ಲಾಹೋರ್: ಪಾಕಿಸ್ತಾನದ ಟಿ20 ಕ್ರಿಕೆಟ್ ಲೀಗ್ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೆ ಟೂರ್ನಿ ಆರಂಭಕ್ಕೆ ಮುನ್ನವೇ ಸಂಕಷ್ಟ ಎದುರಾಗಿದೆ. ಕೆಲವು ಅಂತಾರಾಷ್ಟ್ರೀಯ ಆಟಗಾರರು ಕೂಟದಿಂದ ಹೊರ ನಡೆದಿದ್ದು, ಲೀಗ್ ಗೆ ತಾರಾ ಆಟಗಾರರ ಕೊರತೆ ಕಾಡಲಿದೆ.
ಫೆಬ್ರವರಿ 17ರಂದು ಲಾಹೋರ್ ನಲ್ಲಿ ಈ ಬಾರಿಯ ಪಿಎಸ್ ಎಲ್ ಕೂಟವು ಆರಂಭವಾಗಲಿದೆ. ಆರು ತಂಡಗಳ ನಡುವೆ ಮುಖಾಮುಖಿ ನಡೆಯಲಿದೆ. ಆದರೆ ಕೆಲ ಆಟಗಾರರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಐಎಲ್ ಟಿ20, ಎಸ್.ಎಟಿ20 ಆಯ್ದುಕೊಂಡ ಕಾರಣ ಪಿಎಸ್ಎಲ್ ಫ್ರಾಂಚೈಸಿಗಳಿಗೆ ಸಂಕಷ್ಟ ಎದುರಾಗಿದೆ.
ಮುಲ್ತಾನ್ ಸುಲ್ತಾನ್ ಫ್ರಾಂಚೈಸಿಯು ಮುಂಬರುವ ಋತುವಿಗಾಗಿ ಆರಂಭದಲ್ಲಿ ಸಹಿ ಹಾಕಿದ್ದ ಹಲವಾರು ಆಟಗಾರರನ್ನು ಕಳೆದುಕೊಂಡಿದೆ. ಇದೀಗ ಇಂಗ್ಲೆಂಡ್ ವೇಗದ ಬೌಲರ್ ರೀಸ್ ಟೋಪ್ಲೆ ಗಾಯದ ಕಾರಣದಿಂದ ಹಿಂದೆ ಸರಿದಿದ್ದಾರೆ. ಟೋಪ್ಲೆಗೆ ಪಿಎಸ್ಎಲ್ ನಲ್ಲಿ ಆಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಅನುಮತಿ ನೀಡಿಲ್ಲ.
ಮುಲ್ತಾನ್ ತಂಡದಲ್ಲಿದ್ದ ಪಾಕ್ ವೇಗಿ ಎಹಸಾನುಲ್ಲಾ ಗಾಯಗೊಂಡು ಹಿಂದೆ ಸರಿದಿದ್ದಾರೆ. ಪೇಶಾವರ್ ಝುಲ್ಮಿ ತಂಡದಿಂದ ಆಫ್ರಿಕಾ ವೇಗಿ ಲುಂಗಿ ಎನ್ಗಡಿ, ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದಿಂದ ಲಂಕಾದ ವಾನಿಂದು ಹಸರಂಗ ಹಿಂದಡಿಯಿಟ್ಟಿದ್ದಾರೆ.
ಅಲ್ಲದೆ ವೆಸ್ಟ್ ಇಂಡೀಸ್ ನ ಶಾಯ್ ಹೋಪ್, ಮ್ಯಾಥ್ಯೂ ಫೋರ್ಡೆ, ಅಕೈಲ್ ಹೊಸೈನ್, ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ಮತ್ತು ವ್ಯಾನ್ ಡರ್ ಡ್ಯೂಸನ್, ಇಂಗ್ಲೆಂಡ್ ನ ಜೇಮ್ಸ್ ವಿನ್ಸ್ ಮತ್ತು ಅಫ್ಗಾನ್ ನ ನೂರ್ ಅಹಮದ್ ಹಾಗೂ ನವೀನ್ ಉಲ್ ಹಕ್ ಕೂಟದಲ್ಲಿ ಆಡುತ್ತಿಲ್ಲ.