Advertisement

ಏಳು ಮಂದಿ ರೊಹಿಂಗ್ಯಾ ಪ್ರಜೆಗಳ ಬಂಧನ

06:30 AM Feb 16, 2019 | Team Udayavani |

ಬೆಂಗಳೂರು: ನಕಲಿ ಪಾಸ್‌ಪೋರ್ಟ್‌ ಬಳಸಿ ಮಲೇಷ್ಯಾಗೆ ತೆರಳಲು ಸಿದ್ಧರಾಗಿದ್ದ ಇಬ್ಬರು ಮಹಿಳೆಯರು ಸೇರಿ 7 ಮಂದಿ ರೊಹಿಂಗ್ಯಾ ಮುಸ್ಲಿಮರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಜೈಶ್‌ ದಾಳಿ ಹಿನ್ನೆಲೆಯಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಬಿಗಿ ತಪಾಸಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಈ ಹಿಂದೆ ಬರ್ಮಾದಿಂದ ಗಡಿಪಾರಾಗಿದ್ದ ಆಸ್ಮಾ ಬೇಗಂ, ಮಹಮದ್‌  ತಾಹೀರ್‌, ಓಂಕಾರ್‌ ಫಾರೂಕ್‌, ಮಹಮದ್‌ ಹಾಲೆಕ್‌, ರೆಹನಾ ಬೇಗಂ, ಮಹಮದ್‌ ಮುಸ್ತಾಫ‌, ರಜತ್‌ ಮಂಡಲ್‌ ಬಂಧಿತ ಆರೋಪಿಗಳು. ಈ ಏಳೂ ಮಂದಿ ಹಲವು ವರ್ಷಗಳಿಂದ ಹೈದ್ರಾಬಾದ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದರು.

ಇತ್ತೀಚೆಗೆ ಭಾರತದ ಪ್ರಜೆಗಳು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್‌ ಹಾಗೂ ವೀಸಾ ಪಡೆದುಕೊಂಡಿದ್ದರು. ಗುರುವಾರ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಲೇಷ್ಯಾಗೆ ಪ್ರಯಾಣ ಬೆಳೆಸಲು ಬಂದಿದ್ದಾರೆ ಎಂಬ ಬಗ್ಗೆ ಕೇಂದ್ರ ಗುಪ್ತಚರ ದಳ ನೀಡಿದ ಮಾಹಿತಿ ಬೆನ್ನಲ್ಲೇ ಗುರುವಾರ ಸಿಸಿಬಿ ವಿಶೇಷ ತಂಡ ಹಾಗೂ ವಲಸೆ ಅಧಿಕಾರಿಗಳು (ಇಮಿಗ್ರೇಶನ್‌) ವಶಕ್ಕೆ ಪಡೆದುಕೊಂಡಿದ್ದಾರೆ.

ಏಳೂ ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್‌ ಹಾಗೂ ವೀಸಾ ಪಡೆದಿದ್ದಾರೆ ಎಂಬ ಅಂಶ ವಿಚಾರಣೆ ವೇಳೆ ತಿಳಿದುಬಂದಿದ್ದರಿಂದ ಅವರನ್ನು ಬಂಧಿಸಲಾಯಿತು. ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಮಗನೇ ನಕಲಿ ದಾಖಲೆ ಸೃಷ್ಟಿಸಿದ: ಆರೋಪಿಗಳಾದ ಆಸ್ಮಾ ಬೇಗಂ, ಆಕೆಯ ಪುತ್ರಿ ರಹೇನಾ ಬೇಗಂ ಮತ್ತು ಪುತ್ರ ಹಾಲೆಕ್‌, ಎಂಟು ವರ್ಷಗಳ ಹಿಂದೆ ಬರ್ಮಾದಿಂದ ಗಡಿಪಾರಾಗಿದ್ದರು. ತಮ್ಮಂತೆ ಗಡಿಪಾರಾಗಿದ್ದ ಇತರರ ಜತೆ ಸೇರಿ ಕೊಲ್ಕತ್ತಾದಲ್ಲಿ ನೆಲೆಸಿದ್ದ ಇವರು, ಕ್ರಮೇಣ ಹೈದ್ರಾಬಾದ್‌ಗೆ ಸ್ಥಳಾಂತರಗೊಂಡಿದ್ದರು.

Advertisement

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ರೊಹಿಂಗ್ಯಾ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಮೆಹಬೂಬ್‌ ಕಾಲೋನಿಯಲ್ಲಿ ವರೆಲ್ಲರೂ ವಾಸವಿದ್ದರು. ಈ ಹಿಂದೆ ಮಲೆಷ್ಯಾಗೆ ತೆರಳಿದ್ದ ಸಂಬಂಧಿಕರೊಬ್ಬರು, ಅಲ್ಲಿಗೆ ಬರುವಂತೆ ಆರೋಪಿಗಳಿಗೆ ಆಹ್ವಾನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಹಾಲೆಕ್‌, ತಾವು ಏಳೂ ಮಂದಿ ಭಾರತೀಯ ಪ್ರಜೆಗಳು ಎಂದು ನಂಬಿಸಲು ಆಧಾರ್‌ ಕಾರ್ಡ್‌ ಸೇರಿ ಇನ್ನಿತರೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಬಳಿಕ ಏಜೆಂಟರ ಮೂಲಕ ಪಾಸ್‌ಪೋರ್ಟ್‌ ಹಾಗೂ ವೀಸಾ ಪಡೆದುಕೊಂಡು ಮಲೇಷ್ಯಾದ ಕೌಲಾಲಂಪುರಕ್ಕೆ ತೆರಳುವ ಯೋಜನೆ ಹೊಂದಿದ್ದರು.

ಅದರಂತೆ ಹೈದ್ರಾಬಾದ್‌ ಮೂಲಕ ಪ್ರಯಾಣಿಸಿದರೇ ಸಿಕ್ಕಿಬೀಳುತ್ತೇವೆ ಎಂಬ ಉದ್ದೇಶದಿಂದ ಬೆಂಗಳೂರಿನಿಂದ ಪ್ರಯಾಣ ಬೆಳೆಸಲು ಸಜ್ಜಾಗಿದ್ದರು. ಹೀಗಾಗಿ ದೇವನಹಳ್ಳಿ ಏರ್‌ಪೋರ್ಟ್‌ಗೆ ಆಗಮಿಸಿದ್ದರು.ಆರೋಪಿಗಳ ಬಳಿ ವೀಸಾ ಪಾಸ್‌ ಪೋರ್ಟ್‌ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಆರೋಪಿಗಳ ಪೂರ್ವಾಪರ, ಅವರು ಈ ಹಿಂದೆ ನಡೆಸಿರಬಹುದಾದ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಜತೆಗೆ, ಅವರಿಗೆ ಪಾಸ್‌ಪೋರ್ಟ್‌ ಮಾಡಿಕೊಟ್ಟಿರುವ ಅಬ್ದುಲ್‌ ಅಲೀಮ್‌ ಹಾಗೂ ಇತರೆ ಏಜೆಂಟರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗಡಿಪಾರು: ಏಳು ಮಂದಿ ಆರೋಪಿಗಳನ್ನು ಹೈದ್ರಾಬಾದ್‌ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ದಳ  ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ.ಸದ್ಯ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು. ಕೊಲ್ಕತ್ತಾ ಹಾಗೂ ಹೈದ್ರಾಬಾದ್‌ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು.

ರೊಹಿಂಗ್ಯಾ ಮುಸ್ಲಿಂರನ್ನು ಗಡಿಪಾರು ಮಾಡುವ ವಿಚಾರದ ಬಗ್ಗೆ ಕೇಳುತ್ತಿದ್ದೆವು. ಹೀಗಾಗಿ ಕೌಲಾಲಂಪುರದಲ್ಲಿರುವ ಸಂಬಂಧಿಕರ ಸಲಹೆ ಮೇರೆಗೆ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆವು ಎಂದು ಹೇಳುತ್ತಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next