿ ಫ್ಲೋರೈಡ್‌ ಸಮಸ್ಯೆ ಹೆಚ್ಚಾಗಬಹುದು. 2 ವರ್ಷದಿಂದ ಮಕ್ಕಳಲ್ಲಿ ಫ್ಲೋರೋಸಿಸ್‌ ಸಮಸ್ಯೆ ಗಣನೀಯವಾಗಿ ಕಡಿಮೆ ಆಗಿತ್ತು. ಪರೀಕ್ಷೆಗೆ ಒಳಪಟ್ಟ 487 ಮಕ್ಕಳ ಪೈಕಿ 238 ಮಕ್ಕಳಿಗೆ ಹಲ್ಲಿನ ಫ್ಲೋರೋಸಿಸ್‌ ಕಾಣಿಸಿಕೊಂಡಿತ್ತು.-ವಿನೋದ್‌, ಜಿಲ್ಲಾ ಫ್ಲೋರೋಸಿಸ್‌ ಸಮಾಲೋಚಕರು  

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next