ಹೊಸದಿಲ್ಲಿ: ಯಶ್ ಧುಲ್ ಸಾರಥ್ಯದ ಭಾರತದ ಅಂಡರ್-19 ಕ್ರಿಕೆಟ್ ತಂಡ ಕಿರಿಯರ ಏಕದಿನ ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದು ಈಗ ಇತಿಹಾಸ.
ಆದರೆ ಇದರ ಹಿಂದಿನ ಸಂಕಟವೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್‌ಗೆ ಬಂದಿಳಿದೊಡನೆ ಕೋವಿಡ್ ಲಸಿಕೆ ಪಡೆಯದ 7 ಮಂದಿ ಕ್ರಿಕೆಟಿಗರನ್ನು ಭಾರತಕ್ಕೆ ಮರಳುವಂತೆ ಸೂಚಿಸಲಾಗಿತ್ತಂತೆ!
ಭಾರತ ತಂಡದ ಮ್ಯಾನೇಜರ್, ಸಿಕ್ಕಿಂ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ಜಿ. ಟೆಂಜಿಂಗ್ ಈ ವಿಷಯ ತಿಳಿಸಿದರು.
ಭಾರತ ತಂಡ ಆ್ಯಮ್‌ಸ್ಟರ್ಡಮ್ ಮಾರ್ಗವಾಗಿ ಸುದೀರ್ಘ ಪ್ರಯಾಣದ ಬಳಿಕ ದುಬಾೖಯಿಂದ ಪೋರ್ಟ್ ಆಫ್ ಸ್ಪೇನ್‌ಗೆ ಬಂದಿಳಿದಾಗ ಈ ಘಟನೆ ಸಂಭವಿಸಿತು. ತಂಡದಲ್ಲಿ ಕೊರೊನಾ ಲಸಿಕೆ ಪಡೆಯದ 7 ಆಟಗಾರರನ್ನು ಭಾರತಕ್ಕೆ ಮರಳುವಂತೆ ಅಲ್ಲಿನ ಅಧಿಕಾರಿಗಳು ಸೂಚಿಸಿದರು. ಕೂಟದಲ್ಲಿ ಮಿಂಚಿದ ಎಡಗೈ ಪೇಸರ್ ರವಿ ಕುಮಾರ್, ಓಪನರ್ ಅಂಗ್‌ಕೃಷ್ ರಘುವಂಶಿ ಕೂಡ ಇದರಲ್ಲಿ ಸೇರಿದ್ದರು. ಭಾರತದಲ್ಲಿ ಇನ್ನೂ ಕಿರಿಯರಿಗೆ ಲಸಿಕೆ ನೀಡಲು ಆರಂಭವಾಗಿಲ್ಲ ಎಂದು ಮನದಟ್ಟು ಮಾಡುವ ಪ್ರಯತ್ನವೆಲ್ಲ ವಿಫಲವಾಯಿತು ಎಂದು ಟೆಂಜಿಂಗ್ ಹೇಳಿದರು.
“ವಿಮಾನ ನಿಲ್ದಾಣದ ಭದ್ರತಾ ಸಿಬಂದಿ ಎಲ್ಲಿಗೂ ಹೋಗದಂತೆ ನಮ್ಮನ್ನು ಸುತ್ತುವರಿದಿದ್ದರು. ಆದರೆ ಮುಂದಿನ ವಿಮಾನಕ್ಕೆ ಇನ್ನೂ ಮೂರು ದಿನವಿದ್ದುದರಿಂದ ನಮಗೆ ಸ್ಥಳೀಯ ಆಡಳಿತದೊಂದಿಗೆ, ಬಿಸಿಸಿಐ-ಐಸಿಸಿ ಜತೆ ಪರಿಸ್ಥಿತಿಯನ್ನು ವಿವರಿಸಲು ಸಾಧ್ಯವಾಯಿತು’ ಎಂದರು ಟೆಂಜಿಂಗ್.
ಭಯಾನಕ ಅನುಭವ
ಒಂದು ದಿನ ವಿಮಾನ ನಿಲ್ದಾಣದ ಪಕ್ಕದ ಹೊಟೇಲ್‌ನಲ್ಲಿ ಕಳೆಯಲಾಯಿತು. ಬಳಿಕ ಈ 7 ಆಟಗಾರರನ್ನು ಹೊರತುಪಡಿಸಿ ಉಳಿದವರನ್ನೆಲ್ಲ ವಿಶೇಷ ವಿಮಾನದ ಮೂಲಕ ಗಯಾನಕ್ಕೆ ಕರೆದೊಯ್ಯಲಾಯಿತು. ಟ್ರಿನಿಡಾಡ್ ಸರಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರಕರಣ ಸುಖಾಂತ್ಯ ಕಂಡಿತು. ಒಟ್ಟಾರೆ ಇದೊಂದು ಭಯಾನಕ ಅನುಭವವಾಗಿತ್ತು ಎಂದು ಟೆಂಜಿಂಗ್ ವಿವರಿಸಿದರು.
ಇದನ್ನೆಲ್ಲ ಮೀರಿಯೂ ಭಾರತ ತಂಡ 5ನೇ ಸಲ ಕಿರೀಟ ಏರಿಸಿಕೊಂಡು ಇತಿಹಾಸವನ್ನೇ ಸೃಷ್ಟಿಸಿತು!