Advertisement

ಕರಾವಳಿಯ ಏಳು ಸ್ಥಳೀಯ ಸಂಸ್ಥೆ ಗೆದ್ದವರಿಗೆ ಇನ್ನೂ ಸಿಗದ ಗದ್ದುಗೆ!

01:04 AM Aug 30, 2019 | Sriram |

ಮಂಗಳೂರು: ಕರಾವಳಿಯ ಒಟ್ಟು ಏಳು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಆ.31ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಆದರೆ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಆಗದೆ ಜನಪ್ರತಿಧಿಗಳ ಆಡಳಿತ ಮರೀಚಿಕೆಯಾಗಿದೆ.

Advertisement

ಉಳ್ಳಾಲ ನಗರ ಸಭೆ, ಬಂಟ್ವಾಳ ಪುರಸಭೆ, ಪುತ್ತೂರು ನಗರಸಭೆ, ಉಡುಪಿ ನಗರ ಸಭೆ, ಸಾಲಿಗ್ರಾಮ ಪ. ಪಂ., ಕಾರ್ಕಳ ಪುರಸಭೆ, ಕುಂದಾಪುರ ಪುರಸಭೆಗೆ ಕಳೆದ ವರ್ಷ ಆ.31ರಂದು ಚುನಾವಣೆ ನಡೆದು, ಸೆ.3ರಂದು ಫಲಿತಾಂಶ ಪ್ರಕಟವಾಗಿತ್ತು.

ಅದೇ ವೇಳೆ ಸರಕಾರ ಮೀಸಲಾತಿ ಪ್ರಕಟಿಸಿತ್ತಾ ದರೂ ಅದನ್ನು ಪ್ರಶ್ನಿಸಿ ಕೆಲವರು ನ್ಯಾಯಾ ಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅಧ್ಯಕ್ಷ-ಉಪಾಧ್ಯಕ್ಷ ನೇಮಕಾತಿಗೆ ತಡೆಯಾಜ್ಞೆ ನೀಡಿತ್ತು.

ಕರಾವಳಿಯಲ್ಲಿ ನೆರೆ ಪ್ರವಾಹದಿಂದ ಜನರು ಸಮಸ್ಯೆಗೀಡಾಗಿದ್ದರೂ ಜನಪ್ರತಿನಿಧಿಗಳು ಸೂಕ್ತ ಅಧಿಕಾರವಿಲ್ಲದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೀಸಲಾತಿ ವಿಚಾರದಲ್ಲಿ ಎಚ್ಚರಿಕೆಯ ಕಾನೂನು ಹೆಜ್ಜೆಗಳನ್ನು ಇಡಬೇಕಿದ್ದ ಸರಕಾರ ಮಾತ್ರ ಈ ವಿಚಾರದಲ್ಲಿ ಇಲ್ಲಿಯವರೆಗೂ ಮೌನವಾಗಿದ್ದುದು ಯಾಕೆ ಎಂಬುದು ಈ ಜನಪ್ರತಿನಿಧಿಗಳ ಪ್ರಶ್ನೆ.

ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ 5 ವರ್ಷ, ಇದರಲ್ಲಿ ಒಂದು ವರ್ಷ ಅಧಿಕಾರವಿಲ್ಲದೆ ಪೂರ್ಣವಾಗಿದೆ. ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ ಆರಂಭವಾಗುವ
ದಿನದಿಂದ 5 ವರ್ಷ ಆಡಳಿತಾವಕಾಶ ಸಿಗಲಿದೆ ಎಂಬುದು ತಜ್ಞರ ಅಭಿಪ್ರಾಯ.

Advertisement

ಕಾರಣವೇನು?
ರಾಜ್ಯದ ನೂರಕ್ಕೂ ಹೆಚ್ಚಿನ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ನಗರಸಭೆ, ಪುರಸಭೆ ಮತ್ತು ಪ.ಪಂ.ಗಳಿಗೆ ಮೊದಲ ಹಂತದ ಚುನಾವಣೆ ಕಳೆದ ವರ್ಷ ಆ.31ಕ್ಕೆ ನಡೆದಿತ್ತು. ಚುನಾವಣೆಗೂ ಮುನ್ನವೇ ಅಂದಿನ ಸರಕಾರ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿತ್ತು.

ಚುನಾವಣೆ ಬಳಿಕ ಇದರಲ್ಲಿ ಬದಲಾವಣೆ ಮಾಡಲಾಗಿತ್ತು. ಆಗ ಅಪೇಕ್ಷಿತರಾಗಿದ್ದವರು ನ್ಯಾಯಾಲಯದ ಮೊರೆ ಹೊಕ್ಕರು. ಪರಿಣಾಮವಾಗಿ ಮೀಸಲಾತಿಗೆ ತಡೆಯಾಜ್ಞೆ ದೊರಕಿತ್ತು. ಸರಕಾರ ಮರುಪರಿಶೀಲನೆ ಮೀಸಲಾತಿ ಪ್ರಕಟಿಸಿರುವುದನ್ನೂ ಕೆಲವರು ಪ್ರಶ್ನಿಸಿದ್ದರಿಂದ ನ್ಯಾಯಾಲಯದಲ್ಲಿ ಈ ವಿಚಾರ ವಿಚಾರಣೆಯಲ್ಲೇ ಬಾಕಿಯಾಗಿದೆ.

ರಾಜ್ಯಾದ್ಯಂತ ಅತಂತ್ರ ಸ್ಥಿತಿ
ಕರಾವಳಿಯಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಇದೇ ಅತಂತ್ರ ಪರಿಸ್ಥಿತಿ ಇದೆ. ಮೂರು ಮಹಾನಗರ ಪಾಲಿಕೆಗಳು, 29 ನಗರಸಭೆ, 53 ಪುರಸಭೆ ಮತ್ತು 20 ಪ.ಪಂ. ಸಹಿತ 105 ನಗರ ಸ್ಥಳೀಯಾಡಳಿತ ಸಂಸ್ಥೆಗಳು ಜನಪ್ರತಿನಿಧಿಗಳ ಆಡಳಿತ ಕಾಣದೆ ವರ್ಷ ಕಳೆದಿದೆ. ಹೀಗಾಗಿ ಆಯ್ಕೆಯಾದ ಸದಸ್ಯರಿಗೆ ಸಂಪೂರ್ಣ ಅಧಿಕಾರವಿಲ್ಲವಾಗಿದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯದಿರುವುದರಿಂದ ಎಲ್ಲ ಕಡೆ ಅಧಿಕಾರಿಗಳದ್ದೇ ಆಡಳಿತ ನಡೆಯುತ್ತಿದೆ. ತಮ್ಮ ವಾರ್ಡ್‌ಗಳ ಸಮಸ್ಯೆಯ ಕುರಿತು ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಮತ್ತು ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಆರೋಪ ಕೂಡ ಇದೆ. ಜತೆಗೆ ಚುನಾಯಿತ ಸದಸ್ಯರಿಗೆ ಆಯ್ಕೆಯಾದ ಹೊಸತರಲ್ಲಿ ಹೊಸ ಯೋಜನೆ, ಯೋಚನೆಗಳನ್ನು ಕಾರ್ಯಗತಗೊಳಿಸುವ ಹುಮ್ಮಸ್ಸಿರುತ್ತದೆ. ಆದರೆ ಅಧಿಕಾರವಿಲ್ಲದೆ ವರ್ಷ ಕಳೆದು ಉತ್ಸಾಹ ಮಾಯವಾಗಿದೆ.

ಶೀಘ್ರ ಇತ್ಯರ್ಥವಾಗುವ ನಿರೀಕ್ಷೆ
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಮೀಸಲಾತಿ ಕುರಿತು ನ್ಯಾಯಾ ಲಯದಲ್ಲಿರುವ ಕಾನೂನು ತೊಡಕುಗಳನ್ನು ಸರಿಪಡಿಸುವ ನೆಲೆಯಲ್ಲಿ ಕಾನೂನು ತಜ್ಞರ ಜತೆಗೆ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಕಾನೂನು ಇಲಾಖೆಯಿಂದ ಸಭೆ ಕೂಡ ನಡೆಸಲಾಗಿದೆ. ಶೀಘ್ರದಲ್ಲಿ ಮೀಸಲಾತಿ ಕುರಿತಂತೆ ಎದುರಾಗಿರುವ ಸಮಸ್ಯೆ ಇತ್ಯರ್ಥವಾಗುವ ನಿರೀಕ್ಷೆಯಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು

ಸ್ಥಳೀಯ ಸಂಸ್ಥೆಗಳ ಬಲಾಬಲ
ಉಳ್ಳಾಲ ನಗರಸಭೆ: ಒಟ್ಟು 31 ಸ್ಥಾನಗಳ ಪೈಕಿ 6 ಬಿಜೆಪಿ, 13 ಕಾಂಗ್ರೆಸ್‌, 4 ಜೆಡಿಎಸ್‌, 6 ಎಸ್‌ಡಿಪಿ, ಇಬ್ಬರು ಇತರರು.
ಬಂಟ್ವಾಳ ಪುರಸಭೆ: ಒಟ್ಟು 27 ಸ್ಥಾನಗಳ ಪೈಕಿ 11 ಬಿಜೆಪಿ, 12 ಕಾಂಗ್ರೆಸ್‌, 4 ಎಸ್‌ಡಿಪಿಐ.
ಪುತ್ತೂರು ನಗರ ಸಭೆ: ಒಟ್ಟು 31 ಸ್ಥಾನಗಳ ಪೈಕಿ 25 ಬಿಜೆಪಿ, 5 ಕಾಂಗ್ರೆಸ್‌, 1 ಎಸ್‌ಡಿಪಿಐ.
ಉಡುಪಿ ನಗರಸಭೆ: ಒಟ್ಟು 35 ಸ್ಥಾನಗಳ ಪೈಕಿ 31 ಬಿಜೆಪಿ, 4 ಕಾಂಗ್ರೆಸ್‌.
ಸಾಲಿಗ್ರಾಮ ಪ. ಪಂ.: ಒಟ್ಟು 16 ಸ್ಥಾನಗಳ ಪೈಕಿ 10 ಬಿಜೆಪಿ, 5 ಕಾಂಗ್ರೆಸ್‌, 1 ಇತರ.
ಕಾರ್ಕಳ ಪುರಸಭೆ: ಒಟ್ಟು 23 ಸ್ಥಾನಗಳ ಪೈಕಿ 11 ಬಿಜೆಪಿ, 11 ಕಾಂಗ್ರೆಸ್‌, 1 ಇತರ.
ಕುಂದಾಪುರ ಪುರಸಭೆ: ಒಟ್ಟು 23 ಸ್ಥಾನಗಳ ಪೈಕಿ 14 ಬಿಜೆಪಿ, 8 ಕಾಂಗ್ರೆಸ್‌, 1 ಇತರ.

ದಿನೇಶ್‌ ಇರಾ/ ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next