Advertisement

ಗಾಂಜಾ, ಚರಸ್‌ ಮಾರುತ್ತಿದ್ದ ನೆರೆರಾಜ್ಯಗಳ ಏಳು ಮಂದಿ ಬಂಧನ

11:36 AM Nov 15, 2017 | Team Udayavani |

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಚರಸ್‌ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ನೆರೆರಾಜ್ಯಗಳ ಏಳು ಮಂದಿಯನ್ನು ಆಗ್ನೇಯ ವಿಭಾಗದ ಮೈಕೋ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಿಹಾರದ ರಾಹುಲ್‌ ಕುಮಾರ್‌(24), ರಾಮ್‌ದೀನ್‌ ಜಾಧವ್‌(26), ಶ್ಯಾಮ್‌ ಕುಮಾರ್‌ ಯಾದವ್‌(21),  ಉತ್ತರ ಪ್ರದೇಶದ ದಾನೇಶ್‌(23), ಶಬ್ಬು(23) ಹಾಗೂ ಕೇರಳ ಮೂಲದ ಮೊಹಮ್ಮದ್‌ ಅಶ್ರಫ್ (25), ರಾಜೇಶ್‌(24) ಬಂಧಿತರು. ಆರೋಪಿಗಳಿಂದ 22 ಕೆ.ಜಿ.ಗಾಂಜಾ ಹಾಗೂ 100 ಗ್ರಾಂ ಚರಸ್‌ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಹಾರ ಮತ್ತು ಉತ್ತರಪ್ರದೇಶ ಮೂಲದ ಆರೋಪಿಗಳು ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಮಾರತ್‌ಹಳ್ಳಿ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಪೇಟಿಂಗ್‌, ಕಾರು ಚಾಲನೆ ಹಾಗೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದರ ಜತೆಗೆ ರಾಹುಲ್‌ ಕುಮಾರ್‌ ಸಿಂಗಸಂದ್ರದ ದಿಲೀಪ್‌ ಎಂಬಾತನ ಮೂಲಕ ಬಿಹಾರದಿಂದ ರೈಲಿನಲ್ಲಿ ಗಾಂಜಾವನ್ನು ತರಿಸುತ್ತಿದ್ದ.

ನಂತರ ಇದನ್ನು 10, 50 ಮತ್ತು 100 ಗ್ರಾಂ ತೂಕದಲ್ಲಿ ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನು ಮಾಡಿ ಪರಿಚಯಸ್ಥರು, ತಮ್ಮ ರಾಜ್ಯದ ಬೀಡಾ ಸ್ಟಾಲ್‌ಗ‌ಳಲ್ಲಿ ಮಾರಾಟ ಮಾಡಿಸುತ್ತಿದ್ದರು. ಸ್ಟಾಲ್‌ಗ‌ಳಿಗೆ ಕಮಿಷನ್‌ ನೀಡುತ್ತಿದ್ದರು. ಜೊತೆಗೆ ವಿದ್ಯಾರ್ಥಿಗಳಿಗೂ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಮತ್ತೂಂದು ಪ್ರಕರಣದಲ್ಲಿ ಬಂಧಿತರಾಗಿರುವ ಕೇರಳದ ಕಣ್ಣೂರು ಮೂಲದ ಆರೋಪಿಗಳಾದ ಮೊಹಮ್ಮದ್‌ ಅಶ್ರಫ್ ಮತ್ತು ರಾಜೇಶ್‌ ಬಾಬುಸಾಬ್‌ ಪಾಳ್ಯದಲ್ಲಿ ನಲೆಸಿದ್ದು, ಕಾರು ಚಾಲನೆ ಹಾಗೂ ಇತರೆ ಕೆಲಸ ಮಾಡಿಕೊಂಡಿದ್ದಾರೆ. ಈ ಪೈಕಿ ರಾಜೇಶ್‌ ತನಗೆ ಪರಿಚಯವಿರುವ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ವ್ಯಕ್ತಿಯಿಂದ ಗಾಂಜಾ ಮತ್ತು ಚರಸ್‌ ಅನ್ನು ನಗರಕ್ಕೆ ತರಿಸುತ್ತಿದ್ದ.

Advertisement

ಬಳಿಕ ಅಶ್ರಪ್‌ ಮನೆಯಲ್ಲಿ ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಕೇರಳ ಮೂಲದ ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್‌ ಎಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು. ಅಲ್ಲದೇ ಸಾರ್ವಜನಿಕವಾಗಿ ಪಾರ್ಕ್‌, ಬಸ್‌ ನಿಲ್ದಾಣ ಇತರೆಡೆ ಮಾದಕ ವಸ್ತು ವ್ಯಸನಿಗಳನ್ನು ಪತ್ತೆಹಚ್ಚಿ ಅವರಿಗೆ ಮಾರುತ್ತಿದ್ದರು.ಇತ್ತೀಚೆಗೆ ಆರೋಪಿಗಳು ಮೈಕೋ ಲೇಔಟ್‌ನ ಮಡಿವಾಳ ಕೆರೆಯ ಬಳಿ ಗಾಂಜಾ ಮಾರುತ್ತಿದ್ದಾಗ ಎಲ್ಲ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ ಎಂದು ಸುನೀಲ್‌ ಕುಮಾರ್‌ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಆಗ್ನೇಯ ವಿಭಾಗದ ಡಿಸಿಪಿ ಡಾ ಬೋರಲಿಂಗಯ್ಯ, ಮೈಕೋ ಲೇಔಟ್‌ ಉಪವಿಭಾಗದ ಎಸಿಪಿ ಕರಿಬಸವನಗೌಡ ಮತ್ತು ಮೈಕೋಲೇಔಟ್‌ ಠಾಣೆ ಪಿಐ ಅಜಯ್‌ ಇತರೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next