ಕಾನ್ಪುರ: ಚಾಲಕ ನಿಯಂತ್ರಣ ತಪ್ಪಿದ ಎಲೆಕ್ಟ್ರಿಕ್ ಬಸ್ಸೊಂದು ಜನರ ಮೇಲೆ ಹರಿದು ಕನಿಷ್ಠ ಆರು ಮಂದಿ ಮೃತಪಟ್ಟು 12ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಕಾನ್ಪುರದಲ್ಲಿ ನಡೆದಿದೆ. ಟಾಟ್ ಮಿಲ್ ಕ್ರಾಸ್ ರಸ್ತೆ ಬಳಿ ಈ ಘಟನೆ ನಡೆದಿದೆ.
ವೇಗವಾಗಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಮತ್ತು ಜನರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂರು ಕಾರುಗಳು ಮತ್ತು ಹಲವು ಬೈಕ್ ಗಳಿಗೆ ಹಾನಿಯಾಗಿದೆ.
ಟ್ರಾಫಿಕ್ ಬೂತ್ ಗೆ ಢಿಕ್ಕಿ ಹೊಡೆದು ನುಗ್ಗಿದ ಬಸ್, ಟ್ರಕ್ಕೊಂದಕ್ಕೆ ಢಿಕ್ಕಿ ಹೊಡೆದ ಕಾರಣ ನಿಂತಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಗಾಂಧಿ ಸಿದ್ದಾಂತ ಕಡಿಮೆಯಾಗಿ, ಗೋಡ್ಸೆ ಸಿದ್ಧಾಂತವು ಪ್ರಬಲವಾಗುತ್ತಿದೆ: ಗಾಂಧಿ ಮರಿ ಮೊಮ್ಮಗ
ಬಸ್ ಚಾಲಕನು ಬಸ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಪೂರ್ವ ಕಾನ್ಪುರ ಡಿಸಿಪಿ ಪ್ರಮೋದ್ ಕುಮಾರ್ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, “ ಕಾನ್ಪುರ ಬಸ್ ಅಪಘಾತ ಸುದ್ದಿ ಕೇಳಿ ಬೇಸರವಾಯಿತು. ಮೃತರ ಕುಟುಂಬಗಳಿಗೆ ಸಂತಾಪ ಕೋರುತ್ತೇನೆ. ಗಾಯಾಳುಗಳು ಬೇಗನೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.