Advertisement
ಪ್ರಸ್ತುತ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಹಮ್ಮದ್ ಫಯಾಜ್‌ನ ಕುಟುಂಬದವರು 6 ವರ್ಷಗಳ ಹಿಂದೆ ಮೊದಲ ಬಾರಿ ಆಧಾರ್ ಕಾರ್ಡ್‌ಗೆ ಅರ್ಜಿ ನೋಂದಣಿ ಮಾಡಿದ್ದರು. ಪತಿ- ಪತ್ನಿ, ನಾಲ್ವರು ಮಕ್ಕಳು ಸಹಿತ ಆರು ಜನರ ಫೋಟೋ, ಬಯೋಮೆಟ್ರಿಕ್ ನೀಡಲಾಗಿತ್ತು. ಆನ್‌ಲೈನ್ ಅರ್ಜಿ ಭರ್ತಿ ಮಾಡಿದ್ದರಲ್ಲಿ ಮಹಮ್ಮದ್ ಫಯಾಜ್ ಹೊರತುಪಡಿಸಿ, ಕುಟುಂಬದ ಇತರ ಐವರು ಸದಸ್ಯರಿಗೆ ಕೆಲವೇ ಸಮಯದಲ್ಲಿ ಆಧಾರ್ ಕಾರ್ಡ್ ಗಳು ಬಂದವು.
ಗ್ರಾ.ಪಂ. ಕಚೇರಿಯಲ್ಲಿ ಆಧಾರ್ ನೋಂದಣಿ ಮಾಡಲಾಯಿತು. ಇದಾದ ಬಳಿಕ ಪ್ರಗತಿ ಶಾಲೆಯಲ್ಲಿ 1 ಬಾರಿ, ಪುತ್ತೂರು ಪುರಭವನದ ನೋಂದಣಿ ಕಚೇರಿಯಲ್ಲಿ 2 ಬಾರಿ, ಮಿನಿ ವಿಧಾನಸೌಧದಲ್ಲಿ 1 ಬಾರಿ, ಡಿಸಿಸಿ ಬ್ಯಾಂಕ್ ಸಮೀಪದ ನೋಂದಣಿ ಕೇಂದ್ರದಲ್ಲಿ 1 ಬಾರಿ ನೋಂದಣಿ ಮಾಡಲಾಗಿದೆ. ಮತ್ತೆ ಮತ್ತೆ ಪ್ರಯತ್ನಿಸಿದೆ. ಎ. 28ರಂದು ಏಳನೇ ಬಾರಿಗೆ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಸಿದೆ. ಎರಡು ತಿಂಗಳು ಕಳೆಯುತ್ತ ಬಂದರೂ ಆಧಾರ್ ಕಾರ್ಡ್ ಬರಲಿಲ್ಲ. ಈಗ ನೋಡಿದರೂ ಅದೇ ಉತ್ತರ. ಏನು ಮಾಡುವುದು ಎಂದು ಬಾಲಕನ ತಂದೆ ಅಬ್ದುಲ್ ಹಮೀದ್ ಪ್ರಶ್ನಿಸುತ್ತಾರೆ. ವಿಳಾಸ ಸಹಿತ ಎಲ್ಲ ಮಾಹಿತಿಯೂ ಸರಿಯಾಗಿದೆ. ಏಳು ಬಾರಿ ನೋಂದಣಿ ಮಾಡಿದಾಗ ಸಿಕ್ಕಿದ ಸ್ವೀಕೃತಿಯೂ ಇದೆ. ಕುಟುಂಬದ ಇತರರಿಗೆ ಆಧಾರ್ ಗುರುತಿನ ಚೀಟಿ ಬಂದಿರುವಾಗ ನನ್ನ ಮಗನಿಗೆ ಕೊಡಲು ಏನು ಅಡ್ಡಿ? ಶಾಲೆಯಲ್ಲಿ ಆಧಾರ್ ಕಾರ್ಡ್ ಬೇಕೆಂದು ಹೇಳುತ್ತಿದ್ದಾರೆ. ಅವರಿಗೆ ಸ್ವೀಕೃತಿಯನ್ನಷ್ಟೇ ನೀಡಿದ್ದೇನೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ನೋಂದಣಿ ಸಂಖ್ಯೆ ನೀಡಿದರೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂಬ ಸಲಹೆ ಮಿತ್ರರಿಂದ ಬಂದಿದೆ. ಆ ಪ್ರಯತ್ನವನ್ನೂ ಮಾಡುತ್ತೇವೆ ಎಂದು ಹಮೀದ್ ಹೇಳಿದರು.