Advertisement

ಸನ್ನಡತೆ ಆಧಾರದ ಮೇಲೆ ಏಳು ಕೈದಿಗಳ ಬಿಡುಗಡೆ

05:48 PM Oct 06, 2018 | Team Udayavani |

ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನಾಚರಣೆ ನಿಮಿತ್ತ ನಗರದ ಕೇಂದ್ರ ಕಾರಾಗೃಹದಲ್ಲಿ ಅಲ್ಪಾವಧಿ ಶಿಕ್ಷೆಗೆ ಗುರಿಯಾಗಿದ್ದ ಏಳು ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಯಿತು.

Advertisement

ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ಬಿರಾದಾರ್‌, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಬಿ.ಹಂದ್ರಾಳ್‌, ಜೈಲು ಅಧೀಕ್ಷಕ ಪಿ.ರಂಗನಾಥ್‌ ಸಮ್ಮುಖದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ನೆರೆ ರಾಜ್ಯದ ಏಳು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿತು.
 
ಇದಕ್ಕೂ ಮುನ್ನ ಕೈದಿಗಳ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಸಿ.ಬಿರಾದಾರ್‌, ಮಹಾತ್ಮಗಾಂಧೀಜಿಯವರ  150ನೇ ಜನ್ಮದಿನಾಚರಣೆ ನಿಮಿತ್ತ ಕೇಂದ್ರ ಸರ್ಕಾರ, ದೇಶದ ಎಲ್ಲ ಕಾರಾಗೃಹಗಳಲ್ಲಿ ಅಲ್ಪಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳನ್ನು ಮೂರು ಹಂತದಲ್ಲಿ ಬಿಡುಗಡೆಗೊಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಅಲ್ಪಾವಧಿ ಶಿಕ್ಷೆ ಅನುಭವಿಸುತ್ತಿದ್ದ ಏಳು ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿದೆ ಎಂದು ತಿಳಿಸಿದರು.

ಬಿಡುಗಡೆಯಾಗುವ ಕೈದಿಗಳು ಈ ಹಿಂದೆ ನಡೆದಿರುವ ಕಹಿ ಘಟನೆ ಮರೆತು ಜೈಲಿನಲ್ಲಿ ಅಳವಡಿಸಿಕೊಂಡಿರುವ ಸನ್ನಡತೆಯನ್ನು ಜೀವನದಲ್ಲೂ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ಸಾಗಿಸಬೇಕು. ಕುಟುಂಬದೊಂದಿಗೆ ಸುಖ ಜೀವನ ನಡೆಸಬೇಕು. ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕು ಎಂದು ಕಿವಿಮಾತು ಹೇಳಿದರು. 

ಕಾರಾಗೃಹದ ಅಧೀಕ್ಷಕ ರಂಗನಾಥ ಮಾತನಾಡಿ, ಜೈಲಿನಿಂದ ಬಿಡುಗಡೆಯಾದ ಕೈದಿಗಳನ್ನು ಕೀಳರಿಮೆಯಿಂದ ಕಾಣದೆ, ಅವರಿಗೆ ಸಮಾಜದಲ್ಲಿ ಬದುಕಲು ಮುಕ್ತ ಅವಕಾಶ ಕಲ್ಪಿಸಬೇಕು. ಪಿರಮಿಡ್‌ ಯೋಗ ಕೇಂದ್ರದಿಂದ 41 ದಿನ ತರಬೇತಿ ನೀಡುವ ಮೂಲಕ ಕೈದಿಗಳಲ್ಲಿ ಆಧ್ಯಾತ್ಮಿಕತೆ ಬೆಳೆಸಲಾಗುತ್ತಿದೆ. ಈ ಪೈಕಿ 30 ಕೈದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳಿಗೆ ಬ್ಯಾಂಕ್‌ಗಳಲ್ಲಿ ಜನ್‌ಧನ್‌ ಖಾತೆ ತೆರೆದು, ಜೈಲಲ್ಲಿ ದುಡಿದ ಹಣವನ್ನು ನೇರವಾಗಿ ಅವರ ಖಾತೆಗೆ ಪಾವತಿಸಲಾಗುತ್ತಿದೆ. ಈ ಹಣವನ್ನು ಕೈದಿಗಳು ಬಿಡುಗಡೆಯಾದ ಬಳಿಕ ಬಳಸಿಕೊಳ್ಳಬಹುದು. ಕೇಂದ್ರ ಕಾರಾಗೃಹದಿಂದ ಈವರೆಗೆ ಸನ್ನಡತೆ ಆಧಾರದ ಮೇಲೆ 102 ಕೈದಿಗಳನ್ನು ಬಿಡುಗಡೆ ಮಾಡಿದ್ದು, ಬಿಡುಗಡೆ ಹೊಂದಿದವರಲ್ಲಿ ಇವರೆಗೆ ಯಾರೊಬ್ಬರೂ ಪುನಃ ಜೈಲಿಗೆ ಬಂದಿಲ್ಲ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ, ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಬಿ.ಹಂದ್ರಾಳ್‌, ಪ್ರೊಬೇಷನರಿ ನ್ಯಾ|ಗಂಗಾಧರ್‌, ನಾಗೇಶ್‌, ಜೈಲಿನ ವೈದ್ಯಾಧಿಕಾರಿ ಗುಪ್ತ, ಗಾಂಧಿ ಭವನ ಕಾರ್ಯದರ್ಶಿ ಟಿ.ಜಿ.ವಿಠ್ಠಲ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next